ಪುತ್ರನ ಪರವಾಗಿ ಪ್ರಚಾರಕ್ಕಿಳಿದ ಭವಾನಿ ರೇವಣ್ಣ

| Published : Mar 12 2024, 02:01 AM IST

ಸಾರಾಂಶ

ಹಾಸನ ಲೋಕಸಭಾ ಕ್ಷೇತ್ರದಿಂದ ಪುತ್ರ ಮತ್ತು ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಸಿಗೋದು ಖಾತ್ರಿಯಾಗುತ್ತಿದ್ದಂತೆ ಭವಾನಿ ರೇವಣ್ಣ ತಮ್ಮ ಪುತ್ರನ ಪರವಾಗಿ ಪ್ರಚಾರ ಆರಂಭಿಸಿದ್ದಾರೆ.

ಬದ್ಧವೈರಿಯಂತಿದ್ದ ಶಾಸಕ ಎ.ಮಂಜು ಮನೆಗೆ ಪುತ್ರನೊಂದಿಗೆ ಭೇಟಿ । ಎಂಪಿ ಚುನಾವಣೆ ಕುರಿತು ಸಮಾಲೋಚನೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ಹಾಸನ ಲೋಕಸಭಾ ಕ್ಷೇತ್ರದಿಂದ ಪುತ್ರ ಮತ್ತು ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಸಿಗೋದು ಖಾತ್ರಿಯಾಗುತ್ತಿದ್ದಂತೆ ಭವಾನಿ ರೇವಣ್ಣ ತಮ್ಮ ಪುತ್ರನ ಪರವಾಗಿ ಪ್ರಚಾರ ಆರಂಭಿಸಿದ್ದಾರೆ.

ಮಾಜಿ ಪ್ರಧಾನಿ ಎಚ್. ಡಿ. ರೇವಣ್ಣ ಅವರ ರಾಜಕೀಯ ವೈರಿಯೆಂದು ಗುರುತಿಸಿಕೊಂಡಿದ್ದ ಶಾಸಕ ಎ. ಮಂಜು, ಜೆಡಿಎಸ್ ಪಕ್ಷ ಸೇರ್ಪಡೆಯಾಗಿ ಶಾಸಕರಾಗಿರುವ ಎ. ಮಂಜು ಅವರ ನಿವಾಸಕ್ಕೆ ಭವಾನಿ ರೇವಣ್ಣ ಮತ್ತು ಪ್ರಜ್ವಲ್ ಭಾನುವಾರ ಭೇಟಿ ನೀಡಿ, ಗೆಲುವಿಗಾಗಿ ಶ್ರಮಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ಅರಕಲಗೂಡು ತಾಲೂಕು ಹನ್ಯಾಳು ನಿವಾಸದಲ್ಲಿ ಶಾಸಕ ಎ.ಮಂಜು ಅವರನ್ನು ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಜತೆಗೂಡಿ ಭೇಟಿ ಮಾಡಿದ ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರದ ಶಾಸಕ ಸ್ವರೂಪ್ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಸಾಥ್ ನೀಡಿದ್ದರು. ಕೆಲ ತಿಂಗಳ ಹಿಂದೆ ಅರಕಲಗೂಡಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಎ. ಮಂಜು ಹಾಸನ ಲೋಕಸಭಾ ಕ್ಷೇತ್ರದಿಂದ ಎಚ್.ಡಿ‌.ದೇವೇಗೌಡರು ಸ್ಪರ್ಧಿಸಬೇಕು ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಜೆಡಿಎಸ್ ಸರ್ಕಾರದ ಅವಧಿ ಹಾಗೂ ಲೋಕಸಭಾ ಸದಸ್ಯರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಗೈರಾಗಿದ್ದರು. ಕಾಂಗ್ರೆಸ್ ನಲ್ಲಿದ್ದಾಗ ಈಗ ಕಾಂಗ್ರೆಸ್ ಪಪಕ್ಷದ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ಕುಟುಂಬಕ್ಕೆ ಎ.ಮಂಜು ಬೆಂಬಲವಾಗಿ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರ ಭೇಟಿ ಮಹತ್ವ ಪಡೆದಿದೆ. ಪುತ್ರನ ಗೆಲುವಿಗೆ ಶ್ರಮಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ತಮ್ಮ ನಿವಾಸಕ್ಕೆ ಆಗಮಿಸಿದ ಎಲ್ಲರನ್ನೂ ಎ.ಮಂಜು ಸನ್ಮಾನಿಸಿ, ಆದರಾತಿಥ್ಯ ತೋರಿದರು. ಕಾರ್ಯಕರ್ತರ ಸಭೆ ಆಯೋಜನೆಗೂ ಮುನ್ನ ಭವಾನಿ ಅವರ ಭೇಟಿ ಕುತೂಹಲ ಮೂಡಿಸಿದೆ

ಎಚ್‌.ಡಿ.ರೇವಣ್ಣ-ಎ.ಮಂಜು ಬದ್ಧ ವೈರಿಗಳು:ಜಿಲ್ಲೆಯ ರಾಜಕೀಯ ಇತಿಹಾಸವನ್ನೊಮ್ಮೆ ತಿರುಗಿ ನೋಡಿದಾಗ ಇಷ್ಟು ವರ್ಷಗಳ ಉದ್ದಕ್ಕೂ ಜೆಡಿಎಸ್‌ ನಾಯಕರಾದ ಎಚ್‌.ಡಿ.ರೇವಣ್ಣ ಹಾಗೂ ಎ.ಮಂಜು ಬದ್ಧ ವೈರಿಗಳೇ ಆಗಿದ್ದರು. ಆದರೆ, ಇದೀಗ ಅವಕಾಶಸಿಂಧು ರಾಜಕಾರಣಕ್ಕಾಗಿ ಇಂದು ಎ.ಮಂಜು ಜೆಡಿಎಸ್‌ ಸೇರಿರಬಹುದು. ಆದರೆ, ಅದಕ್ಕೂ ಮುನ್ನ ಜಿಲ್ಲೆಯ ರಾಜಕೀಯದಲ್ಲಿ ಎಚ್‌.ಡಿ.ರೇವಣ್ಣ ಅವರನ್ನು ಬಹಿರಂಗ ವೇದಿಕೆಗಳಲ್ಲಿ ಎ.ಮಂಜು ಮೂದಲಿಸಿದಷ್ಟು ಮತ್ತ್ಯಾರೂ ಟೀಕಿಸಿಲ್ಲ.ಅದರಲ್ಲಿಯೂ ಎ.ಮಂಜು ಅವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗಲಂತೂ ಬಹಿರಂಗ ವೇದಿಕೆಗಳಲ್ಲಿ ರೇವಣ್ಣ ಪಿಕ್‌ ಪಾಕೆಟರ್, ಜೇಬುಗಳ್ಳ ಎಂದೆಲ್ಲಾ ವಾಗ್ಧಾಳಿ ನಡೆಸಿದ್ದರು. ಪ್ರತಿ ಹಂತದಲ್ಲೂ ರೇವಣ್ಣ ಅವರನ್ನು ಟೀಕಿಸುವ ಅವಕಾಶಗಳನ್ನು ಮಿಸ್‌ ಮಾಡಿಕೊಳ್ಳುತ್ತಿರಲಿಲ್ಲ. ಹೀಗಿದ್ದಾಗ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಮಂಜು ಅವರ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾದವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮೂಲೆಗುಂಪಾಗಿದ್ದ ಎ.ಮಂಜು ಪುನಃ ಕಾಂಗ್ರೆಸ್‌ ನತ್ತ ಮುಖ ಮಾಡಿದ್ದರು. ಆದರೆ, ಅಲ್ಲಿಯೂ ಟಿಕೆಟ್‌ ಸಿಗುವುದು ಸಾಧ್ಯವಿಲ್ಲ ಎನ್ನುವುದು ಅರ್ಥವಾಗುತ್ತಿದ್ದಂತೆ ಎ.ಮಂಜುಗೆ ತಾನು ಅತಂತ್ರವಾಗಿರುವುದು ಅರ್ಥವಾಯಿತು. ಆ ವೇಳೆಗೆ ಜೆಡಿಎಸ್‌ ನಾಯಕರು ಕೂಡ ಅನುಕೂಲಸಿಂಧು ರಾಜಕಾರಣಕ್ಕಾಗಿ ಎ.ಮಂಜು ಅವರನ್ನು ಸಂಪರ್ಕಿಸಿ ತಮ್ಮ ಪಕ್ಷದಿಂದ ಟಿಕೆಟ್‌ ಕೊಡುವುದಾಗಿ ಹೇಳಿದರು. ಅತಂತ್ರದಲ್ಲಿದ್ದ ಎ.ಮಂಜು ಕೂಡ ಅದೇ ಅನುಕೂಲಸಿಂಧು ರಾಜಕಾರಣಕ್ಕಾಗಿ ಈ ಅವಕಾಶವನ್ನು ಒಪ್ಪಿಕೊಂಡರು. ಆದರೆ, ಮನಸಿನೊಳಗಿನ ಬಿಸಿ ಮಾತ್ರ ಕಡಿಮೆಯಾಗಿಲ್ಲ ಎನ್ನುವುದು ಕೆಲವೊಂದು ಸಂದರ್ಭಗಳಲ್ಲಿ ಸಾಬೀತಾಗಿದೆ. ಇದೀಗ ಎ.ಮಂಜು ತಮ್ಮದೇ ಪಕ್ಷದ ಶಾಸಕರಾಗಿದ್ದರೂ ತಮ್ಮ ಮಗನ ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಕಷ್ಟವಿದೆ ಎನ್ನುವುದು ಅರ್ಥವಾಗಿದ್ದರಿಂದಲೇ ಇದೀಗ ಸಂಸದ ಪ್ರಜ್ವಲ್‌ ರೇವಣ್ಣ ತನ್ನ ತಾಯಿ ಭವಾನಿ ಅವರೊಂದಿಗೆ ಮಂಜು ಅವರನ್ನು ಭೇಟಿ ಮಾಡಿ ಸಮಾಧಾನಪಡಿಸಿ ತಮ್ಮ ಗೆಲುವಿಗೆ ಇರುವ ಎಲ್ಲಾ ತೊಡಕುಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಎ.ಮಂಜು ನಡೆ ಮಾತ್ರ ಮೀನಿನ ಹೆಜ್ಜೆಯಿದ್ದಂತೆ.