ಸಾರಾಂಶ
ಕಾರವಾರ: ಇಲ್ಲಿನ ಜಿಪಂನಲ್ಲಿ ಸೋಮವಾರ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಕೆಪಿಟಿಸಿಎಲ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್‌ಬಿ ಕಂಪನಿ ವಿರುದ್ಧ ಹರಿಹಾಯ್ದರು.
ವಿವಿಧ ಕೆಲಸಗಳಿಗೆ ಸ್ಥಳವಿಲ್ಲದೆಂದು ಕೆಪಿಟಿಸಿಎಲ್ ಅಧಿಕಾರಿಗಳು ಹೇಳಿದಾಗ ಕೋಪಗೊಂಡ ಸಚಿವರು, ಈಗ ಲ್ಯಾಂಡ್ ಇಲ್ಲ. ಅದಿಲ್ಲ. ಇದಿಲ್ಲ ಎನ್ನುತ್ತೀರಾ? ಎಸಿ ರೂಮಿನಲ್ಲಿ ಕುಳಿತು ಪತ್ರ ಬರೆದರೆ ನಿಮಗೆ ಜಾಗ ಕೊಡಬೇಕಾ? ರಾಜ್ಯದಲ್ಲಿ ಬಳಕೆಯಾಗುವ ಶೇ. ೨೨ರಷ್ಟು ವಿದ್ಯುತ್ ನಮ್ಮ ಜಿಲ್ಲೆಯಿಂದ ಕೊಡುತ್ತೇವೆ. ರಾಜ್ಯಕ್ಕೆ, ದೇಶಕ್ಕೆ ಬೆಳಕು ನೀಡಲು ನಮ್ಮ ಜನರು ತ್ಯಾಗ ಮಾಡಿದ್ದಾರೆ. ಹೀಗಿದ್ದಾಗ್ಯೂ ನಮ್ಮವರು ಕತ್ತಲಲ್ಲಿ ಕಾಲ ಕಳೆಯಬೇಕಾ ಎಂದು ಹರಿಹಾಯ್ದರು.ನಾವು ಜನಪ್ರತಿನಿಧಿಗಳು. ಜನರ ಕೆಲಸ ಮಾಡಲು ಬಂದಿದ್ದು ಎಂದು ಇಷ್ಟು ದಿನ ತಿಳಿದಿದ್ದೆ. ಈಗ ಅಧಿಕಾರಿಗಳ ಕೆಲಸ ಮಾಡಲು ಬಂದಿರುವುದು ಎನ್ನಿಸುತ್ತಿದೆ. ಜಿಲ್ಲೆಯಲ್ಲಿ ಕೆಪಿಟಿಸಿಎಲ್‌ನಿಂದ ₹೧ ಸಾವಿರ ಕೋಟಿ ಮೊತ್ತದ ಕೆಲಸ ನಡೆಯುತ್ತಿದೆ. ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ಮಾಡಿದರೆ ಪರಿಹಾರ ಸಿಗುವುದಿಲ್ಲವೇ? ನೀವು ಪತ್ರ ಬರೆಯುತ್ತಿದ್ದರೆ ಸಮಸ್ಯೆ ಬಗೆಹರಿಯುತ್ತದೆಯೇ? ಓಡಾಡಲು ವಾಹನ, ಕುಳಿತುಕೊಳ್ಳಲು ಕಚೇರಿ ಎಲ್ಲ ಇದೆ. ಏನು ಕಡಿಮೆಯಾಗಿದೆ? ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಈ ಜಿಲ್ಲೆಯಿಂದ ಹೋಗಬಹುದು ಎಂದು ಕಿಡಿಕಾರಿದರು.
ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಅಪಘಾತವಾಗುತ್ತಿರುವ, ಮಳೆಗಾಲದಲ್ಲಿ ನೀರು ತುಂಬುವ ಸಮಸ್ಯೆಗೆ ಪರಿಹಾರ ಒದಗಿಸಿದ್ದೀರಾ ಎಂದು ಹೆದ್ದಾರಿ ಪ್ರಾಧಿಕಾರ ಹಾಗೂ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿಯ ಎಂಜಿನಿಯರ್‌ಗೆ ಪ್ರಶ್ನಿಸಿದರು.ಸಭೆಯಲ್ಲಿದ್ದ ಎಂಜಿನಿಯರ್ ಅತಿವೇಗ, ನಿರ್ಲಕ್ಷ್ಯತನದ ಚಾಲನೆಯಿಂದ ಅಪಘಾತವಾಗುತ್ತಿದೆ ಎನ್ನುತ್ತಿದ್ದಂತೆ ಬೇಕಾಬಿಟ್ಟಿ ಮಾತನಾಡಬೇಡಿ. ನಿಮ್ಮ ಮನಸ್ಸಿಗೆ ಬಂದಂತೆ ಮಾತನಾಡಲು ಏನಂದುಕೊಂಡಿದ್ದೀರಿ ಎಂದು ಸಚಿವರು ಆಕ್ರೋಶ ಹೊರಹಾಕಿದರು.
ಭಟ್ಕಳದ ರಂಗಿಕಟ್ಟೆಯಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ನೀರು ತುಂಬಿ ತೊಂದರೆಯಾಗಿತ್ತು. ಪರಿಹಾರ ಮಾಡಿದ್ದೀರಾ? ನಿಮ್ಮನೆ ಕರೆದುಕೊಂಡು ಹೋಗಿ ತೋರಿಸಿದ್ದೇವೆ. ಜನರನ್ನು ಸಾಯಿಸಲು ನೀವು ಇರುವುದೇ? ಮಾನ ಮರ್ಯಾದೆ ಇಲ್ಲವೇ? ಐಆರ್‌ಬಿ ಕಂಪನಿಯ ಒನರ್ ಸೆಂಟ್ರಲ್ ಮಿನಿಸ್ಟರ್ ಆಗಿದ್ದಾರೆ. ಅವರಿಗೂ ಮಾನ ಮರ್ಯಾದೆ ಇಲ್ಲವೇ? ಮಳೆಗಾಲದಲ್ಲಿ ಆಗುವ ಅನಾಹುತಕ್ಕೆ ಯಾರು ಜವಾಬ್ದಾರಿ? ನಿರ್ಣಯ ತೆಗೆದುಕೊಳ್ಳುವ ತಾಕತ್ತಿಲ್ಲ ಎಂದರೆ ಏಕೆ ಸಭೆಗೆ ಬರುತ್ತೀರಿ? ಮಳೆಗಾಲ ಮುಗಿದು ೮ ತಿಂಗಳಾಗಿದೆ. ೨- ೩ ತಿಂಗಳಲ್ಲಿ ಪುನಃ ಮಳೆಗಾಲ ಆರಂಭವಾಗುತ್ತದೆ. ಇನ್ನು ನಿಮ್ಮ ಬಳಿ ಸರಿಪಡಿಸಲಾಗಿಲ್ಲ ಎಂದರೆ ಜನ ಹೊಡೆದು ಓಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.ಕಾರವಾರ ಡಿಡಿಪಿಐ ಲತಾ ನಾಯಕ, ೨೦೦೯ರಿಂದ ಇಲ್ಲಿಯವರೆಗೆ ೭೪ ಶಾಲೆ ಮುಚ್ಚಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ೮ ಶಾಲೆಯಲ್ಲಿ ಅಂಗನವಾಡಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಶಿರಸಿ ಡಿಡಿಪಿಐ ಪಿ. ಬಸವರಾಜ ೮೭ ಶಾಲೆ ಬಂದ್ ಮಾಡಲಾಗಿದೆ. ಉಪವಿಭಾಗಾಧಿಕಾರಿಗೆ, ತಹಸೀಲ್ದಾರರಿಗೆ ಪತ್ರ ಬರೆಯಲಾಗಿದೆ. ೧೨ ಕಡೆ ಅಂಗನವಾಡಿ ನಡೆಯುತ್ತಿದೆ ಎಂದರು. ಶಾಸಕ ಸತೀಶ ಸೈಲ್, ಗ್ರಾಪಂಗೆ ಹಸ್ತಾಂತರ ಮಾಡಿದರೆ ಹೇಗೆ ನಿರ್ವಹಣೆ ಮಾಡುತ್ತಾರೆ? ಅವರ ಬಳಿ ಹಣ ಬೇಕಲ್ಲವೇ? ನಿರ್ವಹಣೆ ಮಾಡುವ ಇಲಾಖೆಗೆ, ಕೈಗಾರಿಕೆಗೆ, ಗ್ರಂಥಾಲಯಕ್ಕೆ ನೀಡಿದರೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಹಾಗೆ ಬಿಟ್ಟರೆ ಅತಿಕ್ರಮಣವಾಗಿ ಜಾಗವೇ ಇಲ್ಲದಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ೧ ಕಲ್ಯಾಣಾಧಿಕಾರಿ ಡಾ. ನೀರಜ ಬಿ.ವಿ. ಮಾತನಾಡಿ, ೪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿಯಿದೆ. ಮಂಕಿ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ೫೭ ಜನರಲ್ಲಿ ಮಂಗನ ಕಾಯಿಲೆ ದೃಢವಾಗಿದ್ದು, ೫ ಜನರು ಮೃತಪಟ್ಟಿದ್ದಾರೆ. ಶಿರಸಿಯಲ್ಲಿ ಪ್ರಯೋಗಾಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪುಣೆಯಿಂದ ಅಧಿಕಾರಿಗಳು ಬಂದು ಸ್ಥಳಪರಿಶೀಲನೆ ನಡೆಸಬೇಕಿದೆ ಎಂದರು.
ಶಾಸಕ ಭಿಮಣ್ಣ ನಾಯ್ಕ, ಮಂಗನ ಕಾಯಿಲೆಯಿಂದ ಮೃತರಾದವರ ಕುಟುಂಬಕ್ಕೆ ಪರಿಹಾರ ಕೊಡಬೇಕು. ತಾವು ಎಲ್ಲರ ಮನೆಗೂ ಭೇಟಿ ನೀಡಿದ್ದೇವೆ. ಬಹುತೇಕ ಎಲ್ಲರೂ ಬಡವರಾಗಿದ್ದಾರೆ ಎಂದು ಸಚಿವರ ಬಳಿ ಹೇಳಿದರು. ಇದಕ್ಕೆ ಪ್ರತಿಕ್ರಿಯಸಿದ ವೈದ್ಯ, ಹಾವು ಕಡಿತದಿಂದ, ಮಂಗನ ಕಾಯಿಲೆಯಿಂದ ಮೃತಪಟ್ಟರೆ ಪರಿಹಾರ ಇಲ್ಲ. ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಮುಖ್ಯಮಂತ್ರಿಯವರ ಜತೆಗೂ ಮಾತುಕತೆ ಮಾಡಲಾಗಿದೆ ಎಂದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಎಸ್‌ಪಿ ಎನ್. ವಿಷ್ಣುವರ್ಧನ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.