ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀಬಸವೇಶ್ವರ ದೇವಾಲಯದ ಹೆಬ್ಬಾಗಿಲು ನಿರ್ಮಾಣ ಕಾರ್ಯಕ್ಕೆ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಮದ್ದೂರು ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಕಾರಕಹಳ್ಳಿ ಶ್ರೀ ಬಸವೇಶ್ವರ ದೇವಾಲಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ನನ್ನ ಶಾಸಕರ ಅನುದಾನದ ಜೊತೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಅಭಿವೃದ್ಧಿ ಪಡಿಸಿ ಉತ್ತಮ ಧಾರ್ಮಿಕ ಕ್ಷೇತ್ರ ಮಾಡುತ್ತೇನೆ ಎಂದರು.
ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಅದಲ್ಲದೇ, ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಗ್ರಾಮಸ್ಥರ ಜೊತೆಗೂಡಿ ಅಭಿವೃದ್ಧಿಗೆ ಕೈ ಜೋಡಿಸುತ್ತೆನೆ ಎಂದು ಭರವಸೆ ನೀಡಿದರು.ಶ್ರೀಬಸವೇಶ್ವರ ದೇವಾಲಯದ ಬಸಪ್ಪವು ಹಲವು ಪವಾಡಗಳನ್ನು ಸೃಷ್ಟಿಸಿ ಪವಾಡಪುರುಷ ಬಸವಪ್ಪ ಎಂದೇ ಪ್ರಖ್ಯಾತಿ ಪಡೆದು ಲಕ್ಷಾಂತರ ಭಕ್ತರಿಗೆ ದೈವ ಸ್ವರೂಪವಾಗಿದೆ. ಶ್ರೀಕ್ಷೇತ್ರವನ್ನು ಹಾಗೂ ಕಾರ್ಕಳ್ಳಿಯನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದೆ. ಮುಜರಾಯಿ ಇಲಾಖೆಯಿಂದ ಇನ್ನೂ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸಲಾವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ದೇವಾಲಯದ ಹೆಬ್ಬಾಗಿಲು ನಿರ್ಮಾಣ ಕಾಮಗಾರಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಒಂದು ಲಕ್ಷ ರು. ದನ ಸಹಾಯ ನೀಡಿದರು. ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮುಖಂಡರಾದ ಮಾದೇಗೌಡ, ಸಚ್ಚಿನ್, ನಂದೀಶ್, ಪ್ರದೀಪ್, ಲೋಕೇಶ್, ಬಸವರಾಜು, ರಾಜೇಶ್, ರವಿ, ಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.