ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ಕಾಯಕಯೋಗಿ ಬಸವಣ್ಣನವರ ವಚನ ಸಂದೇಶಗಳು ವಿಶ್ವದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸೂಚಿಸುವಂತಿವೆ. ಹಾಗಾಗಿ ಎಲ್ಲರೂ ಬಸವಣ್ಣರನ್ನು ಆರಾಧಿಸುವುದಕ್ಕಿಂತ ಅವರ ವಚನ-ಸಂದೇಶಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀವಿಶ್ವಗುರು ಬಸವೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿ, ಜಗತ್ತಿಗೇ ಜ್ಞಾನದ ಜ್ಯೋತಿ ಬೆಳಗಿಸಿದ ಬಸವಣ್ಣರನ್ನು ಪೂಜಿಸುವುದರಿಂದ ಅವರ ಸಂದೇಶವನ್ನೇ ಮರೆಮಾಚಿದಂತಾಗುತ್ತದೆ. ಹಾಗಾಗಿ ಬಸವಣ್ಣನವರ ಆರಾಧನೆಗಿಂತ ಅವರು ತಮ್ಮ ವಚನಗಳ ಮೂಲಕ ನೀಡಿರುವ ಸಂದೇಶಗಳನ್ನು ಅರಿತುಕೊಳ್ಳುವುದು ಮುಖ್ಯ ಎಂದರು.

ಮುಂದಿನ ಪೀಳಿಗೆ ಸಮ ಸಮಾಜದಲ್ಲಿ ನೆಮ್ಮದಿಯಿಂದ ಇರಬೇಕಾದರೆ ಮಕ್ಕಳಿಗೆ ಬಸವ ತತ್ವಗಳ ಸಾರವನ್ನು ತಿಳಿಸಬೇಕಿದೆ. ಮಕ್ಕಳಿಗೆ ಮೊದಲು ನಾವು ವಚನಗಳ ಆಶಯಗಳನ್ನು ಅರಿತುಕೊಳ್ಳಬೇಕು. ಬಳಿಕ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರೆ ಅವರು ಗ್ರಹಿಸಲು ಸಾಧ್ಯ ಎಂದರು.

ಬಸವಣ್ಣನವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಬಸವಣ್ಣನವರ ಸುಮಾರು 1500ಕ್ಕೂ ಹೆಚ್ಚು ವಚನಗಳನ್ನು ಸಂಗ್ರಹ ಮಾಡಲಾಗಿದೆ. ಸಮಾನತೆ ಇರಬೇಕು ಎಂದು ಬಯಸಿದ್ದ ಬಸವಣ್ಣ ತಮ್ಮ ಕಾವ್ಯದ ಮೂಲಕ ಸಾಮಾಜಿಕ ಜಾಗೃತಿ ಹರಡಿದರು. ಮುಖ್ಯವಾಗಿ ಲಿಂಗ ಅಥವಾ ಸಾಮಾಜಿಕ ತಾರತಮ್ಯ, ಮೂಢ ನಂಬಿಕೆಗಳು ಮತ್ತು ಆಚರಣೆ ತಿರಸ್ಕರಿಸಿದ್ದರು. ದೇವರು ಬೇರೆ ಎಲ್ಲಿಯೂ ಇಲ್ಲ ಅವನು ನಮ್ಮೊಳಗೆ ಇದ್ದಾನೆ ಎಂದು ಬಸವಣ್ಣ ನಂಬಿದ್ದರು ಎಂದರು.


ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಡಾ.ಎಂ.ಎಸ್.ಅನಿತಾ, ವಿಶ್ವದ ಇಂದಿನ ಎಲ್ಲ ಸಮಸ್ಯೆಗಳಿಗೆ ಬಸವಣ್ಣನೇ ಪರಿಹಾರ ಎಂಬುದನ್ನು ವಿಸ್ತೃತವಾಗಿ ವಿವರಿಸಿ ಆಧುನಿಕ ವಿಜ್ಞಾನದ ಕೃತಕ ಬುದ್ಧಿಮತ್ತೆ(ಎಐ)ಯನ್ನು ಅವಲಂಬಿಸಿಕೊಂಡು ಮನುಷ್ಯ ತನ್ನ ಅವನತಿಯನ್ನು ತಾನೇ ತಂದುಕೊಳ್ಳುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

ವಾಸ್ತವದಲ್ಲಿ ನಮ್ಮ ಎಲ್ಲ ಚಳವಳಿಗಳಿಗೂ ಮೂಲವೇ 12ನೇ ಶತಮಾನದ ಬಸವ ಚಳವಳಿಯಾಗಿದೆ. ರಾತ್ರಿಯ ಅಕ್ರಮಗಳೆಲ್ಲ ಬೆಳಗಿನ ಸಕ್ರಮವಾಗುತ್ತಿರುವ ಇಂದಿನ ಬೆಳವಣಿಗೆಯಲ್ಲಿ ಬಸವಣ್ಣನವರ ಸೂಕ್ಷ್ಮ ಸಂವೇದನೆಯ ವಚನಗಳು ದಾರಿದೀಪವಾಗಿ ಕಾಣುತ್ತವೆ. ಕಾಯಕದಿಂದ ಬಂದ ಹಣವನ್ನು ದಾಸೋಹಕ್ಕೆ ಮಾತ್ರ ಬಳಸಿ ಎಂದಿರುವ ಅವರ ಸಂದೇಶದಲ್ಲಿ ಸಾಮಾಜಿಕ ಧಾರ್ಮಿಕ ವಿವೇಚನೆಯಿದೆ ಎಂದು ತಿಳಿಸಿದರು.ಆಶೀರ್ವಚನ ನೀಡಿದ ಬೇಬಿ ಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ, ಮೌಢ್ಯತೆಯ ವಿರುದ್ಧ 12ನೇ ಶತಮಾನದಲ್ಲೇ ಸಾಮಾಜಿಕ ಕ್ರಾಂತಿ ಮಾಡಿದ ವಿಶ್ವಗುರು ಬಸವಣ್ಣನವರ ಆದರ್ಶ ಅನುಕರಣೀಯ. ಭವಿಷ್ಯತ್ತಿನಲ್ಲಿ ಯುದ್ಧ ರಹಿತ ಸಮಾಜ ನಿರ್ಮಾಣ ಮಾಡಲು ಬಸವ ತತ್ವ ಅನಿವಾರ್ಯವಾಗಿದೆ ಎಂದರು.

ಅಕ್ಷಯ ತೃತೀಯ ಎಂದು ಚಿನ್ನ ಖರೀದಿಸುವ ಭರದಲ್ಲಿ ಬಸವಣ್ಣನವರ ಮೌಲ್ಯವನ್ನು ಮೂಲೆಗುಂಪು ಮಾಡುತ್ತಿರುವುದು ವಿಷಾಧನೀಯ. ವೈಚಾರಿಕ ಕ್ರಾಂತಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಮಾನವೀಯತೆಗೆ ಬೆಲೆ ನೀಡಬೇಕೆಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್ ಅವರು, ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಶ್ವಾರೂಢ ಬಸವೇಶ್ವರರ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ವೇದಿಕೆಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ವಕೀಲ ಎಂ.ಗುರುಪ್ರಸಾದ್, ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಮುಖಂಡರಾದ ಸುಂಡಹಳ್ಳಿ ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್ ಮತ್ತಿತರರಿದ್ದರು.

ಇದಕ್ಕೂ ಮುನ್ನ ಬಸವೇಶ್ವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಬಸವೇಶ್ವರರ ಅಲಂಕೃತ ಭಾವಚಿತ್ರವನ್ನಿರಿಸಿದ್ದ ಬೆಳ್ಳಿ ರಥದಲ್ಲಿ ಡೀಸಿ ಡಾ.ಕುಮಾರ ಬಸವೇಶ್ವರರಿಗೆ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಚಾಲನೆ ನೀಡಿದರು.

ಬಳಿಕ ವಿವಿಧ ಜನಪದ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಂಪನ್ನಗೊಂಡಿತು. ಈ ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರಾದ ಎಚ್.ಎಸ್.ಶಿವರುದ್ರಪ್ಪ, ಶಿವಲಿಂಗಪ್ಪ, ಬೆಟ್ಟಹಳ್ಳಿ ಮಂಜನಾಥ್, ನಾರಾಯಣಸ್ವಾಮಿ, ರತ್ನಮ್ಮ, ಸಮಾಜದ ಮದ್ದೂರು ತಾಲೂಕು ಅಧ್ಯಕ್ಷ ಬಿ.ಸಿ.ಶಿವಾನಂದ, ಕಾರ್ಯದರ್ಶಿ ಕೆಂಪರಾಜು ಮತ್ತಿತರರಿದ್ದರು.ಕಾಟಾಚಾರಕ್ಕೆ ಆಚರಣೆ

ಸರ್ಕಾರದಿಂದ ವಿಶ್ವಗುರು ಬಸವೇಶ್ವರ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಲಾಗಿದೆ. ಜಯಂತಿಯನ್ನಿ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರವೇ ರಜೆ ನೀಡಿದೆ. ಆದರೆ, ಯಾವ ಅಧಿಕಾರಿಗಳಾಗಲಿ, ಸಿಬ್ಬಂದಿ ಆಗಲಿ ಹಾಜರಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಪೂರ್ವಭಾವಿ ಸಭೆ ಕರೆದು ಎಲ್ಲರನ್ನು ಆಹ್ವಾನಿಸಬೇಕಿತ್ತು. ಆದರೆ, ಇಡೀ ಕಲಾಮಂದಿರದಲ್ಲಿ ಕಾಲು ಭಾಗದಷ್ಟು ಮಾತ್ರ ಜನರಿದ್ದರೆ ಉಳಿದೆಡೆ ಖಾಲಿ ಕುರ್ಚಿಗಳು ಮಾತ್ರ. ಹಾಗಾಗಿ ಅಧಿಕಾರಿಗಳ ಈ ನಡೆ ಖಂಡನೀಯ. ಮುಂದಿನ ವರ್ಷದೊಳಗೆ ಇದನ್ನು ಸರಿಪಡಿಸಬೇಕೆಂದು ಲಿಂಗಾಯತ ಮಹಾಸಭಾ ಎಚ್ಚರಿಸಿದೆ.