ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಸೋಮವಾರ ಆಚರಣೆ ಮಾಡಲಾಯಿತು. ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಬಳಿಕ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ೧೨ನೇ ಶತಮಾನದಲ್ಲಿಯೇ ಬಸವಣ್ಣ, ಜಾತಿ ಹಾಗೂ ವರ್ಗ ರಹಿತ ಸಮಾಜ ನಿರ್ಮಾಣ ಮಾಡಲು ಮುಂದಾಗಿದ್ದರು. ಅದಕ್ಕಾಗಿ ಹೋರಾಟವನ್ನು ಮಾಡಿದ್ದರು. ಅನಿಷ್ಠ ಜಾತಿ ಪದ್ಧತಿ, ಮೌಢ್ಯ, ಕಂದಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು. ರಾಜ್ಯ ಪ್ರಭುತ್ವ ವಿರುದ್ಧವಾಗಿ ಪ್ರಜಾಪ್ರಭುತ್ವವನ್ನು ಅನುಷ್ಠಾನ ಮಾಡಿದ್ದರು. ಇಂಥ ಮಹಾನ್ ದಾರ್ಶನಿಕ, ಸಾಂಸ್ಕೃತಿಕ ನಾಯಕ ಬಸವಣ್ಣ ಎಲ್ಲಾ ವರ್ಗದವರಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ ಮಹಾಪುರುಷರು. ಅವರ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಬಸವಣ್ಣ ಅವರ ತತ್ವಾದರ್ಶಗಳು ೨೧ನೇ ಶತಮಾನದಲ್ಲಿ ಹೆಚ್ಚು ಪ್ರಸ್ತುತತೆ ಹೊಂದಿವೆ. ಸಮಾಜದಲ್ಲಿದ್ದ ಅಸಮಾನತೆಯನ್ನು ತೊಡೆದು ಹಾಕಲು ಪಣ ತೊಟ್ಟು ವಚನ ಚಳವಳಿಯನ್ನು ಆರಂಭಿಸಿದ್ದರು. ಪ್ರತ್ಯೇಕ ಧರ್ಮವನ್ನು ಸ್ಥಾಪನೆ ಮಾಡಿ, ಅವರ ಚಳವಳಿ ಮತ್ತು ಶರಣ ಪರಂಪರೆಯನ್ನು ಒಪ್ಪಿ ಬರುವವರನ್ನು ಸೇರಿಸಿಕೊಂಡು ಅಂದೇ ಕ್ರಾಂತಿ ಮಾಡಿದ್ದ ಮಹಾಪುರುಷ, ಜಗತ್ತಿಗೆ ಸರ್ವ ಶೇಷ್ಠವಾದ ವಚನಗಳನ್ನು ಕೊಟ್ಟರು. ಅವರು ಕಂಡ ಕನಸು ಇಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನನಸಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್, ಬ್ಲಾಕ್ ಅಧ್ಯಕ್ಷ ಮಹಮದ್ ಆಸ್ಗರ್, ಎಪಿಎಂಸಿ ಅಧ್ಯಕ್ಷ ಗುರುಸ್ವಾಮಿ, ಮಾಜಿ ಅಧ್ಯಕ್ಷ ಸೋಮೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆಂಗಾಕಿ ನಾಗರತ್ನ, ಮುಖಂಡರಾದ ಸೋಮಣ್ಣ, ಎಸ್. ಸೋಮನಾಯಕ, ಮಾಜಿ ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ಲತಾ ಜಯಣ್ಣ, ಶಂಕುತಲಾ, ನಾಗಶ್ರೀ, ಬಿಸಲವಾಡಿ ರವಿ,ಚೆಂಗುಮಣಿ, ಶಿವಮೂರ್ತಿ, ಇರಸವಾಡಿ ಆಶೋಕ್, ಹೆಬ್ಬಸೂರು ಮಧು, ಎಚ್.ಎನ್. ಖಾನ್, ಕೆರೆಹಳ್ಳಿ ರೇವಣ್ಣ, ಎಚ್. ಡಿ. ಪ್ರಕಾಶ್ ಮೊದಲಾದವರು ಇದ್ದರು.