ರಾಮಕೃಷ್ಣನನ್ನು ಕೊಂದು ಪೊಲೀಸರಿಗೆ ಶರಣಾದ ಆರೋಪಿ ಮಲ್ಲಿಕಾರ್ಜುನ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಸುರಾಪುರ ಗ್ರಾಮದ ಜಮೀನೊಂದರಲ್ಲಿ ಹಳೇ ದ್ವೇಷದಿಂದಾಗಿ ಕುಣಗಳ್ಳಿ, ಸುರಾಪುರ ಸೇರಿ ಹಲವು ಗ್ರಾಮಗಳಲ್ಲಿನ ಅಪರಾಧಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಪೊಲೀಸ್ ಮಾಹಿತಿದಾರನೋರ್ವನನ್ನು ರಾಡಿನಿಂದ ಹೊಡೆದು ಕೊಲೆಗೈದ ಆರೋಪಿಯು ಅಗರ ಮಾಂಬಳ್ಳಿ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ಜರುಗಿದೆ.

ಕುಣಗಳ್ಳಿ ಗ್ರಾಮದ ರಾಮಕೃಷ್ಣ(50) ಎಂಬಾತ ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಜೆಸಿಬಿ ಚಾಲಕ ಮಲ್ಲಿಕಾರ್ಜುನ

ಎಂಬಾತ ಕೊಲೆಗೈದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ಶರಣಾದ ಆರೋಪಿ.


ಆರೋಪಿ ಮಲ್ಲಿಕಾರ್ಜುನನನ್ನು ಕೊಲೆಯಾದ ರಾಮಕೃಷ್ಣ ಹಣಕ್ಕಾಗಿ ಪೀಡಿಸುತ್ತಿದ್ದ, ಅಲ್ಲದೇ ಹಿಂದೊಮ್ಮೆ

ಆರೋಪಿ ನಾಡಾ ಬಂದೂಕು ಇರಿಸಿಕೊಂಡಿದ್ದ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿ ಆತನ ಬಂಧನಕ್ಕೂ ಕಾರಣವಾಗಿದ್ದ. ಮಾತ್ರವಲ್ಲ, ಅನೇಕ ಅಪರಾಧ ಪ್ರಕರಣಗಳ ಬಗ್ಗೆಯೂ ಸಹ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ಹೇಳಲಾಗಿದೆ. ಅಲ್ಲದೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ನಾನೇ ಆತನ ಬಂಧನಕ್ಕೂ ಕಾರಣವಾಗಿದ್ದೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.

ಈ ಕಾರಣಗಳಿಂದಲೇ ಇಬ್ಬರಿಗೂ ದ್ವೇಷ- ವೈಮನಸ್ಸು ಉಂಟಾಗಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಇಬ್ಬರೂ ಪರಸ್ಪರ ಮಾತನಾಡಿಸಿಕೊಂಡಿದ್ದು ಭಾನುವಾರ ರಾತ್ರಿ ಸೂರಾಪುರ ಗ್ರಾಮದ ಜಮೀನೊಂದಕ್ಕೆ ಇಬ್ಬರು ತೆರಳಿ ಮದ್ಯಸೇವನೆ ಬಳಿಕ ಊಟ ಮಾಡಿದ್ದಾರೆ, ನಂತರ ಮಲ್ಲಿಕಾರ್ಜುನ ಮತ್ತು ರಾಮಕೃಷ್ಣ ನಡುವೆ ಮಾತಿನ ಚಕಮಕಿ ನಡೆದಿದೆ, ಮೊದಲೇ ರಾಮಕೃಷ್ಣನ ಕೊನೆಗೆ ಪ್ಲ್ಯಾನ್ ಮಾಡಿದ್ದ ಆರೋಪಿಯು ಕಬ್ಬಿಣದ ರಾಡಿನಿಂದ ರಾಮಕೃಷ್ಣನಿಗೆ ಹೊಡೆದು ಕೊಲೆ ಮಾಡಿ, ನಂತರ ಪೊಲೀಸ್ ಠಾಣೆಗೆ ತೆರಳಿ ರಾಡಿನಿಂದ ಹೊಡೆದಿರುವುದಾಗಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.

ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಉಪವಿಭಾಗ ಡಿವೈಎಸ್ಪಿ ಧರ್ಮೇಂದ್ರ, ಯಳಂದೂರು ಸಿಪಿಐ ಸುಬ್ರಹ್ಮಣ್ಯ, ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಎಸ್ಐ ಕರಿಬಸಪ್ಪ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಮೃತದೇಹವನ್ನು ಚಾ.ನಗರದ ಆಸ್ಪತ್ರೆಗೆ ರವಾನಿಸಿದರು.

ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.