ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಚಿತ್ರದುರ್ಗದಲ್ಲಿ ಜು.19ರಂದು ನಡೆಯುವ ರಾಷ್ಟ್ರೀಯ ಭೋವಿ ಜನೋತ್ಸವವಕ್ಕೆ ತರಳಾಬಾಳು ಹುಣ್ಣಿಮೆ ರೀತಿ ಸಾಂಸ್ಕೃತಿಕ ಸ್ಪರ್ಶ ನೀಡಬೇಕೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.ಭೋವಿ ಜನೋತ್ಸವ ಸಂಬಂಧ ಹೊಳಲ್ಕೆರೆ ಪ್ರವಾಸಿ ಮಂದಿರದಲ್ಲಿ ಶನಿವಾರ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಿರಿಗೆರೆಯ ತರಳಬಾಳು ಜಗದ್ಗುರು ನಡೆಸುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಅದೇ ರೀತಿ ನಮ್ಮ ಸಮಾಜದ ಗುರುಗಳು ಪ್ರತಿ ವರ್ಷ ಆಚರಿಸುವ ಭೋವಿ ಜನೋತ್ಸವ ಐತಿಹಾಸಿಕ ಸಮ್ಮೇಳನವಾಗಬೇಕು. ಭೋವಿ ಸಮಾಜ ಒಂದಾಗಲು ಇದೊಂದು ದಾರಿ ಎಂದರು.
ಜನೋತ್ಸವವನ್ನು ಆಂದೋಲನ, ಹಬ್ಬದ ರೀತಿಯಲ್ಲಿ ಆಚರಿಸಿ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳಿಗೆ ಗೌರವ ತರೋಣ. ಅದಕ್ಕಾಗಿ ಭೋವಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.ನಮ್ಮ ಸಮಾಜ ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸುವುದಕ್ಕಾಗಿ ಪ್ರತಿ ವರ್ಷವೂ ಗುರುಗಳು ಭೋವಿ ಜನೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜನೋತ್ಸವದ ನೆಪದಲ್ಲಾದರೂ ಭೋವಿ ಜನಾಂಗ ಸಂಘಟಿತರಾಗಬೇಕಿದೆ. ರಾಜಕಾರಣಿಗಳನ್ನು ಕರೆಸಿ ನಮ್ಮ ಸಮಾಜದ ಸಮಸ್ಯೆಗಳನ್ನು ಗಮನಕ್ಕೆ ತರುವ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸುವುದು ಗುರುಗಳ ಉದ್ದೇಶ ಎಂದು ಹೇಳಿದರು.
ತಮಿಳುನಾಡಿನಿಂದ ವಡ್ಡರು ಬಂದು ನಮ್ಮ ರಾಜ್ಯದಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟಿದ್ದರ ಫಲವಾಗಿ 1944-45 ರಲ್ಲಿ ಅಂದಿನ ಮೈಸೂರು ಮಹಾರಾಜರು ನಮ್ಮ ಸಮಾಜದವರನ್ನು ಗುರುತಿಸಿ ಸನ್ಮಾನಿಸಿ ಮೀಸಲಾತಿಯನ್ನು ಕೊಟ್ಟ ಕಾರಣದಿಂದ ನಾವುಗಳು ಈಗ ಪರಿಶಿಷ್ಟ ಜಾತಿಯಲ್ಲಿದ್ದೇವೆ. ಮೊದಲು ಪಟ್ಟಿ ಸಿದ್ದಪಡಿಸಿ ಯಾವ್ಯಾವ ಊರಿಂದ ಎಷ್ಟು ಜನರನ್ನು ಜನೋತ್ಸವಕ್ಕೆ ಕರೆತರುತ್ತೇವೆಂದು ಹೇಳಿದರೆ ಬಸ್‍ಗಳ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಮುಖಂಡರುಗಳಿಗೆ ಭರವಸೆ ನೀಡಿದರು.
ಮೀಸಲಾತಿಯಲ್ಲಿ ನಮಗೆ ಅನ್ಯಾಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಇದೊಂದು ಅವಕಾಶ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಭೋವಿ ಜನೋತ್ಸವಕ್ಕೆ ಬರಲು ಒಪ್ಪಿಕೊಂಡಿದ್ದಾರೆ. ಗುರುಗಳು ಅಹವಾಲುಗಳನ್ನು ಸಲ್ಲಿಸಿ ಭೋವಿ ಜನಾಂಗಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಕೊಡಿಸುವುದು ಅವರ ಉದ್ದೇಶ. ಹಾಗಾಗಿ ಜನಾಂಗದವರು ಸ್ವಯಂ ಆಗಿ ಜನೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ವಿನಂತಿಸಿದರು. ಭೋವಿ ಸಮಾಜದ ಅಧ್ಯಕ್ಷ ಕೃಷ್ಣಪ್ಪ, ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಹನುಮಂತಪ್ಪ, ಡಿ.ಸಿ.ಮೋಹನ್, ಮಂಜಣ್ಣ, ಅಣ್ಣಪ್ಪ, ಅಂಜನಿ, ನಟೇಶ್, ತಿಪ್ಪೇಸ್ವಾಮಿ, ಲಕ್ಷ್ಮಣ್, ನಾಗರಾಜ್, ದೇವಣ್ಣ ಹಾಗೂ ಭೋವಿ ಸಮಾಜದ ಮುಖಂಡರುಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.