ಬಿಡದಿ ಇನ್ಸ್ ಪೆಕ್ಟರ್ ಜಿ.ಕೆ.ಶಂಕರ್ ನಾಯಕ್ ಅಮಾನತು

| Published : Dec 15 2023, 01:30 AM IST

ಬಿಡದಿ ಇನ್ಸ್ ಪೆಕ್ಟರ್ ಜಿ.ಕೆ.ಶಂಕರ್ ನಾಯಕ್ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಹಣ ದುರುಪಯೋಗ ಆರೋಪ ಎದುರಿಸುತ್ತಿರುವ ಬಿಡದಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಿ.ಕೆ. ಶಂಕರ್ ನಾಯಕ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.ಸೇವೆಯಲ್ಲಿ ಮುಂದುವರೆದಲ್ಲಿ ಪ್ರಕರಣದಲ್ಲಿನ ಸಾಕ್ಷಿಗಳಿಗೆ ಪ್ರಭಾವ ಬೀರುವುದು ಮತ್ತು ಸಾಕ್ಷಿ ನಾಶಪಡಿಸುವ ಸಂಭವ ಇರುವುದರಿಂದ ಸರ್ಕಾರಿ ಸೇವೆಯಲ್ಲಿ ಮುಂದುವರೆಯುವುದು ಸೂಕ್ತವಲ್ಲವೆಂದು ಪರಿಗಣಿಸಿ ಶಂಕರ್‌ ನಾಯಕ್‌ ಅವರನ್ನು ಅಮಾನತುಗೊಳಿಸಲಾಗಿದೆ. ಬೆಂಗಳೂರಿನ ಬ್ಯಾಟರಾಯನಪುರ ಪೋಲಿಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ವೇಳೆ ಹಣ ದುರುಪಯೋಗ ಪಡಿಸಿಕೊಂಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಶಂಕರ್‌ ನಾಯಕ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಸ್ತುತ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಆದೇಶ । ಕೃತ್ಯದಲ್ಲಿ ಶಾಮೀಲಾಗಿದ್ದ ಲೋಕ್‌ ನಾಥ್‌ ಸಿಂಗ್ ವಿರುದ್ಧವೂ ಪ್ರಕರಣ ದಾಖಲು

ಕನ್ನಡಪ್ರಭ ವಾರ್ತೆ ರಾಮನಗರ

ಹಣ ದುರುಪಯೋಗ ಆರೋಪ ಎದುರಿಸುತ್ತಿರುವ ಬಿಡದಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಿ.ಕೆ. ಶಂಕರ್ ನಾಯಕ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ಸೇವೆಯಲ್ಲಿ ಮುಂದುವರೆದಲ್ಲಿ ಪ್ರಕರಣದಲ್ಲಿನ ಸಾಕ್ಷಿಗಳಿಗೆ ಪ್ರಭಾವ ಬೀರುವುದು ಮತ್ತು ಸಾಕ್ಷಿ ನಾಶಪಡಿಸುವ ಸಂಭವ ಇರುವುದರಿಂದ ಸರ್ಕಾರಿ ಸೇವೆಯಲ್ಲಿ ಮುಂದುವರೆಯುವುದು ಸೂಕ್ತವಲ್ಲವೆಂದು ಪರಿಗಣಿಸಿ ಶಂಕರ್‌ ನಾಯಕ್‌ ಅವರನ್ನು ಅಮಾನತುಗೊಳಿಸಲಾಗಿದೆ. ಬೆಂಗಳೂರಿನ ಬ್ಯಾಟರಾಯನಪುರ ಪೋಲಿಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ವೇಳೆ ಹಣ ದುರುಪಯೋಗ ಪಡಿಸಿಕೊಂಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಶಂಕರ್‌ ನಾಯಕ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಸ್ತುತ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಎಫ್‌ಐಆರ್ ದಾಖಲಾಗಿದ್ದ ಕಾರಣ ಶಂಕರ್ ನಾಯಕ್ ಕೋರ್ಟ್ ಮೊರೆ ಹೋಗಿ ಅಲ್ಲಿಂದ ತಡೆಯಾಜ್ಞೆ ತಂದಿದ್ದರು. ನಂತರ ಇಲಾಖೆ ತನಿಖೆಯಿಂದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಶಂಕರ್‌ನಾಯಕ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಇನ್ನೂ ಎರಡು ಪ್ರಕರಣಗಳು ದಾಖಲಾಗಿರುವ ಬಗ್ಗೆ ಕೆಂಗೇರಿ ವಿಭಾಗದ ಎಸಿಪಿ ಅವರು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ವರದಿ ನೀಡಿದ್ದರು. ಈ ವರದಿಯನ್ನು ಆಧರಿಸಿ ಆಯುಕ್ತ ದಯಾನಂದ್ ಅವರು ಡಿಜಿಪಿ ಆಲೋಕ್‌ ಮೋಹನ್ ಹಾಗೂ ಐಜಿಪಿ ರವಿಕಾಂತೇಗೌಡ ಅವರಿಗೆ ಶಂಕರ್ ನಾಯಕ್ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ವರದಿ ನೀಡಿದ್ದರು. ಇದೇ ವಿಚಾರವಾಗಿ ಬೆಳಗಾವಿಯ ವಿಧಾನ ಸಭೆ ಅಧಿವೇಶನದಲ್ಲಿಯೂ ಚರ್ಚೆಯಾಗಿತ್ತು.

ಬ್ಯಾಟರಾಯನಪುರ ಠಾಣೆಯಿಂದ ವರ್ಗಾವಣೆಗೊಳಿಸಿದ ನಂತರವೂ ಸದರಿ ಸ್ಥಳಕ್ಕೆ ವರ್ಗಾವಣೆಯಾಗಿ ಬಂದಿದ್ದ ಪೊಲೀಸ್ ಇನ್ಸ್ ಪೆಕ್ಟರ್ ರವರಿಗೆ ಶಂಕರ್ ನಾಯಕ್ ರವರು ಪ್ರಕರಣಗಳಲ್ಲಿ ವಶ ಪಡಿಸಿಕೊಂಡಿದ್ದ ನಗದು ಮತ್ತು ಇತರೆ ಸ್ವತ್ತುಗಳ ಪೂರ್ಣ ಪ್ರಭಾರವನ್ನು ಹಸ್ತಾಂತರಿಸದೇ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ಮತ್ತು ದುರ್ನಡತೆ ಪ್ರದರ್ಶಿಸಿದ್ದರು.

ಸರ್ಕಾರಿ ಕರ್ತವ್ಯದಲ್ಲಿ ನಂಬಿಕೆ ದ್ರೋಹ, ಅಧಿಕಾರ ದುರ್ಬಳಕೆ, ಸಾಕ್ಷಿ ನಾಶ ಮತ್ತು ಭ್ರಷ್ಟಾಚಾರ ಎಸಗಿರುವ ಆರೋಪಕ್ಕಾಗಿ ಶಂಕರ್‌ ನಾಯಕ್ ಮತ್ತು ಅವರೊಂದಿಗೆ ಕೃತ್ಯದಲ್ಲಿ ಶಾಮೀಲಾಗಿದ್ದ ಲೋಕ್‌ ನಾಥ್‌ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 201, 409, 110, 465 ಮತ್ತು 7 ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಏನಿದು ಪ್ರಕರಣ?

2022 ರಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ 72 ಲಕ್ಷ ಹಣವನ್ನು ಆರೋಪಿಗಳಿಂದ ರಿಕವರಿ ಮಾಡಲಾಗಿತ್ತು. ಈ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದ ಇನ್ಸ್‌ಪೆಕ್ಟರ್ ಶಂಕರ್‌ನಾಯಕ್ ಅವರು ಸರ್ಕಾರಿ ಖಜಾನೆಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದರು ಎಂದು ಹೇಳಲಾಗಿದೆ. ಹಲವು ಬಾರಿ ನೋಟಿಸ್ ನೀಡಿದರೂ ಸರ್ಕಾರಕ್ಕೆ ಹಣ ಪಾವತಿಸದೆ ಕೆಲ ದಿನಗಳ ಹಿಂದೆಯುಷ್ಟೇ ಹಣವಿದ್ದ ಚೀಲವನ್ನು ಠಾಣೆಯ ಮುಂದಿಟ್ಟು ಬಂದಿದ್ದರು. ಸಿಸಿಟಿವಿ ಸೆರೆಯಾಗಿದ್ದ ದೃಶ್ಯವನ್ನು ಆಧರಿಸಿ ಶಂಕರ್ ನಾಯಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.

----

ಬಾಕ್ಸ್....ಆದೇಶದಲ್ಲಿ ಏನಿದೆ ?

ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) ನಿಯಮಗಳು 1965-89ರ ನಿಯಮ 5ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಇನ್ಸ್ ಪೆಕ್ಟರ್ ಶಂಕರ್‌ ನಾಯಕ್‌ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಅಮಾನತ್ತಿನಲ್ಲಿರುವ ಅವಧಿಯಲ್ಲಿ ಕರ್ನಾಟಕ ನಾಗರೀಗ ಸೇವಾ ನಿಯಮಾವಳಿ ನಿಯಮ 98 (1)ರ ಪ್ರಕಾರ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ. ಅಮಾನತ್ತಿನ ಅವಧಿಯಲ್ಲಿ ಯಾವುದೇ ಖಾಸಗಿ ನೌಕರಿ ಅಥವಾ ಬೇರೆ ವ್ಯಾಪಾರವನ್ನಾಗಿ ಮಾಡತಕ್ಕದ್ದಲ್ಲ. ಕೇಂದ್ರ ಸ್ಥಾನವನ್ನು ಬಿಡುವಾಗ ಕರ್ನಾಟಕ ನಾಗರೀಕ ಸೇವೆ ನಿಯಮಾವಳಿಯ ನಿಯಮ 104 ರಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿಯನ್ನು ಪಡೆದು ಬಿಡತಕ್ಕದ್ದು, ಒಂದು ವೇಳೆ ಈ ನಿಯಮ ಮೀರಿದಲ್ಲಿ ದುರ್ನಡತೆಯನ್ನು ತೋರಿಸಿರುತ್ತಿರೆಂದು ಪರಿಗಣಿಸಿ ಪ್ರತ್ಯೇಕ ಇಲಾಖಾ ವಿಚಾರಣೆಗೆ ಗುರಿಪಡಿಸಲಾಗುವುದು. ಅಲ್ಲದೆ ಪ್ರತಿ ತಿಂಗಳು ಖಾಸಗಿ ಉದ್ಯೋಗ ಮಾಡುತ್ತಿಲ್ಲವೆಂದು ಕೆಸಿಎಸ್ ಆರ್ ನಿಯಮ 98(2)ರಂತೆ ಪ್ರಮಾಣ ಪತ್ರ ನೀಡಬೇಕು.

ಸರ್ಕಾರಿ ವಸತಿ ಗೃಹದಲ್ಲಿದ್ದರೆ ಅಮಾನತ್ತಿನ ದಿನಾಂಕದಿಂದ ಈ ಸೌಲಭ್ಯ ಕಳೆದುಕೊಳ್ಳುವುದರಿಂದ ನಿಯಮಾವಳಿಯ ಪ್ರಕಾರ ಬಾಡಿಗೆ ವಸೂಲಿಗೆ ಅರ್ಹರಾಗಿರುತ್ತೀರಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.

-----

14ಕೆಆರ್ ಎಂಎನ್ 5.ಜೆಪಿಜಿ

ಇನ್ಸ್ ಪೆಕ್ಟರ್ ಜಿ.ಕೆ.ಶಂಕರ್ ನಾಯ್ಕ್

-------