ರೈತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೂರಾರು ರೈತರು, ಬಿಜೆಪಿ ಕಾರ್ಯಕರ್ತರು ಮಾಜಿ ಸಚಿವ ಬಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್ ರ್ಯಾ.ಲಿ ನಡೆಸಿ, ಹೆದ್ದಾರಿ ಬಂದ್ ಮಾಡಿ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಟ್ಟೀಹಳ್ಳಿ: ರೈತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೂರಾರು ರೈತರು, ಬಿಜೆಪಿ ಕಾರ್ಯಕರ್ತರು ಮಾಜಿ ಸಚಿವ ಬಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ, ಹೆದ್ದಾರಿ ಬಂದ್ ಮಾಡಿ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತರಳುಬಾಳು ಶಾಲಾ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ರ್‍ಯಾಲಿಯಲ್ಲಿ 2000ಕ್ಕೂ ಹೆಚ್ಚು ಟ್ರ್ಯಾಕ್ಟರ್, ಬೈಕ್ ಪಾಲ್ಗೊಂಡಿತ್ತು. ಭಗತ್‍ಸಿಂಗ್ ವೃತ್ತದ ಮುಖಾಂತರ ಮಹಾಲಕ್ಷ್ಮೀ ವೃತ್ತದ ಹೋರಾಟದ ವೇದಿಕೆ ತಲುಪಿ ಅಲ್ಲಿ ಸುಮಾರು 5 ತಾಸುಗಳ ಹೆದ್ದಾರಿ ಬಂದ್ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ, ಜೂಜಾಟ, ಕ್ಲಬ್‍ಗಳಲ್ಲಿ ನಡೆಯುವ ಅವ್ಯವಹಾರಕ್ಕೆ ಅಧಿಕಾರಿಗಳೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಈ ವೇಳೆ ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್ ಮಾತನಾಡಿ, ಈ ಹಿಂದೆ ನಡೆದ ಹಿರೇಕೆರೂರು ಪ್ರತಿಭಟನೆಯಲ್ಲಿ ತಾಲೂಕಿನಲ್ಲಾಗುತ್ತಿರುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಹಾಗೂ ರೈತ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ, ಅಸಮರ್ಪಕ ವಿದ್ಯುತ್ ಪೂರೈಕೆ, ಇನ್ನೂ ಅನೇಕ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ಮಾಡಿದರೂ ಜಿಲ್ಲಾಡಳಿ ಎಚ್ಚೆತ್ತಿಲ್ಲ. ಹೀಗಾಗಿ ರಟ್ಟೀಹಳ್ಳಿ ಬೈಂದೂರ ಹೆದ್ದಾರಿ ತಡೆದು ಹೋರಾಟ ಹಮ್ಮಿಕೊಳ್ಳಲಾಯಿತು. ಇದಕ್ಕೂ ಬಗ್ಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದರು.ಜಿಲ್ಲೆಯಲ್ಲಿ ರೈತರ ಪರ ಹೋರಾಟ ಹೆಚ್ಚಾದ್ದರಿಂದ ಮೊದಲು 5 ಕ್ವಿಂಟಲ್ ಖರೀದಿಗೆ ಮುಂದಾದರು. ಆನಂತರ 20 ಕ್ವಿಂಟಲ್ ಮಾಡಿ ಅದಕ್ಕೂ ಶರತ್ತು ನೀಡಿದ್ದು, ಇದು ಯಾವ ನೀತಿ ಎಂದು ಪ್ರಶ್ನಿಸಿದರು. ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದರೂ ಈ ಸರ್ಕಾರ ರೈತರಿಗೆ ಟಿಸಿ ನೀಡುತ್ತಿದೆ. ಹೆಸ್ಕಾಂನಲ್ಲಿ ₹90 ಕೋಟಿ ಲೂಟಿ ಹೊಡೆದು 1500 ಟಿಸಿ ಅಕ್ರಮವಾಗಿ ಮಾರಾಟವಾಗಿವೆ ಎಂದು ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಯಾವೊಬ್ಬ ಅಧಿಕಾರಿಯ ಮೇಲೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದರು.ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಯಾವ ರೈತ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾನೋ ಅವನ ಸಂಪರ್ಕ 24 ಗಂಟೆಯಲ್ಲಿ ಕಡಿತ ಮಾಡಿ ಎಂದು ಆದೇಶ ನೀಡಿದ್ದಾನೆ ಎಂದು ಏಕವಚನದಲ್ಲೇ ಹರಿಹಾಯ್ದರು. ನಿಮ್ಮ ಅಧಿಕಾರಿಗಳಿಗೆ ತಾಕತ್ತಿದ್ರೆ ಕಟ್ ಮಾಡಿ ನೋಡಿ, ಕಟ್ ಮಾಡಿದ ಹೆಸ್ಕಾಂ ನೌಕರನನ್ನು ಅದೇ ಊರಿನಲ್ಲಿ ಕಂಬಕ್ಕೆ ಕಟ್ಟಿಹಾಕಿ ಕಾನೂನು ಕೈಗೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ, ಸಂಜೀವ ಕಬ್ಬಿಣಕಂತಿಮಠ, ಪಪಂ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಬಸವರಾಜ ಆಡಿನವರ, ರವಿ ಹದಡೇರ, ಲಕ್ಷ್ಮೀ ಚಿಕ್ಕಮೊರಬ, ಮಂಜುಳಾ ಅಗಡಿ, ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಬಸಮ್ಮ ಅಬಲೂರ, ಆನಂದಪ್ಪ ಹಾದಿಮನಿ, ಹನುಮಂತಪ್ಪ ಗಾಜೇರ, ಎನ್.ಎಂ. ಈಟೇರ್, ಸುರೇಶ ವಾಲ್ಮೀಕಿ ಹಾಗೂ ರಟ್ಟೀಹಳ್ಳಿ ಹಿರೇಕೆರೂರು ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.