ಸಾರಾಂಶ
ರಾಣಿಬೆನ್ನೂರು: ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ದೇಶದಲ್ಲಿ ಸದೃಢ ಹಾಗೂ ಸಮರ್ಥ ಆಡಳಿತ ನೀಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು. ನಗರದ ದೊಡ್ಡಪೇಟೆಯ ಪಂಚಾಚಾರ್ಯ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಸದಸ್ಯತ್ವ ಅಭಿಯಾನ -2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಶಕ್ತ ಬಿಜೆಪಿ ಸಶಕ್ತ ಭಾರತ ವಿಕಸಿತ ಭಾರತ ಗುರಿಯನ್ನು ಬಿಜೆಪಿ ಹೊಂದಿದೆ. ಹಾವೇರಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದ್ದು, 1.50ಲಕ್ಷ ಸದಸ್ಯತ್ವ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರತಿಯೊಬ್ಬ ಕಾರ್ಯಕರ್ತರೂ ಅತೀ ಹೆಚ್ಚು ಸದಸ್ಯತ್ವ ಮಾಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಪಕ್ಷ ಇನ್ನಷ್ಟು ಸದೃಢವಾಗಲಿದೆ. ಬಿಜೆಪಿ ಮೋದಿಜಿ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಎಲ್ಲಾ ಹುದ್ದೆಗಳನ್ನು ಕೆಳಗೆ ಇಟ್ಟು ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಿದಾಗ ನಮ್ಮ ಗುರಿಯನ್ನು ತಲುಪಲು ಸಾಧ್ಯ. ಮುಂಬರುವ ಶಿಗ್ಗಾಂವಿ ಉಪಚುನಾವಣೆ ಬರುವ ಮುಂಚೆಯೇ ಸದಸ್ಯತ್ವ ಅಭಿಯಾನ ಮುಗಿಯಬೇಕು. ಆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ನಂತರ ಪಕ್ಷದ ಸಂಘಟನೆಗೆ ಚುರುಕು ಮೂಡಿದೆ. ಗ್ರಾಪಂ ರೀತಿ ಚುನಾವಣೆ ಮಾಡಿದ್ದಕ್ಕೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಲಭಿಸಿದೆ. ತಾಲೂಕಿನಲ್ಲಿ ಅನೇಕ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಹಾಕುತ್ತಿಲ್ಲ. ಇದರಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತನೂ ಕೂಡ ಶಾಸಕ ಆಗಬಹುದು ಅಂತ ಬಿಜೆಪಿ ತೋರಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಚುನಾವಣೆಯಲ್ಲಿ ಪಕ್ಷ ಗೆಲುವಿನ ದುಂದುಬಿ ಮೊಳಗಿಸಲಿದೆ. ಕಾಂಗ್ರೆಸ್‌ನ ಭ್ರಷ್ಟ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಮುಂದಿನ ಕಾರ್ಯಕರ್ತರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದೇವೆ. ಎಂದರು. ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲಿನಿಂದ ಕಡಿಮೆ ಸ್ಥಾನ ಗಳಿಸಿದ್ದೇವೆ. ಆದ್ದರಿಂದ ಮತ್ತೊಮ್ಮೆ ಪಕ್ಷದ ಅಭ್ಯರ್ಥಿಗಳು ಗೆಲ್ಲಿಸಲು ಈಗಿನಿಂದಲೇ ಶ್ರಮಿಸೋಣ. ನಮ್ಮ ಪಕ್ಷದ ಸಿದ್ದಾಂತಗಳ, ಆಡಳಿತ ವೈಖರಿ ಹಾಗೂ ಕಾಂಗ್ರೆಸ್ ಭ್ರಷ್ಟಾಚಾರ ಜನರಿಗೆ ತಿಳಿಸಬೇಕು. ಎಸ್‌ಸಿ, ಎಸ್‌ಟಿ ಮೀಸಲಾತಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಕಿದ್ದಾರೆ. ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ. ಒಬ್ಬರ ಮೇಲೊಬ್ಬರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ನೆರೆಹಾವಳಿಯಿಂದ ಬಿದ್ದ ಮನೆಗಳಿಗೆ ಪರಿಹಾರದ ಹಣವನ್ನು ಒಂದು ಲಕ್ಷದಿಂದ ಐದು ಲಕ್ಷಕ್ಕೆ ಹೆಚ್ಚಿಗೆ ಮಾಡಿ ಫಲಾನುಭವಿಗಳಿಗೆ ಕೊಟ್ಟರು. ಆದರೆ ಈ ಸರ್ಕಾರದ ಅವಧಿಯಲ್ಲಿ ಮನೆ ಬಿದ್ದವರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಗ್ಯಾರಂಟಿ ಯೋಜನೆಗಳು ಜನರಿಗೆ ಸರಿಯಾಗಿ ಮುಟ್ಟಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ ಸರ್ಕಾರ ಕತ್ತರಿ ಕೆಲಸ ಮಾಡುತ್ತಿದ್ದು ಯಾವುದೇ ಗುದ್ದಲಿ ಪೂಜೆ ಮಾಡುತ್ತಿಲ್ಲ. ನಾವು ಮಾಡಿದ ಕೆಲಸಗಳನ್ನೇ ಉದ್ಘಾಟನೆ ಮಾಡುತ್ತಿದ್ದಾರೆ. ಅವರು ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಕಾರ್ಯಕರ್ತರು ಸದಸ್ಯತ್ವ ಅಭಿಯಾನ ಮಾಡುತ್ತಾ ಇದನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕು. ಕಾರ್ಯಕರ್ತರು ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಸದಸ್ಯತ್ವ ಅಭಿಯಾನ ಗಟ್ಟಿಯಾಗಿ ಮಾಡಬೇಕು. ಅತೀ ಹೆಚ್ಚು ಸದಸ್ಯತ್ವ ಮಾಡಬೇಕು. ಹಾಗೇ ನಮ್ಮಪಕ್ಷದ ಕಾರ್ಯವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು. ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ, ಗ್ರಾಮೀಣ ಭಾಗದ ಅಧ್ಯಕ್ಷ ಪರಮೇಶ ಗೂಳಣ್ಣನವರ, ನಗರ ಘಟಕ ಅಧ್ಯಕ್ಷ ರಮೇಶ ಗುತ್ತಲ, ಉತ್ತರ ಕನ್ನಡ ಜಿಲ್ಲಾ ಪ್ರಭಾರಿ ಭಾರತಿ ಜಂಬಗಿ, ದಾವಣಗೆರೆ ಜಿಲ್ಲಾ ಪ್ರಭಾರಿ ಕೆ. ಶಿವಲಿಂಗಪ್ಪ, ದೀಪಕ ಹರಪನಹಳ್ಳಿ, ಶಿವಕುಮಾರ ನರಸಗೊಂಡರ, ಜಟ್ಟೆಪ್ಪ ಕರೇಗೌಡ್ರ, ಎಸ್.ಎಸ್.ರಾಮಲಿಂಗಣ್ಣನವರ, ಕುಬೇರಪ್ಪ ಕೊಂಡಜ್ಜಿ, ಪ್ರಕಾಶ ಪೂಜಾರ, ಮಾಳಪ್ಪ ಪೂಜಾರ, ಹನುಮಂತಪ್ಪ ದೇವರಗುಡ್ಡ, ಬಸವರಾಜ ಚಳಗೇರಿ, ಉಮೇಶ ಹೊನ್ನಾಳಿ, ಸಿದ್ದು ಚಿಕ್ಕಬಿದರಿ, ಶಿವಕುಮಾರ ಹರ್ಕನಾಳ, ರಮೇಶ ನಾಯಕ, ಕಾರ್ಯದರ್ಶಿ ಅಮೋಘ ಬಾದಾಮಿ, ಅನಿಲ ಸಿದ್ದಾಳಿ, ನವೀನ ಅಡ್ಡಿ, ವಿಜಯ ನಲವಾಗಲ ಮತ್ತಿತರು ಇದ್ದರು.