ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಅಧಿಕಾರಿಗಳು ಇಲಾಖಾವಾರು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇಲ್ಲವಾದಲ್ಲಿ ಅಂತಹವರನ್ನು ವರ್ಗಾವಣೆ ಮಾಡಿಸುವುದಾಗಿ ಈಗಾಗಲೇ ತಿಳಿಸಿರುವುದರಿಂದ ಇದು ಅಂತಿಮ ಎಚ್ಚರಕೆ. ಸಾರ್ವಜನಿಕರು ಯಾವುದೇ ದೂರು ಹೇಳದಂತೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕೆಂದು ಶಾಸಕ ಕೆ. ಷಡಕ್ಷರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮ ಒಳಗೊಂಡಂತೆ ತಾಲೂಕು ಮಟ್ಟದ ಅಧಿಕಾರಿಗಳ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು. ಯಾವ ಇಲಾಖೆಗಳ ಅಧಿಕಾರಿಗಳೇ ಆಗಲಿ ತಮ್ಮ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ತೊಂದರೆ ಬರುವುದಿಲ್ಲ. ನಿಮ್ಮ ಕೆಲಸದ ವೈಖರಿಯನ್ನು ಸಾರ್ವಜನಿಕರು ನೋಡುತ್ತಿರುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಕೆಡಿಪಿ ಸಭೆಗೆ ಸರಿಯಾದ ಸಮಯಕ್ಕೆ ಬರಬೇಕು ತಡವಾಗಿ ಬಂದರೆ ಸಹಿಸುವುದಿಲ್ಲ ಎಂದರು. ಶಿಕ್ಷಣ ಕ್ಷೇತ್ರದ ಬಗ್ಗೆ ಬಿಇಒ ಚಂದ್ರಯ್ಯರ ಕುರಿತು ಮಾತನಾಡಿದ ಶಾಸಕ, ನಿಮ್ಮ ಕೆಲಸ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ರೀತಿ ಇದ್ದರೆ ಸಾಲದು. ಕೆಲಸ ಮಾಡದ ಶಿಕ್ಷಕರನ್ನು ಹಿಡಿತಲ್ಲಿಟ್ಟುಕೊಳ್ಳಬೇಕು. ನಿಮ್ಮ ಬಿಆರ್‌ಸಿಗಳು ಶಾಲೆಗಳಿಗೆ ಸರಿಯಾಗಿ ಭೇಟಿ ನೀಡುತ್ತಿಲ್ಲ. ನಿಮ್ಮ ಕಚೇರಿ ಕಟ್ಟಡ ಬೀಳುವ ಹಂತದಲ್ಲಿದ್ದರೂ ಸುಮ್ಮನೆ ಇದ್ದೀರಿ ಎಂದರು. ನಂತರ ಬಿಇಒ ಚಂದ್ರಯ್ಯ ಪ್ರತಿಕ್ರಿಯಿಸಿ, ಈಗಾಗಲೇ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂಗಳನ್ನು ವಿತರಿಸಲಾಗಿದೆ. ತಾಲೂಕಿನಲ್ಲಿ 36 ಕೊಠಡಿಗಳ ಕೊರತೆಯಿದ್ದು, ಈ ಬಗ್ಗೆ ತಮ್ಮ ಗಮನಕ್ಕೆ ತರಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.80ರಷ್ಟು ಫಲಿತಾಂಶ ಬಂದಿದ್ದು, ಮುಂದಿನ ವರ್ಷ ಹೆಚ್ಚಿನ ಫಲಿತಾಂಶಕ್ಕಾಗಿ ಶ್ರಮಿಸಲಾಗುವುದು ಎಂದರು.ಅದಕ್ಕೆ ಶಾಸಕರು ಸರ್ಕಾರಿ ಶಾಲೆಗಳ ದಾಖಲಾತಿಗಿಂತ ಖಾಸಗಿ ಶಾಲೆಗಳ ದಾಖಲಾತಿ ಹೆಚ್ಚಾಗಿದ್ದು, ಈ ಬಗ್ಗೆ ಶಾಲಾ ಶಿಕ್ಷಕರು ದಾಖಲಾತಿ ಪ್ರಯತ್ನ ಮಾಡಬೇಕೆಂದು ತಿಳಿಸಿದರು. ಎತ್ತಿನಹೊಳೆ ಅಧಿಕಾರಿ ಮೋಹನ್ ಮಾತನಾಡಿ, ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮಾರುಗೊಂಡನಹಳ್ಳಿ, ನಾಗತಿಹಳ್ಳಿ, ಭೈರನಾಯಕನಹಳ್ಳಿ, ಬೊಮ್ಮೇನಹಳ್ಳಿ ಭಾಗಗಳಲ್ಲಿ ಕಾಮಗಾರಿ ನಡೆಯುತ್ತಿದೆ ಎಂದರು.
ಅದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಆದಷ್ಟು ಬೇಗ ಕಾಮಗಾರಿಗಳನ್ನು ಮುಗಿಸಬೇಕು. ಡಿಸೆಂಬರ್‌ಗೆ ಎತ್ತಿನಹೊಳೆ ನೀರು ನಮ್ಮ ಭಾಗಕ್ಕೂ ಹರಿಯಲಿದೆ. ಹೆಚ್ಚು ಮಳೆಯಾಗಿರುವ ಕಾರಣ ನೀರಿಗೆ ಯಾವುದೇ ತೊಂದರೆಯಿಲ್ಲ. ಡಿಸೆಂಬರ್‌ವರೆಗೂ ನೀರು ಕೊಡುವುದಾಗಿ ಮಂತ್ರಿಗಳು ಹೇಳಿದ್ದು, ಅಷ್ಟರೊಳಗೆ ತಾಲೂಕಿನ ಕೆರೆಗಳನ್ನು ತುಂಬಿಸಿಕೊಳ್ಳುವ ಜವಾಬ್ದಾರಿ ಸಣ್ಣ ನೀರಾವರಿ ಇಲಾಖೆ ಹಾಗೂ ಹೇಮಾವತಿ ಅಧಿಕಾರಿಗಳದ್ದಾಗಿದೆ. ಎಲ್ಲಿಯೂ ನೀರಿನ ಸಮಸ್ಯೆ ಬರಬಾರದು ಎಂದರು. ಪಶು ಸಂಗೋಪನಾ ಇಲಾಖೆಯ ಡಾ. ನಂದೀಶ್ ಮಾತನಾಡಿ, ಜಾನುವಾರುಗಳ ಕಾಲುಬಾಯಿ, ರೇಬಿಸ್, ಕಂದು ರೋಗಕ್ಕೆ ಹಾಗೂ ಕುರಿ ಮೇಕೆಗಳಲ್ಲಿ ಕರುಳಬೇನೆ ರೋಗಕ್ಕೆ ಲಸಿಕೆ ಹಾಕಲಾಗಿದ್ದು, ಮಳೆಯಾಗಿರುವ ಹಿನ್ನಲೆಯಲ್ಲಿ ರೈತರಿಗೆ ಮೇವಿನ ಸಮಸ್ಯೆ ಇಲ್ಲ ಎಂದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಪವನ್ ವರದಿ ನೀಡಲು ಮುಂದಾದಾಗ ನೀವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲ. ಇಲ್ಲಿ ಉಳಿಯಬೇಕಾದರೆ ವೇಗವಾಗಿ ಕೆಲಸ ಮಾಡಿ ಎಂದರು.ನಂತರ ಡಾ.ಪವನ್ ಪ್ರತಿಕ್ರಿಯಿಸಿ, ಪ್ರಸ್ತುತ ವರ್ಷ ಉತ್ತಮ ಮಳೆಯಾಗಿದ್ದು, ೨೨೯೦೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬಿತ್ತನೆಯಾಗಿದೆ. ರೈತರಿಗೆ ಅಗತ್ಯ ಗೊಬ್ಬರ, ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು ಪ್ರಸ್ತುತ ವರ್ಷ 11 ಕೃಷಿಹೊಂಡಗಳನ್ನು ತೆಗೆಸಿ ಅಗತ್ಯ ಮುಂಜಾಗ್ರತ ಕ್ರಮವಹಿಸಲಾಗಿದೆ ಎಂದರು. ಶಾಸಕರು ಸಿಡಿಪಿಒ, ಕಂದಾಯ, ಆರೋಗ್ಯ, ನಗರಸಭೆ, ಅಬಕಾರಿ, ಸಾರಿಗೆ, ಅರಣ್ಯ, ರೇಷ್ಟೆ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳ ಮಾಹಿತಿ ಪಡೆದುಕೊಂಡರು. ತಹಸೀಲ್ದಾರ್ ಪವನ್‌ಕುಮಾರ್, ಎಚ್.ಹುಲಿರಾಜ, ತಾ.ಪಂ ಇಓ ಸುದರ್ಶನ್, ನಗರಸಭೆ ಅಧ್ಯಕ್ಷೆ ಯಮುನಾ, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್, ಎಪಿಎಂಸಿ ಕಾರ್ಯದರ್ಶಿ ನ್ಯಾಮನಗೌಡ, ಪಶುಇಲಾಖೆ ನಂದೀಶ್, ಬೆಸ್ಕಾಂ ಮನೋಹರ್, ಸಣ್ಣ ನೀರಾವರಿ ಇಲಾಖೆ ದೊಡ್ಡಯ್ಯ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಿವಕುಮಾರ್ ಇದ್ದರು.