ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಹುಕೋಟಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳುತ್ತಿದ್ದ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪಟ್ಟಣದಲ್ಲೇ ಪೊಲೀಸರು ತಡೆದರು.ಪಟ್ಟಣದ ವಿವಿಧ ಭಾಗಗಳಿಂದ ಮೈಸೂರಿಗೆ ತೆರಳಲು ತಯಾರಿ ನಡೆಸುತ್ತಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಹಲವರನ್ನು ಕರೆತಂದು ಪಟ್ಟಣದ ಪ್ರವಾಸಿ ಮಂದಿರ ಬಳಿ ಸೇರಿಸಿ ಗೇಟ್ ಬಳಿ ಪೊಲೀಸರ ಭದ್ರತೆ ಕಲ್ಪಿಸಿದರು.
ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಎಂ.ಎನ್.ಕೃಷ್ಣ ಮಾತನಾಡಿ, ಭ್ರಷ್ಟಾಷಾರದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನದಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಹೋರಾಟದ ಹಕ್ಕು ಕಿತ್ತುಕೊಳ್ಳಲು ಹೊರಟಿದೆ. ಮುಡಾದಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ. ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇಂಥ ಬೆದರಿಕೆಗೆ ಬಿಜೆಪಿ ಬಗ್ಗುವುದಿಲ್ಲ, ಮುಂದಿನ ದಿನಗಳಲ್ಲಿ ನಾವು ಹೋರಾಟ ಮಾಡಿಯೇ ತಿರುತ್ತೇವೆ ಎಂದು ಸವಾಲು ಹಾಕಿದರು.
ಪ್ರಧಾನ ಕಾರ್ಯದರ್ಶಿ ಕ್ಯಾತನಹಳ್ಳಿ ಅಶೋಕ್ ಮಾತನಾಡಿ, ಪೊಲೀಸರ ಮೂಲಕ ಕಾಂಗ್ರೆಸ್ ಬಿಜೆಪಿಯ ಹೋರಾಟವನ್ನು ತಡೆಯಲು ಮುಂದಾಗಿರುವುದು ಸರಿಯಲ್ಲ, ಇವರ ಭ್ರಷ್ಟಾಚಾರದಿಂದ ರಾಜ್ಯದ ಜನ ರೋಸಿಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಇವರನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಕಿಡಿಕಾರಿದರು.ಮುಖಂಡ ಹೆಬ್ಬಣಿ ಬಸವರಾಜು ಮಾತನಾಡಿದರು. ಸಿಪಿಐ ಬಿ.ಜಿ.ಮಹೇಶ್, ಪಿಎಸ್ಐಗಳಾದ ವಿ.ಸಿ.ಅಶೋಕ್, ಜಯಲಕ್ಷ್ಮಮ್ಮ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ನಗರ ಘಟಕದ ಅಧ್ಯಕ್ಷ ವೇಣು, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮೋಹನ್, ಪ್ರಮುಖರಾದ ಲೋಕೇಶ್, ಚಿಕ್ಕಣ್ಣ, ಶಿವಲಿಂಗಸ್ವಾಮಿ, ಚಿಕ್ಕಣ್ಣ, ಕೆ.ಸಿ.ನಾಗೇಗೌಡ, ದೇವರಾಜು, ಬಿಜಿಪುರ ಬಸವರಾಜು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))