ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಇಲ್ಲದಿದ್ದರು ಸಹ ವಸತಿ ನಿಲಯ ಮಕ್ಕಳಿಗೆ ನೀಡುವ ಆಹಾರ ಧಾನ್ಯ ಎತ್ತುವಳಿ ಮಾಡಲಾಗುತ್ತಿದೆ. ಹಾಸ್ಟೆಲ್‌ನಲ್ಲಿ ದಾಖಲಾತಿ ಪ್ರಕಾರ ಹಾಜರಾತಿ ಇಲ್ಲದಿದ್ದರೆ ಆಹಾರ ಧಾನ್ಯ ಇನ್ನಿತರ ಸರ್ಕಾರದ ಸವಲತ್ತುಗಳು ಯಾಕೆ ಬಿಲ್ಲು ಮಾಡಿ ಪಡೆಯುತ್ತಿದ್ದೀರಿ? ಬೋಗಸ್ ಕೆಲಸ ಮಾಡಿದರೆ ಹುಷಾರ್ ಎಂದು ಶಾಸಕ ಡಾ.ಅವಿನಾಶ ಜಾಧವ್ ಖಡಕ್ ಎಚ್ಚರಿಕೆ ನೀಡಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ೧೪ ಬಿಸಿಎಂ, ೧೦ ಸಮಾಜ ಕಲ್ಯಾಣ ಇಲಾಖೆ, ೫ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಮಕ್ಕಳ ಸಂಖ್ಯೆ ಕಮ್ಮಿ ಇದ್ದರು ಸಹ ಅವರ ಹೆಸರಿನಲ್ಲಿ ಆಹಾರ ಧಾನ್ಯ ಲೂಟಿ ಮಾಡುತ್ತಿರುವ ಬಗ್ಗೆ ಅನೇಕ ಕಡೆಗಳಿಂದ ದೂರು ಬಂದಿವೆ. ಮಕ್ಕಳಿಗೆ ಕೊಡುವ ಸೌಲಭ್ಯಗಳು ಯಾಕೆ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಕೊಳ್ಳಲು ಸರಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಇಒ ವಿ.ಲಚಮಯ್ಯ ಮಾತನಾಡಿ, ತಾಲೂಕಿನಲ್ಲಿ ಒಟ್ಟು ೩೧೯ ಸರಕಾರಿ ಪ್ರಾಥಮಿಕ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಖಾಸಗಿ ಶಾಲೆಗಳು ಒಟ್ಟು ೪೨೮ ಇವೆ. ಆದರೆ ೪೨ ಶಾಲೆಗಲ್ಲಿ ಶಿಕ್ಷಕರಿಲ್ಲ, ೫೧ ಶಾಲೆಗಳಿಗೆ ಒಬ್ಬರೇ ಶಿಕ್ಷಕರೆ ಕಾರ್ಯನಿರ್ವಹಿಸುತ್ತಿದ್ದಾರೆ. ೪೨ ಶಾಲೆಗಳಿಗೆ ಇನ್ನು ಶಿಕ್ಷಕರ ನೇಮಕಾತಿ ಇಲ್ಲ. ಹಾಗಾಗಿ ಗೌರವ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಶೇ.೩೫ ಆಗಿದೆ ಎಂದು ಸಭೆಯಲ್ಲಿ ತಿಳಿಸಿದಾಗ ಶಾಸಕರು ಯಾಕೇ ಫಲಿತಾಂಶ ಕಡಿಮೆ ಆಗಿದೆ ಎಂದು ಕೇಳಿದಾಗ, ಇದಕ್ಕೆ ವೆಬ್‌ಕಾಸ್ಟಿಂಗ್ ಕಾರಣವಾಗಿದ್ದು, ಮಕ್ಕಳಲ್ಲಿ ಭಯವನ್ನುಂಟು ಮಾಡಿದೆ. ೪೩೫ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು.ಸರಕಾರಿ ಶಾಲೆಯ ಮಕ್ಕಳಿಗೆ ಕೊಡುವ ಆಹಾರ ಧಾನ್ಯ ಬಹಳ ಕಳಪೆಮಟ್ಟದಾಗಿವೆ. ಅಕ್ಕಿ, ಬೇಳೆ, ಗುಣಮಟ್ಟ ಸರಿಯಾಗಿಲ್ಲದಿದ್ದರೆ ನಮಗೆ ತಿಳಿಸಿರಿ. ಮೊಟ್ಟೆ ಬಾಳೆ ಹಣ್ಣು ತರಕಾರಿ, ಹಾಲು ಮಕ್ಕಳಿಗೆ ಕೊಡಬೇಕು ಎಂದು ಶಾಸಕರು ಬಿಸಿಯೂಟ ಅಧಿಕಾರಿ ಜಯಪ್ಪ ಚಾಪೆಲ ಅವರಿಗೆ ಸೂಚಿಸಿದರು.
ಜಿಪಂ ಎಇಇ ಪ್ರವೀಣಕುಮಾರ ಮಾತನಾಡಿ, ಪಿಆರಇ ಇಲಾಖೆಯಲ್ಲಿ ಸರಕಾರದ ಕ್ರಿಯಾ ಯೋಜನೆಗಳ ದಾಖಲೆಗಳೇ ಇಲ್ಲ. ಸರಕಾರದ ಕಾಮಗಾರಿಗಳ ದಾಖಲೆಗಳು ಹುಡುಕಾಟ ಮಾಡಬೇಕಾಗಿದೆ. ಕೆಲವು ದಾಖಲೆಗಳು ಸಿಕ್ಕಿವೆ ಅದನ್ನೇ ಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಕೆಕೆಆರ್‌ಡಿಬಿ, ಸಂಸದರ, ಶಾಸಕರ ಅನುದಾನ, ಎಮ್‌ಎಲ್‌ಸಿ ಅನುದಾನ ಪ್ರಗತಿ ಮಾಹಿತಿಯನ್ನು ನೀಡಿದರು.ಎಇಇ ಇಂದುಧರ ಮಂಗಲಗಿ ಮಾತನಾಡಿ, ತಾಲೂಕಿನಲ್ಲಿ ೨೧ ಸಣ್ಣನೀರಾವರಿ ಕೆರೆಗಳಿವೆ. ನಾಗಾಇದಲಾಯಿ ಸಣ್ಣ ನೀರಾವರಿ ಕೆರೆಯ ನವೀಕರಣಕ್ಕಾಗಿ ೯ಕೋಟಿ ರು. ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದರು. ಗಂಗನಪಳ್ಳಿ, ಭ್ಯುಯಾರ ಶಾದೀಪೂರ ಇನ್ನಿತರ ಕಡೆಗಳಲ್ಲಿ ಬ್ಯಾರೇಜ್ ನಿರ್ಮಾಣ ನಡೆಯುತ್ತಿದೆ ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಇಲಾಖೆ ಪ್ರಗತಿ ಹೇಳುತ್ತಿರುವಾಗ ಶಾಸಕರು ಮಧ್ಯ ಪ್ರವೇಶಿಸಿ ನೀವು ಇಲಾಖೆಯಲ್ಲಿ ಕರ್ತವ್ಯದಲ್ಲಿ ಸರಿಯಾಗಿ ಇರುವುದಿಲ್ಲ ಫೋನ್ ಸ್ವಿಚ್ ಆಪ್ ಆಗಿರುತ್ತದೆ. ಇಷ್ಟ ಇಲ್ಲದಿದ್ದರೆ ಬೇರೆ ಕಡೆಗೆ ವರ್ಗಾವಣೆ ಮಾಡಿಕೊಳ್ಳಿರಿ ನಾನೇ ಶಿಫಾರಸು ಮಾಡುತ್ತೇನೆ ಎಂದು ಶಾಸಕರು ಎಚ್ಚರಿಕೆ ನೀಡಿದರು.ಸಭೆಯಲ್ಲಿ ತಾಪಂ ಅಧಿಕಾರಿ ಶಂಕರ ರಾಠೋಡ, ಡಾ.ಮಹಮ್ಮದ ಗಫಾರ, ಸಿಡಿಪಿಓ ಸವಿತಾ, ಬಿಸಿಎಂ ಅಧಿಕಾರಿ ಅನುಸೂಯ ಚವ್ಹಾಣ ಅರಣ್ಯಾಧಿಕಾರಿಗಳಾದ ಶಾಂತುರೆಡ್ಡಿ, ಶ್ರೀಕಾಂತ, ಭಾಗಪ್ಪಗೌಡ, ಪಿಡಿಓ ಗೊವಿಂದರೆಡ್ಡಿ, ದಶರಥ ಪಾತ್ರೆ, ಎಇಇ ರಾಜಕುಮಾರ ಪಾಟೀಲ, ಅಶೋಕ ಪಾಟೀಲ, ಎಇಇ ಬಸವರಾಜ ಬೈನೂರ, ಜೆಇ ಯುವರಾಜ ರಾಠೋಡ, ಎಇಇ ಚೇತನ ಕಳಸ್ಕರ, ಎಇಇ ತ್ರಿಲೋಚನ್ ಜಾಧವ್ ಇನ್ನಿತರು ಭಾಗವಹಿಸಿದ್ದರು.೧೨ಜಿಯು-ಸಿಎಚ್‌ಐ೧
ಚಿಂಚೊಳಿ ತಾಪಂ ಸಭಾಂಗಣದಲ್ಲಿ ಶಾಸಕ ಡಾ.ಅವಿನಾಶ ಜಾಧವ್ ಅಧ್ಯಕ್ಷತೆ ಕೆಡಿಪಿ ಸಭೆ ನಡೆಯಿತು.