ಕನ್ನಡಪ್ರಭ ವಾರ್ತೆ ಶಿರಸಿ

ಮಳೆಮಾಪನ ನಿರ್ವಹಣೆಯ ವೈಫಲ್ಯ ಖಂಡಿಸಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಎಸಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಉತ್ತರ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ಸದಾನಂದ ಭಟ್ ಮಾತನಾಡಿ, ಕೇಂದ್ರ ಸರಕಾರ ರೈತರ ಸಂಕಷ್ಟಕ್ಕೆ ಪರಿಹಾರ ನೀಡಲೆಂದು ಹವಾಮಾನ ಆಧಾರಿತ ಬೆಳೆವಿಮೆಯನ್ನು ರಾಜ್ಯ ಸರಕಾರದ ಸಹಯೋಗದಲ್ಲಿ ಜಾರಿಗೆ ತಂದಿದ್ದು, ವಾಣಿಜ್ಯ ಬೆಳೆಗಳಿಗೆ ವಿಮೆ ಮಾಡಿಸುತ್ತಾ ಬಂದಿದ್ದಾರೆ. ಕಳೆದ 2-3 ವರ್ಷಗಳಿಂದ ಕರ್ನಾಟಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಸರಿಯಾಗಿ ನಿರ್ವಹಿಸದೆ ಇರುವ ಕಾರಣ ಮಳೆಮಾಪನ ಕೇಂದ್ರಗಳು ಬಹುತೇಕ ಹಾಳಾಗಿ ರೈತರಿಗೆ ವಿಮಾ ಪರಿಹಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತ್ ಮೂರ್ತಿ ಹೆಗಡೆ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ನೀಡಿದರೂ ಅದನ್ನು ಗಾಳಿಗೆ ತೂರಿ ಮಳೆಮಾಪನ ಕೇಂದ್ರಗಳನ್ನು ಸರಿಪಡಿಸದೆ ರೈತರನ್ನು ರಾಜ್ಯ ಸರಕಾರ ಸಂಕಷ್ಟಕ್ಕೆ ದುಡುತ್ತಿದೆ. ಈ ಹಿಂದಿನ ಎರಡು ವರ್ಷದ ವಿಮೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿಶೇಷ ಪ್ರಯತ್ನದಿಂದ ವಿಮೆ ಪರಿಹಾರದ ಹಣ ರೈತರಿಗೆ ಸಿಕ್ಕಂತಾಗಿದೆ.

ರಾಜ್ಯ ಕಾಂಗ್ರೆಸ್ ಸರಕಾರ ಇನ್ನೂ ಟೆಂಡರ್ ಕರೆದಿದ್ದೇವೆ, ಹಣಕಾಸು ಇಲಾಖೆ ಅನುಮತಿ ಕೊಟ್ಟ ನಂತರ ಅನುಷ್ಠಾನಗೊಳಿಸುತ್ತೇವೆ ಎಂದು ಸಬೂಬು ಹೇಳುತ್ತಾ ರೈತರ ಕುರಿತು ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.


ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ರಮೇಶ್ ನಾಯ್ಕ್ ಮಾತನಾಡಿದರು.

ಬಳಿಕ ಬಿಜೆಪಿ ಕಾರ್ಯಕರ್ತರು ಶಿರಸಿ ವಿಭಾಗ ಅಧಿಕಾರಿ ಚಂದ್ರಶೇಖರ್ ಆರ್.ಜಿ. ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ರೈತರು ಇದ್ದರು.