ಕೊಪ್ಪಳ: ಬಲ್ಡೋಟ ತೊಲಗಿದರೆ ಮಾತ್ರ ಕೊಪ್ಪಳ-ಭಾಗ್ಯನಗರಕ್ಕೆ ಭವಿಷ್ಯ.ಇಲ್ಲದಿದ್ದರೆ ಒಂದೂವರೆ ಲಕ್ಷ ಜನರು ಅನಾರೋಗ್ಯದ ದುಷ್ಪರಿಣಾಮ ಎದುರಿಸಬೇಕಾಗುತ್ತದೆ, ಅನುಮಾನ ಇದ್ದವರು ಪಕ್ಕದ ಜಿಂದಾಲಿಗೆ ಹೋಗಿ ನೋಡಿ ಬನ್ನಿ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಆತಂಕ ವ್ಯಕ್ತಪಡಿಸಿದರು.

ಬಲ್ಡೋಟಾ ವಿರುದ್ಧ ಧರಣಿ ಸತ್ಯಾಗ್ರಹ 200 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರದ ಜನರ ಆರೋಗ್ಯ ಹಾನಿ ಮಾಡಲು ವಿಸ್ತರಣೆ ಬಯಸಿ ಬರುತ್ತಿರುವ ಬಲ್ಡೋಟ ಕಾರ್ಖಾನೆ ಬಂದ್ ಆಗಬೇಕು. ಇಲ್ಲಿನ ಜನಪ್ರತಿನಿಧಿಗಳು ಜನರ ಪರವಾಗಿ ಇದ್ದಾರೆ ಎಂಬ ಭರವಸೆ ಇದೆ, ಅದು ಕೂಡಲೇ ಈಡೇರಬೇಕಿದೆ, ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2011ರಿಂದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕದಿಂದ ಅರ್ಧ ಊರು ಮಾಲಿನ್ಯ ಬಾಧಿವಾಗುತ್ತಿದ್ದು, ನಗರದ ಜನರ ಆರೋಗ್ಯದ ದುಷ್ಪರಿಣಾಮ ತಡೆಯಲು ಈ ಘಟಕ ಬಂದ್ ಮಾಡಿ, ಜನರ ಆರೋಗ್ಯ ಖಾತ್ರಿಪಡಿಸಬೇಕು. ಬಲ್ಡೋಟ ಕಂಪನಿಯು ಬಸಾಪುರ ಗ್ರಾಮದ ಕೆರೆ ಅನಧಿಕೃತವಾಗಿ ಮಂಜೂರಿ ಹೆಸರಿನಲ್ಲಿ ವಶಪಡಿಸಿಕೊಂಡಿದ್ದು, ಸುತ್ತಲಿನ ಸಾವಿರಾರು ಜಾನುವಾರುಗಳ ನೀರಿನ ಅಭಾವವಾಗಿದೆ. ಕಂಪನಿ ಹಾಕಿದ ಕಾಂಪೌಂಡ್ ತೆರವು ಮಾಡಿ ಜಾನುವಾರು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕು. ತುಂಗಭದ್ರ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆ ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆ ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕು ಎಂದು ಧರಣಿ ನಡೆಯುತ್ತಿದೆ.

18.05.2026ರ ಸೋಮವಾರ ಇಲ್ಲಿ ನಡೆಯುತ್ತಿರುವ ಧರಣಿ 200ನೇ ದಿನ ತಲುಪುತ್ತದೆ. ಇದರಂಗವಾಗಿ ಎರಡು ದಿನಗಳ ಕಾಲ ಬಾಧಿತ ಗ್ರಾಮ ಮತ್ತು ಕೊಪ್ಪಳ, ಭಾಗ್ಯನಗರದಲ್ಲಿ ಆಟೋ ಮೂಲಕ ಪ್ರಚಾರ ಮಾಡಿ ಮಾಲಿನ್ಯದ ಕುರಿತು ಜನಜಾಗೃತಿ ಮಾಡಲಾಗುತ್ತಿದೆ. ಆಟೋ ಪ್ರಚಾರಕ್ಕೆ ಚಾಲನೆ ಕೊಟ್ಟು ಮಾತನಾಡಿದ ಗೊಂಡಬಾಳ, ಇದು ನಗರದ ಪ್ರಜ್ಞಾವಂತರು, ಸಾಮಾಜಿಕ, ರಾಜಕೀಯ ಕ್ಷೇತ್ರದ ಜವಾಬ್ದಾರಿ ಹೊತ್ತವರು ಮುಂದೆ ಬಂದು ಹೋರಾಟಕ್ಕೆ ಹೆಗಲು ಕೊಡಬೇಕು ಎಂದರು.

ಧರಣಿಯಲ್ಲಿ ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಎಸ್.ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ ಲಾಚನಕೇರಿ, ವಿಜಯಮಹಾಂತೇಶ ಹಟ್ಟಿ, ಮೈಲಾರಪ್ಪ ಅರಳಿಗಿಡದ, ರವಿಕುಮಾರ ಹಣವಾಳ,ಈರಣ್ಣ ಬಡಿಗೇರ, ಶಿವಪ್ಪ ಜಲ್ಲಿ, ಗಂಗಮ್ಮ ಕುರುಗೋಡು ಇದ್ದರು.