ಸಾರಾಂಶ
ರೋಣ: ಬರ ಕಾಮಗಾರಿ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಶೀಘ್ರ ಸ್ಪಂದಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಜರುಗಿತು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗ ಮನವಿ ಸಲ್ಲಿಸಿದರು.ಈ ವೇಳೆ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ಬರಗಾಲ, ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಕಂಗಾಲಾದ ರೈತರ ಗಾಯದ ಮೇಲೆ ಬರೆ ಎಳೆಯದಂತೆ ಇನ್ನು ಮುಂದೆ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪಡೆಯಬೇಕಾದರೇ ಸ್ವಂತ ಖರ್ಚಿನಲ್ಲಿ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬ, ತಂತಿ ಸೇರಿದಂತೆ ವಿದ್ಯುತ್‌ಗೆ ಸಂಬಂಧಿಸಿದ ಸಾಮಗ್ರಿಗಳನ್ನು ರೈತರೇ ಖರೀದಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಮಾಡಿದ್ದು ತೀವ್ರ ಖಂಡನೀಯವಾಗಿದೆ. ಈ ಹಿಂದೆ ಪ್ರತಿ ನೀರಾವರಿ ಪಂಪ್‌ಸೆಟ್‌ಗಳಿಗೆ ಕೇವಲ ₹ 24 ಸಾವಿರ ಶುಲ್ಕ ನಿಗದಿಯಾಗಿತ್ತು. ಸರ್ಕಾರದ ಈ ಆದೇಶದಿಂದ ಕನಿಷ್ಠ ₹ 2 ಲಕ್ಷ ನೀಡಿ ವಿದ್ಯುತ್ ಸಂಪರ್ಕ ಪಡೆಯಬೇಕಾದ ಅನಿವಾರ್ಯತೆಗೆ ರೈತರನ್ನು ನೂಕಲಾಗಿದೆ. ಮಳೆಯ ಅಭಾವದಿಂದ ಬರಗಾಲ ಆವರಿಸಿದ್ದು, ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗಿದೆ. ಪ್ರಸ್ತುತ ಹಿಂಗಾರಿನಲ್ಲಿ ಸಹಿತ ಮಳೆಯ ಕೊರತೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಸರ್ಕಾರದ ವರದಿ ಪ್ರಕಾರ ರಾಜ್ಯದಲ್ಲಿ 223 ತಾಲೂಕಗಳು ಬರಪೀಡಿತ ತಾಲೂಕಗಳೆಂದು ಘೋಷಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 250ಕ್ಕಿಂತ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇದು ದುರ್ದೈವದ ಮತ್ತು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದರು ಬಿಜೆಪಿ ಹಿರಿಯ ಮುಖಂಡ ಅಶೋಕ ನವಲಗುಂದ ಮಾತನಾಡಿ, ಮಳೆ ಅಭಾವದಿಂದ ಸಂಕಷ್ಟಕ್ಕಿಡಾದ ರೈತರು ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲಿಕ್ಕೆ ರೈತರು ತೆರೆದ ಬಾವಿ, ಕೊಳವೆ ಬಾವಿಗಳನ್ನು ಆಶ್ರಯಿಸುವಂತಾಗಿದೆ. ಆದರೆ ಹಗಲು ವೇಳೆ ವಿದ್ಯುತ್ ಪೂರೈಕೆಯಾಗಲಾರದೇ ಅನಿಯಮಿತ ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ರೈತರು ಬಸವಳಿದು ಹೋಗುವಂತಾಗಿದೆ. ಕೂಡಲೇ ಸರ್ಕಾರ ಬೆಳೆ ಸಾಲ ಮನ್ನಾ ಮಾಡಬೇಕು. ಬೆಳೆ ಹಾನಿ ಪರಿಹಾರ ವಿತರಿಸಬೇಕು. ರೈತರಿಗಾಗಿ ಜಾರಿಯಾದ ಯೋಜನೆಗಳಿಗೆ ಅನುದಾನ ಕೊರತೆ ಮುಂದಿಟ್ಟು ಯೋಜನೆ ರದ್ದು ಮಾಡಲು ಮುಂದಾಗಿರುವುದು ಖಂಡನೀಯವಾಗಿದೆ. ಕೂಡಲೇ ರೈತರು ಎದುರಿಸುತ್ತಿರುವ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ರೈತರೊಂದಿಗೆ ಬಿಜೆಪಿ ಬೀದಿಗಿಳಿದು ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಮನವಿ ಪತ್ರದ ಮೂಲಕ ಎಚ್ಚರಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ನಾಗರಾಜ ಕೆ. ಮಾತನಾಡಿ, ಈ ಕೂಡಲೇ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುವುದು ಎಂದರು.ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ಬಿಜೆಪಿ ಹಿರಿಯ ಮುಖಂಡ ಅಶೋಕ ನವಲಗುಂದ, ಉಮೇಶ ಮಲ್ಲಾಪೂರ, ಮಲ್ಲು ಮಾದರ, ನಿಂಗಪ್ಪ ಗುರಿಕಾರ, ಅಶೋಕ ಪಟ್ಟಣಶೆಟ್ಟಿ, ಬಾಳು ಬೊಸಲೆ, ಶರಣಪ್ಪ ಕಂಬಳಿ, ಶಿವಾನಂದ ಜಿಡ್ಡಿಬಾಗಿಲ, ರಮೇಶ ವಕ್ಕರ, ಅಶೋಕ ದೇಶಣ್ಣವರ, ರವಿ ಮಾದರ, ವೀರಣ್ಣ ಪೊಲೀಸಪಾಟೀಲ, ಶರಣಪ್ಪ ಪ್ಯಾಟಿ, ಹನಮಂತಪ್ಪ ಡೊಳ್ಳಿನ, ಬಸನಗೌಡ ಪಾಟೀಲ, ಮೈಲಾರಪ್ಪ ಮಾದರ, ನೀಲಪ್ಪ ಹವಳಪ್ಪನವರ, ಮುತ್ತಣ್ಣ ಜೋಗಣ್ಣವರ, ಮಂಜು ದೊಡ್ಡಮನಿ, ಶರಣಪ್ಪ ಸೂಳಿಕೇರಿ, ಬಸವಂತಪ್ಪ ಮಾರನಬಸರಿ, ದೊಡಮೇಟಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.