ಕನ್ನಡಪ್ರಭ ವಾರ್ತೆ ಮೇಲುಕೋಟೆ

ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡು ಜಗತ್ತಿನ ಅತ್ಯಂತ ಶ್ರೇಷ್ಠ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಕರೆ ನೀಡಿದರು.

ಪುತಿನ ಟ್ರಸ್ಟ್, ಕನ್ನಡ ಸಂಸ್ಕೃತಿ ಇಲಾಖೆ, ಜನಪದ ಸೇವಾ ಟ್ರಸ್ಟ್ ಹಾಗೂ ದೃಶ್ಯ ಟ್ರಸ್ಟ್ ಜಂಟಿಯಾಗಿ ಸುಗ್ಗಿ ಮಕ್ಕಳ ನಾಟಕೋತ್ಸವದ ವೇಳೆ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇಡೀ ವಿಶ್ವದ ಮೂರು ಸಾವಿರ ಭಾಷೆಗಳಲ್ಲಿ ಕನ್ನಡ ಭಾಷೆಗೆ ಪ್ರಾಚೀನತೆಯಲ್ಲಿ ಐದನೇ ಸ್ಥಾನವಿದೆ. ಕನ್ನಡ ಭಾಷಾ ಬೆಳವಣಿಗೆಗೆ ನಾವೆಲ್ಲ ಸಂಕಲ್ಪಮಾಡಬೇಕು. ಶಾಲಾ ಹಂತದಿಂದಲೇ ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಬೇಕು ಎಂದರು.

ಯುವಕರು ಮೊಬೈಲ್ ಗೀಳಿನಿಂದ ದೂರವಾಗಿ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪುಸ್ತಕಗಳು ಜ್ಞಾನದ ಬಂಡಾರವಾಗಿದ್ದು, ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡುತ್ತವೆ. ಈ ಕಾರಣದಿಂದಲೇ ನಾನು ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದೇನೆ. ಎಲ್ಲರೂ ನಮ್ಮ ಪುಸ್ತಕದ ಮನೆಗೆ ಬಂದು ಉಚಿತವಾಗಿ ಬಳಸಿಕೊಳ್ಳುವ ಮೂಲಕ ಜ್ಞಾನ ಹೆಚ್ಚಿಸಿಕೊಂಡು ಕನ್ನಡಭಾಷೆಯನ್ನು ಬೆಳೆಸುವ ಕೆಲಸಮಾಡಿ ಎಂದರು.


ನೆರೆಹೊರೆಯವರೊಂದಿಗೆ ಆತ್ಮೀಯತೆಯಿಂದಿರಿ ಸಾರ್ವಜನಿಕ ಸೇವೆಯಲ್ಲಿ ಲಂಚ ಸ್ವೀಕರಿಸಬಾರದು. ಪುಸ್ತಕಗಳನ್ನು ಓದುವುದನ್ನು ಅಭ್ಯಾಸ ಮಾಡಿ ಇತರರರಿಗೂ ಸಾಧ್ಯವಾದಷ್ಟು ಪುಸ್ತಕಗಳನ್ನು ಓದಲು ಪ್ರೇರೇಪಿಸಿ ಎಂಬ ನನ್ನ ಗುರುಗಳ ಸಂದೇಶವನ್ನು ಜೀವನದಲ್ಲಿ ಪಾಲಿಸಿದ್ದೇನೆ. ಈ ಪ್ರೇರಣೆಯೇ ನನಗೆ ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ ಎಂದರು.

ನಾನು ಪ್ರಶಸ್ತಿಗಾಗಿ ಯಾವುದೇ ಅರ್ಜಿಯನ್ನೂ ಹಾಕಿಲ್ಲ. ಯಾವುದೇ ಪ್ರಶಸ್ತಿಬೇಕೆಂದು ಆಸೆ ಪಟ್ಟವನೂ ಅಲ್ಲ. ಆದರೆ, ಭಾರತ ಸರ್ಕಾರವೇ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ನನಗೆ ಅಚ್ಚರಿ ಹಾಗೂ ಅಭಿಮಾನ ಮೂಡಿಸಿದೆ. ಇದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನವೂದಯ ಸಾಹಿತ್ಯದ ರತ್ನತ್ರಯರಲ್ಲೊಬ್ಬರಾದ ನಾಡು ಕಂಡ ಶ್ರೇಷ್ಟಕವಿ ಪು.ತಿ.ನ ತವರು ಹಾಗೂ ಅವರದೇ ಹೆಸರಿನ ಕಲಾಮಂದಿರದಲ್ಲಿ ನನ್ನನ್ನು ಕರೆಸಿ ಅಭಿನಂದಿಸಿರುವುದಕ್ಕೆ ಟ್ರಸ್ಟ್‌ಗೆ ಅಭಾರಿಯಾಗಿದ್ದೇನೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಪುತಿನ ಟ್ರಸ್ಟ್ ಅಧ್ಯಕ್ಷ ಪ್ರೊ.ಕೃಷ್ಣೇಗೌಡ ಮಾತನಾಡಿ, ಅಂಕೇಗೌಡರ ಪುಸ್ತಕಪ್ರೇಮ ಅಪ್ರತಿಮವಾದದ್ದು. ಹಣಕಾಸಿನ ಮುಗ್ಗಟ್ಟಿನ ನಡುವೆಯೂ ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಿ ಸಾವಿರಾರು ಮಂದಿಗೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿ ಕನ್ನಡಭಾಷೆ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.

ಅಂಕೇಗೌಡರ ಪುಸ್ತಕ ಮನೆಯಲ್ಲಿ ಜಗತ್ತಿನ ಎಲ್ಲಾ ಭಾಷೆಗಳ ಎಲ್ಲಾ ವಿಚಾರಗಳ ಪುಸ್ತಕಗಳೂ ದೊರೆಯುತ್ತವೆ. ಇಂತಹ ಪುಸ್ತಕ ಸಂಗ್ರಹ ಅಸಾಧ್ಯವಾದ ಸಂಗತಿ. ದೇಹದಲ್ಲಿ ಟ್ಯಾಟೋ ಹಾಕಿಸಿಕೊಳ್ಳುವವರಿಂದ ಹಿಡಿದು ಎಂತೆಂತಹವರಿಗೋ ಗಿನ್ನಿಸ್ ಅವಾರ್ಡ್ ದೊರೆಯುತ್ತದೆ. ಇಂತಹ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರ ಪುಸ್ತಕ ಪ್ರೇಮೆ ಅಂಕೇಗೌಡರನ್ನು ಗುರುತಿಸಿ ಭಾರತದ ಸರ್ವೋನ್ನತ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.

ಇದೇ ವೇಳೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಹಾರೋಹಳ್ಳಿ ಧನ್ಯಕುಮಾರ್‌ರನ್ನು ಸುಗ್ಗಿ ರಂಗ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಾಂಡವಪುರ ತಹಸೀಲ್ದಾರ್ ಸಂತೋಷ್, ಹಿರಿಯ ಜಾನಪದ ವಿದ್ವಾಂಸೆ ಸುಜಾತ ಅಕ್ಕಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಪುತಿನ ಟ್ರಸ್ಟ್ ಸದಸ್ಯರಾದ ದೃಶ್ಯಟ್ರಸ್ಟ್ ಅಧ್ಯಕ್ಷ ಗಿರೀಶ್, ಕನಗನಮರಡಿ ವಿ.ಎಸ್.ಎಸ್ ಎನ್ ಅಧ್ಯಕ್ಷ ರಾಮಕೃಷ್ಣ ಹೆಗ್ಗಡಹಳ್ಳಿ, ಕಲಾವಿದ ಹನುಮಂತು ಭಾಗವಹಿಸಿದ್ದರು.