- ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀ ದಿವ್ಯ ಸಾನ್ನಿಧ್ಯ । 63 ಅಡಿ ಎತ್ತರದ ರಿಮೋಟ್ ನಿಯಂತ್ರಿತ ರಥ

- ರಥದ ಮೇಲೆ ಜೆಲ್ಲಿ ವೆಂಕಟೇಶ್ ಕುಟುಂಬದವರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ

- - -

ಕನ್ನಡಪ್ರಭ ವಾರ್ತೆ ಹರಿಹರ

ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ 8ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಜರುಗಿದ ಭವ್ಯ ರಥೋತ್ಸವ ಬೃಹತ್ ಜನಸಾಗರದ ಸಾಕ್ಷಿಯಾಯಿತು. ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀ ದಿವ್ಯ ಸಾನ್ನಿಧ್ಯದಲ್ಲಿ ನಡೆದ ರಥೋತ್ಸವದಲ್ಲಿ ''''''''ಜೈ ವಾಲ್ಮೀಕಿ'''''''' ಎಂಬ ಭಕ್ತರ ಘೋಷಣೆಗಳು ಮುಗಿಲುಮುಟ್ಟಿದವು.


ಬೆಳಗ್ಗೆ ವಿವಿಧ ವಾದ್ಯಮೇಳಗಳು ಹಾಗೂ ಭಾಜಾಭಜಂತಿಗಳ ಸಡಗರದ ನಡುವೆ ಸಾವಿರಾರು ಭಕ್ತರು ಜಯಘೋಷಗಳನ್ನು ಮೊಳಗಿಸಿದರು. 63 ಅಡಿ ಎತ್ತರದ ರಿಮೋಟ್ ನಿಯಂತ್ರಿತ ರಥವನ್ನು ಎಳೆಯಲಾಯಿತು. ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ ಮಹಾಮಂಟಪದ ದ್ವಾರದಿಂದ ಹೊರಟ ರಥದ ಮೇಲೆ ಜೆಲ್ಲಿ ವೆಂಕಟೇಶ್ ಕುಟುಂಬದವರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು.

ಮರಗಾಲು ಕುಣಿತ ಹಾಗೂ ಜಗ್ಗಲಿಗೆ ಸೇರಿದಂತೆ ವಿವಿಧ ಕಲಾತಂಡಗಳ ಪ್ರದರ್ಶನವು ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ಈ ಸಂದರ್ಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಈ ಮಹಾನ್ ಗುರುಪೀಠವು ಇಂದಿನ ಹಂತಕ್ಕೆ ಬೆಳೆಯಲು ಮಾಜಿ ಸಚಿವ ಕೆ. ತಿಪ್ಪೇಸ್ವಾಮಿ ಅವರ ಶ್ರಮ ದೊಡ್ಡದಿದೆ ಎಂದು ಸ್ಮರಿಸಿದರು. ಓಬಳಪ್ಪನವರು ಹಾಗೂ ಜಾರಕಿಹೊಳಿ ಕುಟುಂಬದವರು ಮಠದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಪರಿಶಿಷ್ಟ ಪಂಗಡ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸದಲ್ಲಿ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷ ರುದ್ರಪ್ಪ ಲಮಾಣಿ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಜಾತ್ರಾ ಸಮಿತಿ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮತ್ತಿತರರು ಭಾಗವಹಿಸಿದ್ದರು.

ರಾಜ್ಯದ ಮೂಲೆ ಮೂಲೆಗಳಿಂದ ಹರಿದುಬಂದಿದ್ದ ಭಕ್ತ ಸಮೂಹಕ್ಕೆ ಹೈಸ್ಕೂಲ್ ಮೈದಾನ ಹಾಗೂ ಅಕ್ಕಪಕ್ಕದ ಜಮೀನುಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಕಿಲೋ ಮೀಟರ್‌ಗಟ್ಟಲೆ ದೂರದವರೆಗೆ ವಾಹನಗಳು ನಿಂತಿದ್ದ ಕಾರಣ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲೇ ಮಠಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿದರು.

- - -

-09HRR.02.ಜೆಪಿಜಿ:

ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಎಂಟನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಭವ್ಯ ರಥೋತ್ಸವ ಸಂಪನ್ನಗೊಂಡಿತು.