ವಿಜಯಪುರ: ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳು ಹಾಗೂ ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ನಗರೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ಜೊತೆಗೆ ಅವರು ಕೈಗೊಳ್ಳುತ್ತಿರುವ ರಾಜತಾಂತ್ರಿಕ ನೀತಿಗಳಿಂದ ಯುದ್ಧದ ಕಾರ್ಮೋಡದ ನಡುವೆಯೂ ದೇಶದಲ್ಲಿನ ಜನರು ಸುರಕ್ಷಿತರಾಗಿರುವಂತೆ ಮಾಡಿದೆ ಎಂದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ, ಪಂಚ ಗ್ಯಾರಂಟಿ ಯೋಜನೆಗಳನ್ನು ನಂಬಿಕೊಂಡು ಚುನಾವಣೆಗೆ ಹೊರಟಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜನರು ತಿರಸ್ಕಾರ ಮಾಡಿದ್ದಾಗಿದೆ. ಈಗಾಗಲೇ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ಹಣ ಬರುತ್ತಿಲ್ಲ. ಯುವನಿಧಿಯ ಹೆಸರಿನಲ್ಲಿ ಯುವಕರಿಗೆ ತಿಂಗಳಿಗೆ 3 ಸಾವಿರ ಕೊಟ್ಟು, ಅವರನ್ನು ಶಾಶ್ವತವಾಗಿ ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದಾರೆ. ಗ್ರಾಹಕರು ಉಪಯೋಗಿಸುತ್ತಿದ್ದ ವಿದ್ಯುತ್ ಗಿಂತ ಒಂದು ಯೂನಿಟ್ ಜಾಸ್ತಿ ಬಳಕೆಯಾದರೂ ವಿದ್ಯುತ್ ಬಿಲ್ ಕಟ್ಟಬೇಕಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿರುವುದು ರಾಜ್ಯದ ಜನತೆಯ ಗಮನದಲ್ಲಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೂದಿಗೆರೆ ನಾಗವೇಣಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳಿಗೂ ಹಣ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.

ಬಿಜೆಪಿ ಟೌನ್ ಅಧ್ಯಕ್ಷ ವೆಂಕಟೇಶ್ ಪ್ರಭು, ತಾಲೂಕು ಉಪಾಧ್ಯಕ್ಷೆ ಪ್ರೇಮಾದೇವರಾಜ್, ತಾಯಮ್ಮ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಯಶೋಧ, ಬಿ.ಕೆ.ನಾರಾಯಣ ಸ್ವಾಮಿ, ರವಿಕುಮಾರ್, ಮುನೀಂದ್ರ, ಸುರೇಶ್ ಬಾಬು, ದಿನೇಶ್, ಮಂಜುನಾಥ್, ಮುಂತಾದವರು ಹಾಜರಿದ್ದರು.