- ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಕಲಾ ಸಂಭ್ರಮ-2025-26

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆಗೆ ಮಕ್ಕಳ ಜೀವನಕ್ಕೆ ಅಗತ್ಯ ಮೌಲ್ಯಗಳನ್ನು ಸಹ ಕಲಿಸಲಾಗುತ್ತಿದೆ ಎಂದು ಜೀವನ್ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಉಪಾಧ್ಯಕ್ಷ ಹಾಗೂ ಸೆಂಟ್ ಮೇರಿಸ್ ಅರ್ಥೋಡಕ್ಸ್ ಸಿರಿಯನ್ ಚರ್ಚ್ ನ ಫಾದರ್ ಬೆನ್ನಿಮ್ಯಾಥ್ಯೂ ಹೇಳಿದರು.ಗುರುವಾರ ರಾತ್ರಿ ಪಟ್ಟಣದ ಜೀವನ್ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಲಾ ಸಂಭ್ರಮ 2025–26 ಶಾಲಾ ವಾರ್ಷಿಕೋತ್ಸಕ್ಕೆ ಚಾಲನೆ ನೀಡಿ ಮಾತನಾಡಿದರು.

ಜೀವನ್ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಳೆದ 17 ವರ್ಷಗಳಿಂದಲೂ ಸತತವಾಗಿ ಎಸ್.ಎಸ್.ಎಲ್.ಸಿಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯಲ್ಲೇ ವಿಶಿಷ್ಟ ಸ್ಥಾನಹೊಂದಿದೆ ಎಂದರು.

ವಾರ್ಷಿಕ ವರದಿ ವಾಚನ ಮಾಡಿದ ನಿಕಟಪೂರ್ವ ಕಾರ್ಯದರ್ಶಿ ಕೆ.ಟಿ.ಎಲ್ದೋ, 1988ರಲ್ಲಿ ಆರಂಭವಾದ ಜೀವನ್ ಜ್ಯೋತಿ ಶಾಲೆ ನರಸಿಂಹರಾಜಪುರ ಪಟ್ಟಣದ ಪ್ರಥಮ ಆಂಗ್ಲಮಾಧ್ಯಮ ಶಾಲೆ. 1990 ರ ನಂತರ ಸೆಂಟ್ ಅರ್ಥೋಡಕ್ಸ್ ಚರ್ಚ್ ನ ಆವರಣದಲ್ಲಿ ಶಾಲೆ ಆರಂಭವಾಯಿತು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕ್ರೀಡೆ, ಸಾಂಸ್ಕೃತಿ ಚಟುವಟಿಕೆಗಳಿಗೆ ಶಾಲಾ ಆಡಳಿತ ಮಂಡಳಿಯಿಂದ ಸಕಲ ಸೌಲಭ್ಯ ಒದಗಿಸಲಾಗಿದೆ ಎಂದರು.


ಜೀವನ್ ಜ್ಯೋತಿ ಪ್ರೌಢಶಾಲೆ ಮುಖ್ಯಶಿಕ್ಷಕ ಪೀಟರ್ ಬಾಬು ಮಾತನಾಡಿ,ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಕಳೆದ 17 ವರ್ಷಗಳಿಂದ ಸತತವಾಗಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.100 ಫಲಿತಾಂಶ ಶಾಲೆ ಪಡೆದಿದ್ದು ಮುಖ್ಯಮಂತ್ರಿ ಸಹ ಅಭಿನಂದಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಯೋಧ ಮಿಲ್ಟನ್ ವರ್ಗೀಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ರಿತಿನ್ ರಾಜ್ ಪೌಲ್ ಮಾತನಾಡಿದರು. ಸಭೆಯಲ್ಲಿ ಪೋಷಕ ಪಾಲಕರ ಸಂಘದ ಅಧ್ಯಕ್ಷ ಜೆ.ಜೋಫಿ, ಕಾರ್ಯದರ್ಶಿ ಮೇರಿ ಕುರಿಯಚ್ಚನ್ಶಾ,ಶಾಲಾ ಆಡಳಿತ ಮಂಡಳಿಯ ಖಜಾಂಚಿ ಪಿ.ಪಿ.ಎಲ್ದೋ, ಸದಸ್ಯರಾದ ಕೆ.ಪಿ.ಬೆನ್ನಿ, ಕಮಲ್ ಜೇಕಬ್, ಎಂ.ಎಂ.ಬೇಸಿಲ್, ಎ.ಪಿ.ರಾಜೇಶ್, ಎಂ.‍ಪಿ.ಪೌಲೋಸ್, ಕೆ.ವಿ.ಸಾಜು ಇದ್ದರು.