ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪೊಲೀಸರ ಕರ್ತವ್ಯ ವಿಶ್ರಾಂತಿ ರಹಿತ, ಧನ್ಯವಾದ ರಹಿತವಾಗಿದ್ದು, ಪೊಲೀಸರಿಂದ ಕೆಲಸವಾದ ಬಳಿಕ ಕೆಲವರು ಧನ್ಯವಾದ ಹೇಳುವುದನ್ನು ಸಹ ಮರೆಯುತ್ತಾರೆ ಎಂದು ಪಿಎಸ್‌ಐ ಅಂಬರೀಷ್ ಹೇಳಿದರು.ಪಟ್ಟಣದ ಠಾಣೆಯಲ್ಲಿ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟ ಹಾಗೂ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಆಯೋಜಿಸಿದ್ದ ಶೌರ್ಯ ದಿನ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿ, 1965ರಿಂದ ಧೈರ್ಯ ಮತ್ತು ತ್ಯಾಗದ ಸಂಕೇತವಾಗಿ ಶೌರ್ಯ ದಿನ ದೇಶದಲ್ಲಿ ಆಚರಣೆಗೆ ಬಂದಿದ್ದು, ಇದೊಂದು ವಿಶೇಷ ಆಚರಣೆ. ರಕ್ಷಣಾ ಕ್ಷೇತ್ರಕ್ಕೆ ಧೈರ್ಯ, ಸ್ಥೈರ್ಯ ತುಂಬುವ ಕಾರ್ಯಕ್ರಮವಾಗಿದೆ.ಪೊಲೀಸರ ಕರ್ತವ್ಯ ಬೇರೆ ಎಲ್ಲಾ ಇಲಾಖೆಗಳ ಕರ್ತವ್ಯಕ್ಕಿಂತ ವಿಶೇಷ. ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸ ಬೇಕಾಗಿದೆ. ಪೊಲೀಸ್ ಸಿಬ್ಬಂದಿ ಹಬ್ಬ ಹರಿದಿನ, ರಜೆ, ಕುಟುಂಬ ಎನ್ನುವುದನ್ನು ಮರೆತು ಕರ್ತವ್ಯ ನಿರ್ವಹಿಸಬೇಕಾಗಿದೆ. ಪೊಲೀಸರು ಯಂತ್ರದ ರೀತಿಯಲ್ಲಿ ನಿತ್ಯವೂ ಕಾರ್ಯನಿರ್ವಹಿಸಬೇಕಿದ್ದು, ಎಷ್ಟೇ ಒತ್ತಡವಿದ್ದರೂ ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಪಂದಿಸಬೇಕಿದೆ. ಪೊಲೀಸರಿಗೂ ಕುಟುಂಬ, ವೈಯುಕ್ತಿಕ ಜೀವನಗಳಿದ್ದು, ಇವುಗಳನ್ನೆಲ್ಲಾ ತ್ಯಾಗ ಮಾಡಿ ಸಮಾಜಕ್ಕಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕಿದೆ. ಸಮಾಜದಲ್ಲಿ ಅಪರಾಧ ತಡೆಯುವುದು, ಪತ್ತೆ ಹಚ್ಚುವಿಕೆ ಮುಂತಾದವು ಕಠಿಣವಾಗಿದ್ದು, ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಬೇಕಿದೆ, ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ಸಮಾಜ ಸುಸ್ಥಿರವಾಗಿ ಇಡುವಲ್ಲಿ ಪೊಲೀಸರು ತಮ್ಮದೇ ಆದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ರಾಘವೇಂದ್ರ ಮಾತನಾಡಿ, ಪೊಲೀಸ್ ಎಂಬ ಪದದಲ್ಲಿ ವಿಶೇಷ ಅರ್ಥ ಅಡಗಿದ್ದು, ಪ್ರಮುಖವಾಗಿ ತಾಳ್ಮೆ, ಧೈರ್ಯ, ಸಹನೆ, ಆತ್ಮಸ್ಥೈರ್ಯ, ಶಾಂತಿ ಎಲ್ಲವನ್ನು ಪೊಲೀಸರು ಅಡಗಿಸಿಕೊಂಡಿದ್ದಾರೆ.ಸಮಾಜ ಎನ್ನುವುದು ಕೇವಲ ಒಬ್ಬ ವ್ಯಕ್ತಿಯಿಂದ ನಿರ್ಮಾಣವಾಗಲು ಸಾಧ್ಯವಿಲ್ಲ. ಪ್ರತಿಯೊಂದು ವೃತ್ತಿ, ವ್ಯಕ್ತಿಯಿಂದಲೂ ಸಮಾಜ ಕಟ್ಟಬಹುದಾಗಿದೆ. ಇದರಲ್ಲಿ ಪೊಲೀಸರ ಪಾತ್ರವೂ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಶೌರ್ಯ ದಿನದ ಸಂದರ್ಭದಲ್ಲಿ ಪೊಲೀಸರನ್ನು ಅಭಿನಂದಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.ಜೇಸಿಐ ಅಧ್ಯಕ್ಷ ಸನತ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಶಾಫಿ, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಜೇಸಿಐ ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಕಾರ್ಯದರ್ಶಿ ರಂಜಿತ್, ಖಜಾಂಚಿ ವಿ.ರೋಹಿತ್, ಸದಸ್ಯರಾದ ಡಿ.ರಾಜೇಂದ್ರ, ವಿ.ಅಶೋಕ, ಪ್ರಾಚಾರ್ಯ ಕೆ.ಆರ್.ಭೂದೇಶ, ಉಪನ್ಯಾಸಕ ಸೋಮೇಶ್‌ಗೌಡ, ಪೊಲೀಸ್ ಸಿಬ್ಬಂದಿ ಗಂಗಶೆಟ್ಟಿ, ರುಬೀನಾ, ಧರ್ಮರಾಜ್ ಮತ್ತಿತರರು ಹಾಜರಿದ್ದರು.೧೦ಬಿಹೆಚ್‌ಆರ್ ೬:
ಬಾಳೆಹೊನ್ನೂರಿನ ಪೊಲೀಸ್ ಠಾಣೆಯಲ್ಲಿ ನಡೆದ ಶೌರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಿಎಸ್‌ಐ ಅಂಬರೀಷ್ ಅವರನ್ನು ಸನ್ಮಾನಿಸಲಾಯಿತು. ಸನತ್ ಶೆಟ್ಟಿ, ಕೆ.ಎಂ.ರಾಘವೇಂದ್ರ, ಚೈತನ್ಯ ವೆಂಕಿ, ಇಬ್ರಾಹಿಂ ಶಾಫಿ, ಓ.ಡಿ.ಸ್ಟೀಫನ್, ರೋಹಿತ್, ರಂಜಿತ್ ಇದ್ದರು.