ಸಾರಾಂಶ
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತದಾನ ಮಾಡಿದ ಮತದಾರರು ಪಶ್ಚಾತಾಪ ಪಡುತ್ತಿದ್ದು, ಕೇಂದ್ರದಲ್ಲಿ ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತದಾನ ಮಾಡಿದ ಮತದಾರರು ಪಶ್ಚಾತಾಪ ಪಡುತ್ತಿದ್ದು, ಕೇಂದ್ರದಲ್ಲಿ ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಬಾಗಲಕೋಟೆಗೆ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ನಗರದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರ ಮನೆಗೆ ಭೇಟಿ ನೀಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ರಾಜ್ಯದ ೨೮ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನರು ಶಾಪ ಹಾಕುತ್ತಿದ್ದಾರೆ. ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರವೇ ಶ್ರೇಷ್ಠ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ಇತ್ತು. ಕಾಂಗ್ರೆಸ್ ಪರಿಸ್ಥಿತಿ ಹೇಗೆ ಆಗಿದೆ ಎಂದರೆ ಸ್ವತಃ ರಾಹುಲ್ ಗಾಂಧಿಯವರೇ ಕ್ಷೇತ್ರ ಬದಲಾವಣೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.ದೇಶದಲ್ಲಿ ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಾಡುವುದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಗುರಿಯಾಗಿದೆ. ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಲು ನಾವು ಕಂಕಣಬದ್ಧರಾಗಿ ದುಡಿಯೋಣ. ಈ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳ ಲೀಡ್ ನೀಡಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರನ್ನು ಗೇಲ್ಲಿಸೋಣ ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖರ್ಗೆಯವರು ಸೋಲಿನ ಭೀತಿಯಲ್ಲಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸುಳ್ಳುಗಾರ ಎಂಬ ಪದ ಬಳಕೆ ಮಾಡಿದವರೇ ಸುಳ್ಳುಗಾರರು ಎಂದು ತಿರುಗೇಟು ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ, ಶರಣು ತಳಿಕೆರೆ, ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರ, ಗ್ರಾಮೀಣ ಮಂಡಲ ಅಧ್ಯಕ್ಷ ಮಹಾಂತಗೌಡ ಪಾಟೀಲ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ ಹಾಗೂ ಬಿಜೆಪಿಯ ವಿವಿಧ ಮಂಡಲದ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.