ಅಂಜನಾದ್ರಿ ದೇಶದಲ್ಲಿಯೇ ಮಾದರಿ ಮಾಡುವೆ: ಡಾ. ಬಸವರಾಜ

| Published : Apr 30 2024, 02:09 AM IST

ಸಾರಾಂಶ

ಕೊಪ್ಪಳ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಅವರು ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿದ್ದಾರೆ.

-ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಸಂದರ್ಶನ

-ದುಡ್ಡು ಮಾಡಬೇಕೆಂದಿದ್ದರೆ ಬೆಂಗಳೂರಿನಲ್ಲಿಯೇ ಆಸ್ಪತ್ರೆ ಮಾಡಬಹುದಿತ್ತು

-ನನ್ನೂರಿನ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಸಿಗಲಿ ಎಂದು ಇಲ್ಲಿ ಆಸ್ಪತ್ರೆ ಮಾಡಿದ್ದು ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಅವರು ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿದ್ದಾರೆ. ವೈದ್ಯರಾಗಿರುವ ಅವರು ಈಗ ಚುನಾವಣೆಯ ಅಖಾಡಕ್ಕೆ ಧುಮುಕಿದ್ದಾರೆ. ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿರುವ ಅವರು ''''ಕನ್ನಡಪ್ರಭ''''ಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.ವೈದ್ಯರಾಗಿದ್ದ ತಾವು ಈಗ ಚುನಾವಣೆಯ ಅಖಾಡಕ್ಕೆ ಇಳಿದಿದ್ದು, ಹೇಗನಿಸುತ್ತದೆ?

ಮೊದಲಿನಿಂದಲೂ ಸಾಮಾಜಿಕ ಚಿಂತನೆಯಲ್ಲಿ ಬಂದಿದ್ದೇನೆ. ಆದರೂ ಇದುವರೆಗೂ ಸೇವೆಗಾಗಿ ಜನರೇ ನಮ್ಮ ಬಳಿ ಬರುತ್ತಿದ್ದರು, ಸೇವೆ ಮಾಡುತ್ತಿದ್ದೆವು. ಆದರೆ, ಈಗ ಸೇವೆ ಮಾಡುವುದಕ್ಕಾಗಿ ನಾನೇ ಜನರ ಬಳಿ ಹೋಗಬೇಕಾಗಿದೆ. ಅವಕಾಶಕ್ಕಾಗಿ ಅವರನ್ನು ಕೇಳಬೇಕಾಗಿದೆ. ನಿಜಕ್ಕೂ ನಮ್ಮ ನಿರೀಕ್ಷೆ ಮೀರಿ ಜನರು ಸ್ಪಂದಿಸುತ್ತಿದ್ದಾರೆ, ಸ್ವಾಗತಿಸುತ್ತಿದ್ದಾರೆ.

ಕೋವಿಡ್ ಸಮಯದಲ್ಲಿ ನೀವು ಸೇವೆ ಮಾಡಿಲ್ಲ, ಸುಲಿಗೆ ಮಾಡಿದ್ದಾರೆ ಎನ್ನುತ್ತಾರಲ್ಲ ಕಾಂಗ್ರೆಸ್‌ನವರು?

ಆ ತರಹ ದುಡ್ಡು ಮಾಡುವುದೇ ನನಗೆ ಬೇಕಾಗಿದ್ದರೆ ಇಲ್ಲಿ ಆಸ್ಪತ್ರೆ ಮಾಡುವ ಅಗತ್ಯವೇ ಇರಲಿಲ್ಲ. ಬೆಂಗಳೂರು ಅಥವಾ ಮತ್ಯಾವುದಾದರೂ ಕಡೆ ಆಸ್ಪತ್ರೆ ಮಾಡಿ, ಹಣ ಮಾಡುತ್ತಿದ್ದೆ. ಆದರೆ, ನನ್ನೂರಿನ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕು ಎನ್ನುವ ಕಾರಣಕ್ಕಾಗಿ ನಾನು ಕೊಪ್ಪಳದಲ್ಲಿ ಆಸ್ಪತ್ರೆ ಮಾಡಿದ್ದೇನೆ. ನನ್ನ ತಂದೆಗೆ ಹೆಸರು ತರಬೇಕು ಎಂದು ಆಸ್ಪತ್ರೆ ಮಾಡಿದ್ದೇನೆ. ಅವರು ಆರೋಪ ಮಾಡುತ್ತಿರಬಹುದು. ಅವರು ಬಾಯಿಚಪಲಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಕೋವಿಡ್ ಆರಂಭದಲ್ಲಿ, ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಬಂದ್ ಮಾಡಿದ್ದರು. ಆಗ, ನನ್ನ ಆಸ್ಪತ್ರೆಯಲ್ಲಿಯೇ ಜಿಲ್ಲಾಸ್ಪತ್ರೆ ಮಾಡಿದ್ದರು. ಆಗ ಯಾವುದೇ ಬಾಡಿಗೆ ಪಡೆಯದೇ ತಿಂಗಳ ಕಾಲ ಉಚಿತವಾಗಿ ನೀಡಿದ್ದೇನೆ. ಜತೆಗೆ ಚಿಕಿತ್ಸೆ ನೀಡಿದ್ದೇನೆ. ಆಗ ನಾವು ಸೇವೆ ಕೊಡದಿದ್ದರೆ ದಾರಿಯಲ್ಲಿ ಹೆಣ ಬೀಳುತ್ತಿದ್ದವು.

ಕೋವಿಡ್ ಸಮಯದಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಿದ್ದೇವೆ. ಚಿಕಿತ್ಸೆ ಪಡೆದ ಅದೆಷ್ಟೋ ಜನರೇ ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ಆಗ ಕೊಪ್ಪಳದಲ್ಲಿ ಸರಿಯಾದ ಚಿಕಿತ್ಸೆ ನೀಡಲು ಯಾರೂ ಸಿದ್ಧರಿರಲಿಲ್ಲ. ಆದರೆ, ನಾವು ಕೋವಿಡ್ ಎದುರಿಸಲು ನಿರಂತರ ಶ್ರಮಿಸಿದೆವು.

ನಮ್ಮ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿ ಮಾಡಿದ ದರದಲ್ಲಿಯೇ ಚಿಕಿತ್ಸೆ ನೀಡಿದ್ದೇವೆ. ಬೆಂಗಳೂರಿನಲ್ಲಿ ₹10 ಲಕ್ಷ ಶುಲ್ಕ ಪಡೆಯುತ್ತಿದ್ದರೆ ನಾವು ಕೇವಲ ₹80 ಸಾವಿರ, ₹1 ಲಕ್ಷದಲ್ಲೇ ಚಿಕಿತ್ಸೆ ನೀಡಿದ್ದೇವೆ. ಅದರ ಜತೆಗೆ ಶೇ. 50ರಷ್ಟು ಸರ್ಕಾರಿ ಆಸ್ಪತ್ರೆಯ ರೋಗಿಗಳನ್ನು ಮತ್ತು ಶೇ. 50ರಷ್ಟು ಖಾಸಗಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿತ್ತು. ಎಲ್ಲವೂ ಕಾನೂನುಬದ್ಧವಾಗಿಯೇ ನಡೆದಿದೆ. ಆರೋಪ ಮಾಡುವವರು ಎಲ್ಲಿ ಚಿಕಿತ್ಸೆ ಪಡೆದಿದ್ದಾರೆ ಕೇಳಿ? ಅವರ ಬಿಲ್ ಎಷ್ಟಾಗಿತ್ತು? ಇಲ್ಲಿ ಬಿಲ್ ಎಷ್ಟಾಗಿತ್ತು? ಎನ್ನುವುದನ್ನು ಹೋಲಿಕೆ ಮಾಡಿ ನೋಡಲಿ, ಗೊತ್ತಾಗುತ್ತದೆ. ಕೇವಲ ರಾಜಕೀಯಕ್ಕಾಗಿ ಆರೋಪ ಮಾಡುವುದಲ್ಲ. ಹೀಗಾಗಿ, ಇದ್ಯಾವುದಕ್ಕೂ ನಾನು ಉತ್ತರ ನೀಡುವುದಿಲ್ಲ.ಮಾಜಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದಾರಲ್ಲ?

ಡಾ. ಬಸವರಾಜ: ಅವರು ಹೋಗಿದ್ದಾರೆ ಮತ್ತು ಅವರ ಜತೆಗೂ ಒಂದಿಷ್ಟು ಬೆಂಬಲಿಗರು ಹೋಗಿದ್ದಾರೆ. ಆದರೆ, ಅವರ ವಿರೋಧಿಗಳೂ ಇದ್ದರು, ಅವರು ಈಗ ಬಂದಿದ್ದಾರೆ. ಅಲ್ವಸ್ವಲ್ಪ ಸಮಸ್ಯೆಯಾಗಿದ್ದರೂ ಪಕ್ಷಕ್ಕೆ ತಡೆದುಕೊಳ್ಳುವ ಶಕ್ತಿ ಇದೆ. ಅವರು ಹೋಗಿದ್ದರಿಂದ ನಮ್ಮವರೆಲ್ಲ ಜಿದ್ದಿನಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಷ್ಟಕ್ಕಿಂತ ಲಾಭವೇ ಹೆಚ್ಚಾಗಿದೆ.ನಿಮ್ಮನ್ನು ಸೋಲಿಸಲು ಹಿಟ್ನಾಳ ಕುಟುಂಬಕ್ಕಿಂತಲೂ ಮಾಜಿ ಸಂಸದ ಸಂಗಣ್ಣ ಕರಡಿ ಹೆಚ್ಚು ಪ್ರಯತ್ನಿಸುತ್ತಿದ್ದಾರಲ್ಲ?

ಹೌದೌದು, ಇದು ಸತ್ಯ. ಅದಕ್ಕೆ ಏನು ಹೇಳಲು ಆಗದು, ಸೋಲು ಗೆಲುವು ಮತದಾರರ ಕೈಯಲ್ಲಿದೆಯೇ ಹೊರತು ಯಾರ ಕೈಯಲ್ಲಿಯೂ ಇಲ್ಲ. ಆದರೆ, ಹೋದಲೆಲ್ಲ ನಿರೀಕ್ಷೆ ಮೀರಿ ಸ್ಪಂದನೆ ಸಿಗುತ್ತಿದೆ. ನಾವಂದುಕೊಂಡಕ್ಕಿಂತ ಹೆಚ್ಚು ಸ್ಪಂದನೆ ಸಿಗುತ್ತಿದೆ. ಮತದಾರರು ನರೇಂದ್ರ ಮೋದಿ ಅವರಿಗೆ ವೋಟು ನೀಡಲು ನಿರ್ಧಾರ ಮಾಡಿದ್ದರಿಂದ ಇವರೇನೇ ಮಾಡಿದರೂ ವ್ಯತ್ಯಾಸವಾಗುವುದಿಲ್ಲ.ನಿಮಗೆ ಯಾಕೆ ವೋಟ್ ಹಾಕಬೇಕು?

ಮೊದಲನೆಯದಾಗಿ ದೇಶಕ್ಕಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ನೀಡಬೇಕು. ಅವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಯಾಗಿರುವ ನನ್ನನ್ನು ಗೆಲ್ಲಿಸಲು ಮತ ನೀಡಬೇಕು.ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಯಾಕೆ ಸೋಲಿಸಬೇಕು?

ನಾನು ಅವರನ್ನು ಸೋಲಿಸಿ ಎಂದು ಹೇಳುವುದಿಲ್ಲ, ನನ್ನನ್ನು ಗೆಲ್ಲಿಸಿ ಎಂದಷ್ಟೇ ಕೇಳುತ್ತೇನೆ. ಅಷ್ಟಕ್ಕೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಇಲ್ಲ. ಗೆದ್ದು ಹೋಗಿ ಏನು ಮಾಡಲು ಸಾಧ್ಯ? ಹೀಗಾಗಿ, ಅವರ ಬದಲಾಗಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತೇನೆ.ಕೊಪ್ಪಳ ಕ್ಷೇತ್ರದ ಅಭಿವೃದ್ಧಿಗಾಗಿ ನಿಮ್ಮ ಕನಸುಗಳೇನು?

ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ವಿಪರೀತ ಅವಕಾಶಗಳು ಇವೆ. ಬತ್ತ, ಮೆಕ್ಕೆಜೋಳ, ದಾಳಿಂಬೆ ಸೇರಿದಂತೆ ಎಷ್ಟೊಂದು ಬೆಳೆ ಬೆಳೆಯುತ್ತಿದ್ದೇವೆ. ಅವುಗಳಿಗಾಗಿ ರೈಸ್ ಪಾರ್ಕ್, ಮೆಕ್ಕೆಜೋಳ ಪಾರ್ಕ್ ಮಾಡಬೇಕಾಗಿದೆ.

ಇದು ಹನುಮ ಜನಿಸಿದ ನಾಡು, ಅಯೋಧ್ಯೆ ಮಾದರಿಯಲ್ಲಿಯೇ ಅಂಜನಾದ್ರಿಯನ್ನು ಅಭಿವೃದ್ಧಿ ಮಾಡಬೇಕಾಗಿದೆ. ಅಲ್ಲಿ ರಾಮ, ಇಲ್ಲಿ ಹನುಮ ಎನ್ನುವಂತೆ ಅಭಿವೃದ್ಧಿಪಡಿಸಬೇಕಾಗಿದೆ. ರಾಮಮಂದಿರ ಅಭಿವೃದ್ಧಿ ಮಾಡಿದ ಟ್ರಸ್ಟ್‌ನವರೇ ಆಂಜನೇಯನ ಜನಿಸಿದ ನಾಡು ಅಭಿವೃದ್ಧಿಪಡಿಸಲು ಸಿದ್ಧರಿದ್ದಾರೆ. ಹೀಗಾಗಿ, ಅವರ ಸಹಯೋಗದಲ್ಲಿ ಮತ್ತು ದೇಶದಾದ್ಯಂತ ಬಿಜೆಪಿ ಸರ್ಕಾರ ಇರುವ ರಾಜ್ಯಗಳ ಸಹಕಾರದ ಮೂಲಕ ಗೆಸ್ಟ್‌ಹೌಸ್‌ಗಳ ನಿರ್ಮಾಣ ಮಾಡಿ, ದೇಶದಲ್ಲಿ ಈಗ ಹೇಗೆ ರಾಮ ರಾಮ ಎನ್ನುತ್ತಿದ್ದಾರೆ ಅದೇ ರೀತಿ ಆಂಜನೇಯ ಆಂಜನೇಯ ಎನ್ನುವಂತೆ ಅಭಿವೃದ್ಧಿ ಮಾಡಬೇಕಾಗಿದೆ. ಇದರ ಜತೆಗೆ ಶ್ರೀ ಹುಲಿಗೆಮ್ಮಾ ದೇವಿ, ಗವಿಮಠ, ಕನಕಾಚಲಪತಿ ದೇವಸ್ಥಾನ, ಆನೆಗೊಂದಿ ಸೇರಿದಂತೆ ಪ್ರವಾಸೋಧ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳು ಇವೆ.

ರೈಲ್ವೆ ಲೈನು, ಹೈವೆಗಳು ಹಾಗೂ ವಿಮಾನ ನಿಲ್ದಾಣದ ಅಗತ್ಯವಿದೆ. ಇದರ ಜತೆಗೆ ಕೊಪ್ಪಳದಲ್ಲಿ ಸುಸಜ್ಜಿತ ವಿವಿಯ ಸ್ಥಾಪನೆಯ ಕನಸು ಹೊತ್ತಿದ್ದೇನೆ. ತುಂಗಭದ್ರಾ ಜಲಾಶಯ, ನವಲಿ ಜಲಾಶಯ, ಸಿಂಗಟಾಲೂರು ಏತ ನೀರಾವರಿ ಯೋಜನೆಗೂ ಸ್ಪಂದಿಸಬೇಕಾಗಿದೆ. ಕೃಷ್ಣಾದಿಂದ ತುಂಗಭದ್ರೆ ಜೋಡಣೆ ಮಾಡುವ ಬಯಕೆ ಇದೆ.

ಇದೆಲ್ಲವನ್ನು ಮಾಡಲು ಇಚ್ಛಾಶಕ್ತಿ ಬೇಕು. ಹಾಗೆಯೇ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ ಇದೆಲ್ಲವೂ ಆಗಿಯೇ ಆಗುತ್ತದೆ ಎನ್ನುವ ನಂಬಿಕೆ ಇದೆ. ಗವಿಸಿದ್ದಪ್ಪ ಆಶೀರ್ವಾದ ಮಾಡಿಯೇ ಮಾಡುತ್ತಾನೆ.ಕಾಂಗ್ರೆಸ್ ಗ್ಯಾರಂಟಿ ಹವಾ ಸಮಸ್ಯೆಯಾಗುತ್ತಾ?

ಗ್ಯಾರಂಟಿಯ ಯಾವ ಹವಾನೂ ಇಲ್ಲ. ಇದು ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಕಾಂಗ್ರೆಸ್‌ನವರ ಬಾಯಲ್ಲಿ ಮಾತ್ರ ಹವಾ ಇದೆ. ಮೋದಿ ಅಲೆ ಈ ಬಾರಿ ಇಲ್ಲ ಎನ್ನುತ್ತಾರಲ್ಲ ಕಾಂಗ್ರೆಸ್‌ನವರು?

ಹೌದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಇಲ್ಲ, ದೊಡ್ಡ ಸುನಾಮಿಯೇ ಇದೆ. ಹಳ್ಳಿ ಹಳ್ಳಿಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮೋದಿ ಎನ್ನುತ್ತಿದ್ದಾರೆ. ಯುವಕರೆಲ್ಲ ಮೋದಿ ಮೋದಿ ಎನ್ನುತ್ತಿದ್ದಾರೆ.ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ

ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಟ್ಟಿರುವ 371 ಜೆ ಸ್ಥಾನಮಾನ ಇದ್ದರೂ ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಸೀಮಿತವಾಗಿದೆ. ಅದನ್ನು ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಆಗಬೇಕಾಗಿದೆ. ಈಗ ಕೈಗಾರಿಕೆ ಸ್ಥಾಪನೆಗೆ, ಕೃಷಿ, ತೋಟಗಾರಿಕೆ ಅಭಿವೃದ್ಧಿಗೂ ಅನುದಾನ ದೊರೆಯುತ್ತದೆ. ಆ ದಿಸೆಯಲ್ಲಿ ಪ್ರಯತ್ನ ಮಾಡಲಾಗುವುದು ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಕೇಂದ್ರೀಯ ವಿವಿ ಸ್ಥಾಪಿಸಲಾಗುವುದು.