ಸಾರಾಂಶ
ಎಲ್ಲ ಮುಖಂಡರು ಪ್ರತಿ ಬೂತ್ ಮಟ್ಟದಲ್ಲೂ ಹೆಚ್ಚಿನ ಸದಸ್ಯರನ್ನು ಮಾಡಲು ಮುಂದಾಗಬೇಕು. ಇದರಿಂದ ಪಕ್ಷ ಸಂಘಟನೆಗೆ ಬಲ ಬರುತ್ತದೆ. ಬಿಜೆಪಿ ಇಷ್ಟೊಂದು ಬೆಳೆಯಲು ಕಾರ್ಯಕರ್ತರ ಪರಿಶ್ರಮವೇ ಕಾರಣ ಎಂದು ಮಾಜಿ ಶಾಸಕ ಸುನೀಲ ನಾಯ್ಕ ತಿಳಿಸಿದರು.
ಭಟ್ಕಳ: ಜಿಲ್ಲೆಯಲ್ಲಿ ಮೂರು ಲಕ್ಷ ಮತ್ತು ಪ್ರತಿ ಬೂತ್ ಮಟ್ಟದಲ್ಲಿ 300 ಸದಸ್ಯತ್ವ ಗುರಿ ಹೊಂದಲಾಗಿದೆ. ಬಿಜೆಪಿ ಮುಖಂಡರ ಪಾರ್ಟಿ ಅಲ್ಲ, ಬದಲಾಗಿ ಇದು ಕಾರ್ಯಕರ್ತರ ಪಾರ್ಟಿ ಎಂದು ಮಾಜಿ ಶಾಸಕ ಸುನೀಲ ನಾಯ್ಕ ತಿಳಿಸಿದರು.
ಇಲ್ಲಿನ ಆಸರಕೇರಿ ತಿರುಮಲ ವೆಂಕಟ್ರಮಣ ಸಭಾಭವನದಲ್ಲಿ ಭಾನುವಾರ ಬಿಜೆಪಿ ಮಂಡಲದ ಕಾರ್ಯಕಾರಿಣಿ ಸಭೆ ಮತ್ತು ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಸಿಗುವ ಗೌರವ, ಮನ್ನಣೆ ಬೇರೆ ಯಾವುದೇ ಪಾರ್ಟಿಯಲ್ಲಿ ಸಿಗುವುದಿಲ್ಲ. ಬಿಜೆಪಿಯಲ್ಲಿ ಕಾರ್ಯಕರ್ತರಿಗೂ ಉನ್ನತ ಮಟ್ಟಕ್ಕೇರುವ ಅವಕಾಶ ಸಿಗುತ್ತದೆ ಎಂದರು.ಎಲ್ಲ ಮುಖಂಡರು ಪ್ರತಿ ಬೂತ್ ಮಟ್ಟದಲ್ಲೂ ಹೆಚ್ಚಿನ ಸದಸ್ಯರನ್ನು ಮಾಡಲು ಮುಂದಾಗಬೇಕು. ಇದರಿಂದ ಪಕ್ಷ ಸಂಘಟನೆಗೆ ಬಲ ಬರುತ್ತದೆ. ಬಿಜೆಪಿ ಇಷ್ಟೊಂದು ಬೆಳೆಯಲು ಕಾರ್ಯಕರ್ತರ ಪರಿಶ್ರಮವೇ ಕಾರಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ, ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ಬೂತ್ ಮಟ್ಟದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯರನ್ನಾಗಿ ಮಾಡಿ ಆ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ನಿರ್ಧರಿಸಲಾಗಿದೆ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಶಕ್ತಿ ಕ್ಷೇತ್ರದ ಪ್ರಮುಖರು ಹೀಗೆ ಎಲ್ಲರೂ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೆಚ್ಚಿನ ಸದಸ್ಯರನ್ನು ಮಾಡಬೇಕೆಂದರು.ಪ್ರಾಸ್ತಾವಿಕ ಮಾತನಾಡಿದ ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪಕ್ಷಕ್ಕೆ ಸದಸ್ಯರೇ ಬಲ. ಪಕ್ಷದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಪಕ್ಷ ಮತ್ತಷ್ಟು ಸಂಘಟನೆ ಆಗಲು ಪ್ರತಿ ಬೂತ್ ಮಟ್ಟದಲ್ಲೂ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು. ಭಟ್ಕಳದಲ್ಲಿ ಆರಂಭವಾಗಿರುವ ಸದಸ್ಯತ್ವ ಅಭಿಯಾನಕ್ಕೆ ಎಲ್ಲರೂ ಸಹಕರಿಸುವಂತೆ ಕೋರಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಜಿಲ್ಲಾ ವೃತ್ತಿಪರ ಮೋರ್ಚಾ ಅಧ್ಯಕ್ಷ ರಾಜೇಶ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸವಿತಾ ಗೊಂಡ ಇದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು.