ಸಾರಾಂಶ
ರಾಜ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಸಂಕಷ್ಟವಿಲ್ಲ. ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಘೋಷಿಸಿರುವ ಯಾವುದೇ ಯೋಜನೆಗಳು ನಿಂತಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಹುಬ್ಬಳ್ಳಿ: ರಾಜ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಸಂಕಷ್ಟವಿಲ್ಲ. ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಘೋಷಿಸಿರುವ ಯಾವುದೇ ಯೋಜನೆಗಳು ನಿಂತಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಭಾನುವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಸ್ಪಷ್ಟವಾದ ನಿಲುವು ಇಲ್ಲ. ಪ್ರತಿಪಕ್ಷದವರು ಎಲ್ಲೆಡೆಯೂ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ಬರೀ ಸುಳ್ಳು ಪ್ರಚಾರ ಮಾಡುತ್ತ ಸಾಗುತ್ತಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿಯು ಇನ್ನೊಂದೆಡೆ ಬೇರೆ ರಾಜ್ಯಗಳಲ್ಲಿ ತಾವೇ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಇದು ದ್ವಂದ್ವ ನಿಲುವಲ್ಲವೇ? ಎಂದು ಲೇವಡಿ ಮಾಡಿದರು.ಅಮಾನತಿಗೆ ಆದೇಶ
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಭೆ ನಡೆಸಿ ಕಳಪೆ ಔಷಧ ನೀಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಿದ್ದೇನೆ. ಅಲ್ಲಿನ ಔಷಧ ನಿಯಂತ್ರಕರನ್ನು ಅಮಾನತು ಮಾಡಲಾಗಿದೆ ಎಂದರು.ಮೃತರಿಗೆ ₹ 5ಲಕ್ಷ ಪರಿಹಾರ
ಔಷಧಿ ಖರೀದಿಯಲ್ಲಿ ಯಾವುದೇ ರೀತಿಯ ಹಗರಣ ನಡೆದಿಲ್ಲ. ಆದರೆ, ಕೋವಿಡ್ ಹಗರಣದಲ್ಲಿ ಅಂದಿನ ಬಿಜೆಪಿ ಸರ್ಕಾರ ಔಷಧಗಳನ್ನು ಒಂದಕ್ಕೆ ಹತ್ತು ಪಟ್ಟು ಹೆಚ್ಚು ಹಣ ನೀಡಿ ಖರೀದಿಸಿತ್ತು. ಬಾಣಂತಿಯರ ಸಾವಿನ ಪ್ರಕರಣದ ತನಿಖೆಗಾಗಿ ಒಂದು ಕಮಿಟಿ ರಚನೆ ಮಾಡಲಾಗಿದೆ. ಆ ಕಮಿಟಿ ವರದಿ ನೀಡಿದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಮೃತ ಬಾಣಂತಿಯರಿಗೆ ತಲಾ ₹5 ಲಕ್ಷ ಪರಿಹಾರ ನೀಡುವಂತೆಯೂ ಆದೇಶಿಸಲಾಗಿದೆ ಎಂದರು.ಉ.ಕ. ಕುರಿತು ಚರ್ಚೆ
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಚರ್ಚೆಯಾಗಬೇಕು ಎಂಬುದು ನಮ್ಮ ಉದ್ದೇಶ. ಆದರೆ, ಪ್ರತಿಪಕ್ಷದವರು ಹೇಗೆ ಸಹಕಾರ ನೀಡುತ್ತಾರೆಯೋ ನೋಡೋಣ. ಸರ್ಕಾರ ಅಧಿವೇಶನದಲ್ಲಿ ಪ್ರತಿಪಕ್ಷವನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದರು.ಪಂಚಮಸಾಲಿ ಸಮಾಜದ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಹೋರಾಟ ಮಾಡಬಹುದು, ಅದಕ್ಕೆ ನನ್ನ ವಿರೋಧವಿಲ್ಲ. ನಮ್ಮ ಜತೆಗೆ ಮಾತನಾಡಿದರೆ ಅದಕ್ಕೆ ಸಮಂಜಸ ಉತ್ತರ ನೀಡಲು ಸಿದ್ಧನಿದ್ದೇನೆ ಎಂದರು.