ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಪತ್ರಿಕಾ ಮಾಧ್ಯಮದಲ್ಲಿ ಸುದ್ದಿ ಸಂಪಾದನೆಗೆ ಎಷ್ಟು ಶ್ರಮ ವಹಿಸಬೇಕಾಗುತ್ತದೆಯೋ, ಆ ಶ್ರಮಕ್ಕೆ ಪತ್ರಿಕಾ ವಿತರಕರೂ ಸಹ ಶ್ರಮ ವಹಿಸಿ ಮನೆ ಮನೆಗೆ ಪತ್ರಿಕೆ ವಿತರಿಸಿದಲ್ಲಿ ಮಾತ್ರ ಪ್ರತಿಫಲ ದೊರೆಯುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ನಗರ ಶಾಸಕರ ಕಚೇರಿಯಲ್ಲಿ ನಗರದ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಿಸಿ ಮಾತನಾಡಿದರು.
ಮುಂಜಾನೆ ೪ ಗಂಟೆಗೆ ವಾತಾವರಣದಲ್ಲಿ ಎಷ್ಟೇ ವೈಪರಿತ್ಯಗಳಿದ್ದರೂ ಚಳಿ ಮಳೆ ಎಂದು ನೋಡದೆ ಮನೆ ಮನೆಗೆ ಪತ್ರಿಕೆಗಳನ್ನು ವಿತರಿಸುವ ಕಾಯಕವನ್ನು ಪ್ರತಿ ದಿನ ವಿತರಕರು ಮಾಡುತ್ತಾರೆ, ಪತ್ರಿಕಾ ಮಾಧ್ಯಮಗಳು ಮುದ್ರಿಸುವ ಸಮಾಚಾರಗಳನ್ನು ಮನೆ ಮನೆಗೆ ತೆರಳಿ ಮಾಹಿತಿ ನೀಡುವ ಕೆಲಸ ಇದಾಗಿದ್ದು ಹೆಚ್ಚಿನ ಜವಾಬ್ದಾರಿಯುತ ಕೆಲಸವಾಗಿದೆ ಎಂದರು.ಜರ್ಕಿನ್ ಗಳ ವಿತರಣೆಗೆ ಸಹಕಾರ ನೀಡಿದ ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ. ಸುಬ್ಬರಾಜ್ ಮಾತನಾಡಿ, ಹಲವಾರು ವರ್ಷಗಳಿಂದ ಪತ್ರಿಕಾ ವಿತರಕರನ್ನು ಗಮನಿಸುತ್ತ ಬಂದಿದ್ದು, ಪ್ರತಿ ದಿನ ಮನೆ ಮನೆಗೆ ಪತ್ರಿಕೆ ಹಾಕಿ ತಿಂಗಳಿಗೊಮ್ಮೆ ಪತ್ರಿಕೆಯ ಹಣ ಪಡೆಯುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದಾರೆ, ಮಳೆಗಾಲದಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ತಲೆಯ ಮೇಲೆ ಹಾಕಿಕೊಂಡು ಪತ್ರಿಕೆ ವಿತರಣೆ ಮಾಡುತ್ತಿದ್ದುದನ್ನು ಕಂಡು ಪತ್ರಿಕಾ ವಿತರಕರಿಗೆ ಜರ್ಕಿನ್ ನೀಡುವ ನಿರ್ಧಾರ ಕೈಗೊಂಡಿದ್ದು, ಶಾಸಕ ಶರತ್ ಬಚ್ಚೇಗೌಡರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಣೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.
ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಗೋಪಾಲ್, ಹೊಸಕೋಟೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಎಸ್ ಸಿ ಮಂಜುನಾಥ, ಪತ್ರಿಕಾ ವಿತರಕರಾದ ಧರ್ಮೇಂದ್ರ ಶಟ್ಟಿ, ಚಂದ್ರಶೇಖರ್, ಜಗದೀಶ್, ಅಖಿಲ್ ಸೇರಿ ಹಲವರು ಹಾಜರಿದ್ದರು.‘‘ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪತ್ರಿಕಾ ವಿತರಕರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿದ್ದು, ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು.’
ಶರತ್ ಬಚ್ಚೇಗೌಡ, ಶಾಸಕ.