ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆ ಚಿಗುರೊಡೆದಿದ್ದು, ಮಳೆಯಿಲ್ಲದೇ ರೈತರು ಮುಗಿಲು ನೋಡುತ್ತಿದ್ದಾರೆ. ಈ ನಡುವೆ ಬೆಳೆಗಳಿಗೆ ಹೆಚ್ಚಿರುವ ಕೃಷ್ಣಮೃಗಗಳ ಕಾಟದಿಂದ ರೈತರು ಬೇಸತ್ತಿದ್ದಾರೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆ ಚಿಗುರೊಡೆದಿದ್ದು, ಮಳೆಯಿಲ್ಲದೇ ರೈತರು ಮುಗಿಲು ನೋಡುತ್ತಿದ್ದಾರೆ. ಈ ನಡುವೆ ಬೆಳೆಗಳಿಗೆ ಹೆಚ್ಚಿರುವ ಕೃಷ್ಣಮೃಗಗಳ ಕಾಟದಿಂದ ರೈತರು ಬೇಸತ್ತಿದ್ದಾರೆ.

ರಾಣಿಬೆನ್ನೂರಿನಲ್ಲಿ ಕೃಷ್ಣಮೃಗ ಅಭಯಾರಣ್ಯವಿದ್ದು, ಅವುಗಳ ಸಂತತಿ ಹೆಚ್ಚುತ್ತಿದೆ. ಬಿತ್ತನೆ ಮಾಡಿ ಬೀಜ ಮೊಳಕೆಯೊಡೆಯುವುದನ್ನೇ ಕಾಯುತ್ತಿರುವಂತೆ ಅವೀಗ ಹೊಲಗಳಿಗೆ ದಾಂಗುಡಿ ಇಡುತ್ತಿವೆ. ಕೃಷ್ಣಮೃಗಗಳು ನೀಡುವ ಕಾಟಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಕೆಲ ರೈತರಂತೂ ಒಂದೇ ಜಮೀನಿನಲ್ಲಿ ಮತ್ತೊಮ್ಮೆ ಬಿತ್ತನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕೃಷ್ಣಮೃಗಗಳ ಕಾಟ: ಬೆಳೆಗಳಿಗೆ ರೋಗ ಬಂದರೆ ಕೀಟನಾಶಕ ಸಿಂಪಡಿಸಿ ಬೆಳೆ ಉಳಿಸಿಕೊಳ್ಳಬಹುದು. ಆದರೆ ಕೃಷ್ಣಮೃಗಗಳ ವಿಚಾರದಲ್ಲಿ ಏನೂ ಮಾಡಲಾಗದೇ ರೈತರು ಪರಿತಪಿಸುತ್ತಿದ್ದಾರೆ. 20ರಿಂದ 30ರಷ್ಟಿರುವ ಕೃಷ್ಣಮೃಗಗಳ ಹಿಂಡು ಒಮ್ಮೆ ರೈತನ ಹೊಲಕ್ಕೆ ದಾಳಿ ಮಾಡಿದರೆ ಕೆಲವೇ ಗಂಟೆಗಳಲ್ಲಿ ಎಕರೆಗಟ್ಟಲೆ ಪ್ರದೇಶದಲ್ಲಿನ ಸಸಿಗಳನ್ನೆಲ್ಲ ತಿಂದು ಸಂಪೂರ್ಣ ಬೆಳೆಯನ್ನೇ ನಾಶಪಡಿಸುತ್ತವೆ. ಇದು ರೈತನ ನಿದ್ದೆಗೆಡಿಸುವಂತೆ ಮಾಡಿದೆ.

ಕಾಯುವುದೇ ಕಾಯಕ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಬಹುತೇಕ ಮುಗಿದಿದೆ. ಬಿತ್ತನೆ ಮಾಡಿ ಎರಡು ವಾರ ಕಳೆದ ಸೋಯಾಬಿನ್‌, ಗೋವಿನಜೋಳ, ಶೇಂಗಾ, ಹತ್ತಿ ಇನ್ನಿತರ ಬೆಳೆಗಳಲ್ಲಿ ಸಸಿಯಾಡುತ್ತಿದೆ. ಬೆಳಗಾಗುವುದರೊಳಗೆ ಕೃಷ್ಣಮೃಗಳ ಹಿಂಡು ಹೊಲದಲ್ಲಿ ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಹಲವು ಹಳ್ಳಿಗಳಲ್ಲಿ ಈಗ ಕೃಷ್ಣಮೃಗಗಳ ಕಾಟದ ಬಗ್ಗೆ ಚರ್ಚೆ ಶುರುವಾಗಿದೆ. ಒಂದು ಕಡೆ ಚಿಗುರುತ್ತಿರುವ ಸಸಿಗೆ ಮಳೆಯಿಲ್ಲದೇ ಬಾಡುತ್ತಿದ್ದರೆ, ಬಿಸಿಲಲ್ಲಿ ನಿಂತು ಕೃಷ್ಣಮೃಗಗಳಿಂದ ಬೆಳೆ ಕಾಪಾಡುವುದು ಮತ್ತೊಂದು ಕೆಲಸವಾಗಿದೆ. ಕೆಲವು ಕಡೆ ಮತ್ತೊಮ್ಮೆ ಬಿತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ದಿನನಿತ್ಯ ಜಮೀನುಗಳಲ್ಲಿ ಕೃಷ್ಣಮೃಗಗಳನ್ನು ಕಾಯುವುದೇ ರೈತರಿಗೆ ಕಾಯಕವಾಗಿದೆ.

ಕೂಲಿಗಳನ್ನು ಇಟ್ಟು ಬೆಳೆ ರಕ್ಷಣೆ: ನದಿ ಪಾತ್ರದಲ್ಲಿ ವಾಸವಾಗಿರುತ್ತಿದ್ದ ಕೃಷ್ಣಮೃಗಗಳು ರೈತರ ಜಮೀನಿನಲ್ಲಿ ಓಡಾಟ ಮಾಡಲು ಶುರು ಮಾಡಿವೆ. ಮುಂಗಾರು ಬಿತ್ತನೆ ವೇಳೆಯಲ್ಲಿ ಕಾಣಿಸಿಕೊಳ್ಳುವ ಕೃಷ್ಣಮೃಗಗಳು ರೈತರು ಬಿತ್ತನೆ ‌ಮಾಡಿದ‌ ಮೊಳಕೆ ‌ಒಡೆದ ಬೆಳೆ ತಿನ್ನಲು ಶುರು ಮಾಡಿವೆ. ಹೀಗಾಗಿ ರೈತರು ನಿತ್ಯ ಕೂಲಿ ಆಳುಗಳನ್ನು ಇಟ್ಟು ಕಾಯುವ ಪರಿಸ್ಥಿತಿ ‌ನಿರ್ಮಾಣವಾಗಿದೆ. ಕೆಲವು ಕಡೆ ರಾತ್ರಿ ವೇಳೆಯೇ ಬೆಳೆ ತಿಂದು ಹೋಗುತ್ತಿವೆ. ಇದರಿಂದ ಏನು ಮಾಡಬೇಕು ಎಂಬುದೇ ರೈತರಿಗೆ ತೋಚದಂತಾಗಿದೆ. ಬಿತ್ತನೆ ಬೀಜಕ್ಕಾಗಿ ಹತ್ತಾರು ಸಾವಿರ ರು. ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ. ಮೊಳಕೆ ಒಡೆದ ಬೆಳೆಯನ್ನು ಕೃಷ್ಣಮೃಗಗಳು ತಿಂದು ಹಾಳು ಮಾಡುತ್ತಿವೆ. ಪ್ರತಿ ವರ್ಷ ಇದೇ ಗೋಳಾಗಿದೆ. ಬಿತ್ತನೆ ಮಾಡಿದಲ್ಲೇ ಮರು ಬಿತ್ತನೆ ಮಾಡುವಂತಾಗಿದೆ. ಬೆಳೆ ನಷ್ಟವಾದ ಬಗ್ಗೆ ಅರ್ಜಿ ಸಲ್ಲಿಸಿದರೂ ಬರುವ ಪರಿಹಾರಕ್ಕೆ ನೂರು ಬಾರಿ ಅಲೆಯಬೇಕು. ಏನು ಮಾಡಬೇಕೆಂದೇ ತೋಚುತ್ತಿಲ್ಲ ಎಂದು ದೇವಗಿರಿ ಗ್ರಾಮದ ರೈತ ರವಿ ಬಾರ್ಕಿ ಹೇಳಿದರು.