ಸಾರಾಂಶ
• ರಂಗೂಪುರ ಶಿವಕುಮಾರ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಂದೆ-ತಾಯಿ ಇಲ್ಲದ ತಬ್ಬಲಿ ಬಾಲಕ ಅಪಘಾತದಲ್ಲಿ ತೀವ್ರ ಪೆಟ್ಟಾದ ಬಳಿಕ ಎರಡು ಕಾಲು ಸ್ವಾಧೀನ ಕಳೆದುಕೊಂಡಿವೆ. ಅಜ್ಜಿಯ ಆಶ್ರಯದಲ್ಲಿರುವ ಬಾಲಕ ಹೆಜ್ಜೆ ಹಾಕುತ್ತಿರಲಿಲ್ಲ. ಬಾಲಕನ ಬಾಳಿಗೆ ಬೆಳಕಾದವರು ಇಲ್ಲಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ರಕ್ತಧಾರೆ ತಂಡ. 6 ವರ್ಷ ವಯಸ್ಸಿನ ಅಭಯ್ ನಂಜನಗೂಡು ಪಟ್ಟಣದ ನಿವಾಸಿ, ಕೂಲಿ ಕೆಲಸ ಮಾಡುತ್ತಿರುವ ಸರಸ್ವತಿ ಆಶ್ರಯದಲ್ಲಿದ್ದಾನೆ. ಬಾಲಕ ಅಭಯ್ ತಂದೆ ಶಶಿಕುಮಾರ್, ತಾಯಿ ಚೈತ್ರ, ಸಹೋದರ ದರ್ಶನ್ ಬೈಕ್‌ನಲ್ಲಿ ತೆರಳುವಾಗ ಕಳೆದ ಎರಡೂವರೆ ವರ್ಷದ ಹಿಂದೆ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್ ಬಳಿ ರಸ್ತೆ ಅಪಘಾತ ನಡೆದಿತ್ತು. ರಸ್ತೆ ಅಪಘಾತದಲ್ಲಿ ಅಭಯ್‌ಗೂ ತೀವ್ರ ಪೆಟ್ಟಾಗಿ ಹೊಟ್ಟೆಯ ಕರುಳು ಆಚೆ ಬಂದಿತ್ತು. ಎಡಗಾಲು ಮುರಿದಿತ್ತು. ಬೆನ್ನಿನ ಸ್ಪೈನಲ್ ಮೂಳೆ ಮುರಿದು ಆಪರೇಷನ್ ಕೂಡ ನಡೆದ ಬಳಿಕ ತನ್ನೆರಡು ಕಾಲು ಸ್ವಾಧೀನ ಕಳೆದುಕೊಂಡಿದ್ದ. ದುರಂತ ಎಂದರೆ ಅಭಯ್ ತಂದೆ-ತಾಯಿ ಸಹೋದರ ಸಾವನ್ನಪ್ಪಿದ್ದರು. ಅಭಯ್ ಪಾಲಿಗೆ ಸರಸ್ವತಿ ಆಸೆರೆಯಾಗಿದ್ದು, ಆತನ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದಾರೆ.ಕೋರ್ಟ್‌ನಲ್ಲಿ ಸಿಕ್ಕಿದ್ರು: ಮಗ, ಸೊಸೆ, ಮೊಮ್ಮಗನ ಅಪಘಾತದ ಕೇಸಿನ ಸಂಬಂಧ ಬಾಲಕ ಅಭಯ್ ಹಾಗೂ ಅಜ್ಜಿ ಸರಸ್ವತಿ ಗುಂಡ್ಲುಪೇಟೆ ಕೋರ್ಟ್‌ಗೆ ಬಂದಾಗ ಬಾಲಕನ ಸ್ಥಿತಿ ಕಂಡು ರಕ್ತಧಾರೆ ತಂಡ ಮಡಹಳ್ಳಿ ಮಣಿ ಮರುಗಿ, ಅಜ್ಜಿ ಸರಸ್ವತಿಯಿಂದ ಮಾಹಿತಿ ಪಡೆದ ಬಳಿಕ ಗುಂಡ್ಲುಪೇಟೆ ಆಯುರ್ವೇದ ಆಸ್ಪತ್ರೆಯ ಡಾ.ಕೆ.ಜೆ.ಗುರುಪ್ರಸಾದ್‌ಗೆ ವಿಷಯ ಮುಟ್ಟಿಸಿದ್ದೇ ಎರಡು ಕಾಲು ಕಳೆದುಕೊಂಡಿದ್ದ ಬಾಲಕ ಹೆಜ್ಜೆ ಹಾಕಲು ಆರಂಭಿಸಿದ್ದಾನೆ. ರಕ್ತಧಾರೆ ತಂಡ ಆಸರೆ:ಬಾಲಕ ಅಭಯ್, ಸರಸ್ವತಿ ಕಷ್ಟ ಕಂಡು ರಕ್ತಧಾರೆ ತಂಡದ ಮಡಹಳ್ಳಿ ಮಣಿ, ತಾರಾ ನಾಗೇಂದ್ರ ಮತ್ತವರ ಸ್ನೇಹಿತರು ಅಜ್ಜಿ, ಬಾಲಕನನ್ನು ಗುಂಡ್ಲುಪೇಟೆಯಲ್ಲೇ ಪುರಸಭೆಗೆ ಸೇರಿದ ವಸತಿ ಗೃಹದಲ್ಲಿ ಇರಿಸಿದ್ದಾರೆ. ಇದಕ್ಕೆ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಸಾಥ್ ನೀಡಿದ್ದಾರೆ. ರಕ್ತಧಾರೆ ತಂಡದ ಮಡಹಳ್ಳಿ ಮಣಿ ತನ್ನ ಮನೆಯಿಂದ ಗ್ಯಾಸ್, ನೀರಿನ ಡ್ರಂ ಕೊಟಿದ್ದಾರೆ. ಅಲ್ಲದೆ ತಾರಾ ನಾಗೇಂದ್ರ ಹಾಗೂ ಮತ್ತಿತರರು ಕೈಲಾದ ಹಣ ಕೊಟ್ಟು ಬಾಲಕ, ಅಜ್ಜಿಯ ಊಟೋಪಚಾರಕ್ಕೆ ನೆರವಿಗೆ ನಿಂತಿದ್ದಾರೆ.ವೈದ್ಯರ ಕಾಳಜಿ:ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಜೆ.ಗುರುಪ್ರಸಾದ್ ಎರಡು ಕಾಲು ಸ್ವಾಧೀನ ಕಳೆದುಕೊಂಡ ಬಾಲಕ ಅಭಯ್‌ಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಬಾಲಕ ಊರುಗೋಲು ಸಹಾಯದಿಂದ ಹೆಜ್ಜೆ ಹಾಕಲು ಆರಂಭಿಸಿದ್ದಾನೆ. ಡಾ.ಕೆ.ಜೆ.ಗುರುಪ್ರಸಾದ್ ಸ್ವತಃ ತಾವೇ ಬಾಲಕನ ಹಿಡಿದು ನಡೆಸುವ ಕೆಲಸದಲ್ಲಿ ತೊಡಗಿ ಬಾಲಕ ಅಭಯ್‌ಗೆ ಬೆಳಕಾಗಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದ್ದು ರಕ್ತಧಾರೆ ತಂಡಕ್ಕೂ ಮೆಚ್ಚುಗೆಯ ಸುರಿಮಳೆ ಬಂದಿದೆ.
ಷಷ್ಠಿಕ ಶಾಲಿ ಪಿಂಡಸ್ ಸ್ವೇದ ಚಿಕಿತ್ಸೆ ಕನಿಷ್ಠ 20 ದಿನಗಳ ಕಾಲ ಬಾಲಕನಿಗೆ ಕೊಟ್ಟರೆ ಖಂಡಿತ ಹೆಜ್ಜೆ ಹಾಕಲಿದ್ದಾನೆ. ಬಾಲಕ ಹೆಜ್ಜೆ ಹಾಕಿದರೆ ಬರುವ ಶೈಕ್ಷಣಿಕ ವರ್ಷದಿಂದಲೇ ಶಾಲೆಗೆ ಸೇರಿಸಬಹುದು ಆತ ಬೇಗ ಮತ್ತಷ್ಟು ಚೇತರಿಕೆ ಕಾಣಲಿ.-ಡಾ.ಕೆ.ಜೆ.ಗುರುಪ್ರಸಾದ್, ಮುಖ್ಯ ವೈದ್ಯಾಧಿಕಾರಿ, ಆಯುರ್ವೇದ ಆಸ್ಪತ್ರೆಕೋರ್ಟ್‌ನಲ್ಲಿ ಕಂಡ ಬಾಲಕನ ಸ್ಥಿತಿ ಕಂಡು ರಕ್ತಧಾರೆ ತಂಡ ಆತನಿಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರು. ಈ ಪ್ರಯತ್ನಕ್ಕೆ ಇದೀಗ ಸ್ವಲ್ಪ ಫಲ ಸಿಕ್ಕಿದೆ. ಬಾಲಕನಿಗೆ ಚಿಕಿತ್ಸೆಗೆ ಸ್ವಲ್ಪ ಹಣದ ನೆರವು ಬೇಕು, ಆ ನೆರವು ದಾನಿಗಳಿಂದ ಬಂದರೆ ಬಾಲಕ ಪ್ರಜೆಯಾಗಲಿದ್ದಾನೆ.-ಮಡಹಳ್ಳಿ ಮಣಿ, ರಕ್ತಧಾರೆ ತಂಡನಂದೇನಿಲ್ಲ ಕಣಪ್ಪ ನನ್ನ ಮಗ, ಸೊಸೆ, ಇನ್ನೊಬ್ಬ ಮೊಮ್ಮಗ ಸತ್ತೋದ್ರು. ಅಪಘಾತದಲ್ಲಿ ಬದುಕುಳಿದ ಅಭಯ್ ನ ನೋಡಿಕೊಂಡು ಇದ್ದೇನೆ. ಡಾಕ್ಟರ್ ಹಾಗೂ ಮಣಿ ಮತ್ತವರ ಸ್ನೇಹಿತರು ನನಗೆ ತುಂಬಾ ನೆರವಾಗಿದ್ದಾರೆ. ನನ್ನ ಮೊಮ್ಮನ ನಡೆದಾಡಿದರೆ ಸಾಕು.-ಸರಸ್ವತಿ, ಅಭಯ್ ಅಜ್ಜಿ
ಅಭಯ್ ಶಾಲೆಗೆ ಸೇರೋ ತನಕ ನಡೆಸುವಆಸೆ ವ್ಯಕ್ತಪಡಿಸಿದ ಡಾ.ಕೆ.ಜೆ.ಗುರುಪ್ರಸಾದ್ಅಪಘಾತದಲ್ಲಿ ತಂದೆ, ತಾಯಿ, ಸಹೋದರ ಕಳೆದುಕೊಂಡ ಬಾಲಕ ಅಭಯ್ ಗೂ ಅಪಘಾತದಲ್ಲಿ ಮೇಜರ್ ಆಪರೇಷನ್ ಆಗಿದೆ. ಅಲ್ಲದೆ ಎರಡು ಕಾಲು ಸ್ವಾಧೀನ ಕಳೆದುಕೊಂಡಿದ್ದವನಿಗೆ ಚಿಕಿತ್ಸೆ ಬಳಿಕ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿರುವ ಕಾರಣ ಅಭಯ್ ಬರುವ ಶೈಕ್ಷಣಿಕ ವರ್ಷದಿಂದ ಶಾಲೆ ಸೇರೋ ತನಕ ಹೆಜ್ಜೆ ಹಾಕಲಿದ್ದಾನೆ ಎಂಬ ವಿಶ್ವಾಸವನ್ನು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಜೆ.ಗುರುಪ್ರಸಾದ್ ಹೇಳಿದ್ದಾರೆ.
ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ ಬಾಲಕ ಅಭಯ್ ಚುರುಕಾಗಿದ್ದಾನೆ. ನಾನು ಕಳೆದ 2 ತಿಂಗಳಿನಿಂದ ಚಿಕಿತ್ಸೆ ಕೊಡುತ್ತಿದ್ದೇನೆ. ಅಲ್ಲದೆ ಥೆರೆಪಿ ಪಡೆಯುತ್ತಿದ್ದಾನೆ. ಚಿಕಿತ್ಸೆ ಬಳಿಕ ಆತನನ್ನು ಹಿಡಿದುಕೊಂಡರೆ ನಡೆಯುತ್ತಿದ್ದಾನೆ ಎಂದರು.ನೆರವು ಬೇಕು: ನಾನು ಮತ್ತು ಆಸ್ಪತ್ರೆ ಸಿಬ್ಬಂದಿ ಕೈಲಾದ ಎಲ್ಲ ಚಿಕಿತ್ಸೆ ಹಾಗೂ ಥೆರೆಫಿಯಿಂದ ಚೇತರಿಕೆ ಕಂಡಿದ್ದಾನೆ. ಆತನಿಗೆ ಷಷ್ಠಿಕ ಶಾಲಿ ಪೀಂಡಸ್ ಸ್ವೇಧ ಚಿಕಿತ್ಸೆ ಮಾಡಬೇಕಿದೆ, ಈ ಚಿಕಿತ್ಸೆ ದೊರೆತರೆ ಖಂಡಿತ ಬಾಲಕ ಗುಣಮುಖರಾಗಿ ಬರುವ ಶೈಕ್ಷಣಿಕ ವರ್ಷದಿಂದಲೇ ಶಾಲೆಗೆ ಹೋಗುವ ಸಾಧ್ಯತೆ ಇದೆ ಎಂದರು. ತಂದೆ, ತಾಯಿ ಇಲ್ಲದ ತಬ್ಬಲಿ ಬಾಲಕ ಚಿಕಿತ್ಸೆಗೆ ಷಷ್ಠಿಕ ಶಾಲಿ ಪಿಂಡಸ್ ಸ್ವೇಧ ಚಿಕಿತ್ಸೆಗೆ ಹಣದ ನೆರವು ಬೇಕಾಗಿದ್ದು, ಆಸಕ್ತರು ಬಾಲಕ ನಡೆಯಲು ನೆರವಾಗಿ ಎಂಬುದು ಕನ್ನಡಪ್ರಭದ ಕಳಕಳಿ.ತಂದೆ, ತಾಯಿ ಇಲ್ಲದೆ ಅಜ್ಜಿಯ ಆಸೆರೆಯಲ್ಲಿರುವ ಬಾಲಕನಿಗೆ ಚಿಕಿತ್ಸೆಗೆ ಹಣವಿಲ್ಲ. ರಕ್ತಧಾರೆ ತಂಡದ ಸಹಾಯ ಹಾಗೂ ವೈದ್ಯರ ಕಾಳಜಿ ಫಲವಾಗಿ ಸ್ವಾಧೀನ ಕಳೆದುಕೊಂಡ ಕಾಲುಗಳಿಗೆ ಬಲ ಬಂದಿದೆ. ಮತ್ತಷ್ಟು ಬಲ ಬರಲು ಚಿಕಿತ್ಸೆಗೆ ಹಣದ ನೆರವು ಬೇಕಿದೆ ಎಂಬುದು ವೈದ್ಯರ ಮಾತಾಗಿದೆ. ಆಸಕ್ತರು ಪಟ್ಟಣದ ಆಯುರ್ವೇದ ಆಸ್ಪತ್ರೆಗೆ ಕೈಲಾದ ನೆರವು ನೀಡಿ ಬಾಲಕ ಹೆಜ್ಜೆ ಹಾಕಲು ಕೈ ಜೋಡಿಸಿ ಎಂದು ಕನ್ನಡಪ್ರಭ ಮನವಿ ಮಾಡಿದೆ.