ಸಾರಾಂಶ
ಮೈಕ್ರೋಫೈನಾನ್ಸ್ ವಿರುದ್ಧ ಕರ್ನಾಟಕ ಸೇನಾಪಡೆ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೈಕ್ರೋ ಫೈನಾನ್ಸ್ ವಿರುದ್ಧ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಭುವನೇಶ್ವರಿ ವೃತ್ತದಲ್ಲಿ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಮೈಕ್ರೋ ಫೈನಾನ್ಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಾಯಿಕೊಡೆಯಂತೆ ಹುಟ್ಟಿಕೊಂಡಿದ್ದು, ಜನರ ಹಣವನ್ನು ಸುಲಿಗೆ ಮಾಡುತ್ತಿವೆ. 10 ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಜನರಿಗೆ ಅಮಿಷವೊಡ್ಡಿ ಸಾಲ ನೀಡಿ, ಸಾಲ ಮರುಪಾವತಿ ವಿಳಂಬ ಮಾಡಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಕಿರುಕುಳ ನೀಡುತ್ತಿವೆ.ಫೈನಾನ್ಸ್ ಗಳ ಕಿರುಕುಳದಿಂದ ರಾಜ್ಯಾದ್ಯಂತ ಅನೇಕ ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿರಾರು ಕುಟುಂಬಗಳು ಊರು ಬಿಟ್ಟಿದ್ದಾರೆ. ಅನೇಕ ಕುಟುಂಬಗಳು ತೊಂದರೆ ಸಿಲುಕಿವೆ. ಜನರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ವಿರುದ್ಧ ಮುಖ್ಯಮಂತ್ರಿ, ಜಿಲ್ಲಾಧಿಕಾರಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗಾಗಿ ಮೈಕ್ರೋಫೈನಾನ್ಸ್ ನಿಂದ ಸಾಲ ಪಡೆದಿರುವ ಜನತೆ ಧೈರ್ಯದಿಂದ ಇರಿ ನಿಮ್ಮೊಂದಿಗೆ ಜಿಲ್ಲಾಡಳಿತ, ಸರ್ಕಾರ, ಕನ್ನಡ ಸಂಘಟನೆಗಳಿವೆ. ಯಾರು ಊರು ಬಿಡಬೇಡಿ, ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದರು.
ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ರದ್ದುಪಡಿಸಿ, ಬ್ಯಾಂಕ್ ಮೂಲಕ ಸಾಲಸೌಲಭ್ಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದ, ಪಣ್ಯದಹುಂಡಿ ರಾಜು, ನಂಜುಂಡಶೆಟ್ಟಿ, ವೀರಭದ್ರ, ಆಟೋ ನಾಗೇಶ್, ಶಿವಣ್ಣ, ಸಿದ್ದರಾಜು, ರಾಚಪ್ಪ ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))