ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರಿಕ್ಷಾ ಚಾಲಕರ ಸಂಘ, ಉಡುಪಿಯ ರಕ್ತ ನಿಧಿ ಕೇಂದ್ರ ಇವರ ಸಹಯೋಗದಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರವನ್ನು ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್‌ ಅಧ್ಯಕ್ಷ ವಸಂತ ನಾಯ್ಕ ಉದ್ಘಾಟಿಸಿದರು.

ಭಟ್ಕಳದಲ್ಲಿ ರಿಕ್ಷಾ ಚಾಲಕರದಿಂದ ಬೃಹತ್ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರಿಕ್ಷಾ ಚಾಲಕರ ಸಂಘ, ಉಡುಪಿಯ ರಕ್ತ ನಿಧಿ ಕೇಂದ್ರ ಇವರ ಸಹಯೋಗದಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರವನ್ನು ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್‌ ಅಧ್ಯಕ್ಷ ವಸಂತ ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ರಕ್ತವನ್ನು ಯಾವುದೇ ಕಾರ್ಖಾನೆಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಅದರ ಅಗತ್ಯ ಎದುರಾದಾಗ ಅದರ ಮೌಲ್ಯ ಸ್ಪಷ್ಟವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಉಂಟಾದಾಗ ಎದುರಾಗುವ ಸಂಕಷ್ಟ ಅನುಭವಿಸಿದವರೇ ಅದರ ಮಹತ್ವ ಅರಿಯುತ್ತಾರೆ. ಇಂತಹ ಸೇವಾಭಾವದಿಂದ ಆಟೋ ಚಾಲಕರು ಶಿಬಿರ ಆಯೋಜಿಸಿರುವುದು ಸಮಾಜಕ್ಕೆ ಸ್ಪೂರ್ತಿದಾಯಕ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ಮೊದಲು ಅವರನ್ನು ತಂದು ಆಸ್ಪತ್ರೆಗೆ ದಾಖಲಿಸುವವರು ರಿಕ್ಷ ಚಾಲರಾಗಿದ್ದಾರೆ. ಇಂತಹ ರಿಕ್ಷಾ ಚಾಲಕರು ಮಾನವೀಯ ಪರವಾಗಿ, ಜೀವಪರ ಕಾಳಜಿ ತೋರಿಸಿ ರಕ್ತದಾನ ಶಿಬಿರ ಆಯೋಜಿಸಿ ರಕ್ತಸಂಗ್ರಹಣೆಗೆ ಕೈಜೋಡಿಸಿರುವುದು ಪ್ರಂಶನೀಯ ಎಂದರು.

ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣಕುಮಾರ ಮಾತನಾಡಿ, ರಕ್ತದಾನದಿಂದ ಹೃದಯ ಆರೋಗ್ಯ ಹೆಚ್ಚುತ್ತದೆ. ರಕ್ತದಾನದಿಂದ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಇದರ ಬಗ್ಗೆ ತಿಳಿಯದವರು ರಕ್ತದಾನಕ್ಕೆ ಹಿಂದೇಟು ಹಾಕುತ್ತಾರೆ. ಜೀವನದಲ್ಲಿ ಆರೋಗ್ಯವಾಗಿದ್ದಾಗ ಒಮ್ಮೆಯಾದರೂ ರಕ್ತದಾನಕ್ಕೆ ಮುಂದಾಗಬೇಕು. ಆ ಮೂಲಕ ಇನ್ನೊಬ್ಬರ ಜೀವಕ್ಕೆ ನೆರವಾಗಬೇಕು ಎಂದರು.

ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಆಸರಕೇರಿ ಮಾತನಾಡಿದರು. ಭಟ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಪಟೇಲ್‌ ರಾಹಿಲಾ ಸನಾ ಮಸೂದ್‌, ಉಡುಪಿ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ವೀಣಾ ಕುಮಾರಿ, ವೈದ್ಯರಾದ ಸವಿತಾ ಕಾಮತ್, ಸತೀಶ ಬಿ., ಪ್ರಕಾಶ ನಾಯ್ಕ, ಸಮಾಜ ಸೇವಕ ನಜೀರ್‌ ಕಾಸೀಮಜಿ ಉಪಸ್ಥಿತರಿದ್ದರು.