ಮಾಗಡಿ: ಮಾಗಡಿಯಲ್ಲಿ ಬಿಎಂಟಿಸಿ ಡಿಪೋ ಸ್ಥಾಪಿಸುವ ಮೂಲಕ ಹೆಚ್ಚಿನ ಬಸ್‌ ಸಂಚಾರ ಸೇವೆ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಬಿಎಂಟಿಸಿ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್‌ಗಳನ್ನು ತುಮಕೂರಿನವರೆಗೂ ವಿಸ್ತರಿಸಿ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಹೆಜ್ಜೆ ಇರಿಸಲಾಗಿದೆ. ಮಾಗಡಿಗೂ ಬಿಎಂಟಿಸಿ ಸೇವೆ ಆರಂಭಿರುವುದು ಸಂತಸದ ವಿಚಾರನಂಜುಂಡಪ್ಪ ವರದಿ ಪ್ರಕಾರ ಅತ್ಯಂತ . ಮಾಗಡಿ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಹೊಂದಿದೆ. ಅದನ್ನು ಅಭಿವೃದ್ಧಿ ಹೊಂದಿದ ತಾಲೂಕಾಗಿ ರೂಪಿಸುವುದು ನನ್ನ ಗುರಿ. ರಾಮನಗರ ಜಿಲ್ಲೆಯನ್ನು ರಾಜ್ಯದಲ್ಲೇ ಮುಂಚೂಣಿ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಸಮಗ್ರ ಅಭಿವೃದ್ಧಿಯ ನೀಲನಕ್ಷೆ ರೂಪಿಸುತ್ತಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.

ಮಾಗಡಿಯಲ್ಲಿ ಬಿಎಂಟಿಸಿ ಡಿಪೋ ಸ್ಥಾಪಿಸಲು ನಾಲ್ಕರಿಂದ ಐದು ಎಕರೆ ಜಾಗ ಒಂದೆರಡು ತಿಂಗಳಲ್ಲಿ ಗುರುತಿಸಲಾಗುವುದು. ಬಿಎಂಟಿಸಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನೀಲನಕ್ಷೆ ಸಿದ್ಧಪಡಿಸಬೇಕು. ಇನ್ನು ಮೂರು ತಿಂಗಳಲ್ಲಿ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮಾಗಡಿಯಿಂದ ನೆಲಮಂಗಲ, ರಾಮನಗರ, ಕುಣಿಗಲ್ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ನೇರ ಸಂಪರ್ಕ ಕಲ್ಪಿಸುವಂತೆ ಬಸ್ ಮಾರ್ಗಗಳನ್ನು ವೈಜ್ಞಾನಿಕವಾಗಿ ರೂಪಿಸಬೇಕು. ಕೇವಲ ನಾಲ್ಕೈದು ಬಸ್‌ಗಳನ್ನು ಓಡಿಸಿ ಸೇವೆ ಆರಂಭಿಸಿದಂತೆ ತೋರಿಸುವುದಲ್ಲ, ಜನರ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಸಮಯದಲ್ಲಿ ಬಸ್‌ಗಳನ್ನು ಓಡಿಸಬೇಕು. ಯಾವ ಮಾರ್ಗದಲ್ಲಿ ಎಷ್ಟು ಪ್ರಯಾಣಿಕರು ಸಂಚರಿಸಲಿದ್ದಾರೆಂದು ಗಮನಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಕುದೂರಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣಕ್ಕೆ ಈಗಾಗಲೇ ಜಾಗ ಒದಗಿಸಿ, ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಿ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಲಾಭ-ನಷ್ಟದ ಲೆಕ್ಕಾಚಾರಕ್ಕಿಂತ ಸಾರ್ವಜನಿಕ ಸೇವೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿವೆ ಎಂದರು.


ಕಾರ್ಯಕ್ರಮದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ನಿಖಿತ್‌ ರಾಜ್‌ ಮೌರ್ಯ, ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದಿವಾಕರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪುರುಷೋತ್ತಮ್, ಎಡಿಸಿ ಚಂದ್ರಯ್ಯ, ಡಿ.ಎಸ್. ಧನರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಞನ್‌)

ಮಾಗಡಿಯಲ್ಲಿ ಬಿಎಂಟಿಸಿ ಬಸ್‌ ಸಂಚಾರ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಾಲಕೃಷ್ಣ ಚಾಲನೆ ನೀಡಿದರು. ಬಿಎಂಟಿಸಿ ಉಪಾಧ್ಯಕ್ಷ ನಿಖಿತ್‌ ರಾಜ್‌ ಮೌರ್ಯ, ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದಿವಾಕರ್ ಇತರರಿದ್ದರು.