ಉಡುಪಿ: ಒಂದು ಕಡೆ ಕಟ್ಟಡದ ತುದಿಯಿಂದ ಆಕಾಶಕ್ಕೇರಿದ ದಟ್ಟ ಹೊಗೆ, ಇನ್ನೊಂದೆಡೆ ಜೋರಾಗಿ ಎಚ್ಚರಿಕೆಯ ಸೈರನ್ - ದಿಗಿಲಿನಿಂದ ದಿಕ್ಕಾಪಾಲಾಗಿ ಓಡಿದ ಜನರು, ಪೊಲೀಸರ ದೌಡು-ಇದು ಕಂಡುಬಂದಿದ್ದು ಇಲ್ಲಿನ ತೆಂಕನಿಡಿಯೂರಿನ ಕಾಲೇಜು ಪರಿಸರದಲ್ಲಿ. ಯುದ್ಧ, ವೈಮಾನಿಕ ದಾಳಿ, ಬಾಂಬ್ ಸ್ಫೋಟ ಇತ್ಯಾದಿ ಅಹಿತಕರ ಸಂದರ್ಭವನ್ನು ನಿಭಾಯಿಸಲು ಪೊಲೀಸ್ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ನಡೆದ ಅಣಕು ಕಾರ್ಯಾಚರಣೆ ಇದು.
ಕಟ್ಟಡದ ಮೇಲೆ ಬಾಂಬ್ ದಾಳಿ ನಡೆದಂತೆಯೇ ಕೃತಕವಾಗಿ ದಟ್ಟ ಹೊಗೆ ಸೃಷ್ಟಿಸಲಾಯಿತು, ಸ್ಫೋಟದಲ್ಲಿ ಗಾಯಗೊಂಡವರನ್ನು ರಕ್ಷಿಸುವ ಕಾರ್ಯದಲ್ಲಿ ತುರ್ತು ಸೇವಾ ಸಿಬ್ಬಂದಿ ತೊಡಗಿಸಿಕೊಂಡ ದೃಶ್ಯಗಳು ನೈಜ ಘಟನೆಯನ್ನೇ ನೆನಪಿಸಿತು. ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು. ಎಚ್ಚರಿಕೆಯ ಸೈರನ್ ಮೊಳಗಿದ ತಕ್ಷಣವೇ ಸ್ಥಳದಲ್ಲಿದ್ದ ಜನರು ಸುರಕ್ಷಿತ ಪ್ರದೇಶಗಳತ್ತ ತೆರಳುವ ಅಭ್ಯಾಸ ಪ್ರದರ್ಶಿಸಿದರು. ಯಾವುದೇ ಅಹಿತಕರ ಅನಿರೀಕ್ಷಿತ ಘಟನೆಗಳ ಸಂದರ್ಭ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸಬೇಕು, ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಯಿತು. ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೌರ ರಕ್ಷಕ ದಳ, ಲಯನ್ಸ್ ಕ್ಲಬ್ ಉಡುಪಿ, ರೆಡ್ ಕ್ರಾಸ್ ಘಟಕ ಹಾಗೂ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಹಳೆ ವಿದ್ಯಾರ್ಥಿ ಸಂಘಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉದ್ಘಾಟಿಸಿದರು. ಎಎಸ್ಪಿ ಸುಧಾಕರ್ ನಾಯಕ್, ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ವಿನಾಯಕ ಕಲ್ಲುಟ್ಕರ್, ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಗೃಹ ರಕ್ಷಕ ದಳ ಕಮಾಂಡೆಂಟ್ ಕೆ.ಸಿ. ರಾಜೇಶ್, ಉಡುಪಿ ಪೌರ ರಕ್ಷಣಾ ದಳದ ಕಮಾಂಡಿಂಗ್ ಆಫೀಸರ್ ಡಾ. ವಿಜಯೇಂದ್ರ ರಾವ್, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶಾಲಿನಿ ಯು.ಬಿ., ಗೃಹ ರಕ್ಷಕ ದಳ ಕಮಾಂಡೆಂಟ್ ಡಾ. ರೋಶನ್ ಕುಮಾರ್ ಶೆಟ್ಟಿ, ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರಶಾಂತ್ ನೀಲಾವರ ಮುಂತಾದವರಿದ್ದರು.ತೆಂಕನಿಡಿಯೂರು ಕಾಲೇಜಿನಲ್ಲಿ ಬಾಂಬ್ ಸ್ಫೋಟ! : ಅಣಕು ಕಾರ್ಯಾಚರಣೆ
ಒಂದು ಕಡೆ ಕಟ್ಟಡದ ತುದಿಯಿಂದ ಆಕಾಶಕ್ಕೇರಿದ ದಟ್ಟ ಹೊಗೆ, ಇನ್ನೊಂದೆಡೆ ಜೋರಾಗಿ ಎಚ್ಚರಿಕೆಯ ಸೈರನ್ - ದಿಗಿಲಿನಿಂದ ದಿಕ್ಕಾಪಾಲಾಗಿ ಓಡಿದ ಜನರು, ಪೊಲೀಸರ ದೌಡು-ಇದು ಕಂಡುಬಂದಿದ್ದು ಇಲ್ಲಿನ ತೆಂಕನಿಡಿಯೂರಿನ ಕಾಲೇಜು ಪರಿಸರದಲ್ಲಿ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.