ಪುಸ್ತಕದ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಸಲು ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಎಂಬ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಉತ್ತಮ ಚಟುವಟಿಕೆಗಳನ್ನು ಸಂಘಟಿಸುವ ಗ್ರಂಥಾಲಯಗಳಿಗೆ ಪ್ರಶಸ್ತಿ ನೀಡಲಾಗುವುದು.

ಗದಗ: ಪುಸ್ತಕಗಳಲ್ಲಿ ಅಪಾರ ಜ್ಞಾನ ಅಡಗಿದ್ದು, ಮನುಷ್ಯನ ಒಟ್ಟು ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿವೆ. ಪುಸ್ತಕದ ಹೊರತಾಗಿ ದೊರಕುವ ವಸ್ತುಗಳಿಂದ ಸಿಗುವ ಸಂತೋಷ ತಾತ್ಕಾಲಿಕವಾದುದು. ಆದರೆ ಪುಸ್ತಕದ ಓದಿನಿಂದ ದೊರೆಯುವ ಸುಖ ಶಾಶ್ವತವಾದುದು. ಮನುಷ್ಯನಲ್ಲಿ ಜೀವಪರ ಕಾಳಜಿಯನ್ನು ಇಮ್ಮಡಿಗೊಳಿಸುತ್ತವೆ. ಪುಸ್ತಕಗಳೇ ಮನುಷ್ಯನ ನಿಜವಾದ ಸಖ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದರು.

ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ನೀಡಿ ಮಾತನಾಡಿದ ಅವರು, ಪುಸ್ತಕದ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಸಲು ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಎಂಬ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಉತ್ತಮ ಚಟುವಟಿಕೆಗಳನ್ನು ಸಂಘಟಿಸುವ ಗ್ರಂಥಾಲಯಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ವ್ಯಕ್ತಿ ಓದುವ ಸಂಸ್ಕೃತಿಯಿಂದ ವಿಮುಖನಾಗುತ್ತಿದ್ದಾನೆ. ಬಾಲ್ಯದಲ್ಲಿಯೇ ಪುಸ್ತಕ ಪ್ರೀತಿಯನ್ನು ಬೆಳೆಸುವ ದಿಸೆಯಲ್ಲಿ ಪೋಷಕರು ಪ್ರಯತ್ನಿಸಬೇಕು. ಓದುಗರಿಗೆ ಪುಸ್ತಕಗಳು ಸುಲಭವಾಗಿ ದೊರೆಯುವ ದಿಸೆಯಲ್ಲಿ ಪುಸ್ತಕ ಪ್ರಾಧಿಕಾರ ವ್ಯವಸ್ಥೆ ಕಲ್ಪಿಸಬೇಕು. ಅತ್ತಿಮಬ್ಬೆ ಹಾಗೂ ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುವಂತಾಗಬೇಕು ಎಂದು ತಿಳಿಸಿದರು.

ಜಾಗೃತ ಸಮಿತಿಯ ಜಿಲ್ಲಾ ಸಂಚಾಲಕ ಎ.ಎಸ್. ಮಕಾನದಾರ ಮಾತನಾಡಿ, ಜಿಲ್ಲಾ ಹಂತದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆಯನ್ನು ಪುನರಾರಂಭಗೊಳಿಸಬೇಕು. ಅಲ್ಲದೇ ಲೇಖಕರ ಕೃತಿಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು. ಜಿಲ್ಲಾ ಹಂತದಲ್ಲಿ ಸಮಿತಿ ಸದಸ್ಯರು ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ವೇಳೆ ಮನೆಗೊಂದು ಗ್ರಂಥಾಲಯ ಯೋಜನೆ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯ ಆರ್.ಎಫ್. ಲೊಟಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ರವಿ ದೇವರಡ್ಡಿ, ಮಂಜುಳಾ ವೆಂಕಟೇಶಯ್ಯ, ರಾಜೇಶ್ವರಿ ಬಡ್ನಿ, ಅಂದಯ್ಯ ಅರವಟಗಿಮಠ, ಎಸ್.ಕೆ. ಆಡಿನ, ಬಸವರಾಜ ಬಡಿಗೇರ, ಸಂತೋಷ ಅಂಗಡಿ ಅವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ಲಕ್ಕುಂಡಿ ಗ್ರಾಪಂ ಅಭಿವೃದ್ಧಿ ಅಧಿಕಾರ ಅಮೀರ ನಾಯಕ, ಚಂದ್ರಶೇಖರ ವಸ್ತ್ರದ, ಕೆ.ಎಚ್. ಬೇಲೂರ, ಡಾ. ಜಿ.ಬಿ. ಪಾಟೀಲ, ಜಿ.ಎ. ಪಾಟೀಲ, ರತ್ನಕ್ಕ ಪಾಟೀಲ, ಶಿಲ್ಪಾ ಮ್ಯಾಗೇರಿ, ಎಂ.ಎನ್. ಕಾಮನಹಳ್ಳಿ, ಬಿ.ಬಿ. ಹೊಳಗುಂದಿ, ಎಸ್.ಯು. ಸಜ್ಜನಶೆಟ್ಟರ, ರಾಜಶೇಖರ ಕರಡಿ, ಅಶೋಕ ಸತ್ಯರಡ್ಡಿ, ಶಕುಂತಲಾ ಗಿಡ್ನಂದಿ, ಜಯನಗೌಡ ಪಾಟೀಲ, ಅಮರೇಶ ರಾಂಪೂರ, ರತ್ನಾ ಪುರಂತರ, ಶಶಿಕಾಂತ ಕೊರ್ಲಹಳ್ಳಿ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಎಸ್.ಆರ್. ಚನ್ನಪಗೌಡರ, ಉಮಾ ಕಣವಿ, ವಿ.ಎಸ್. ದಿಂಡೂರ, ರಾಜಶೇಖರ ದಾನರಡ್ಡಿ, ಬಸವರಾಜ ನೆಲಜೇರಿ, ರಾಜೇಂದ್ರ ಗಡಾದ, ದಿಲೀಪಕುಮಾರ ಮುಗಳಿ, ಬಸವರಾಜ ಗಣಪ್ಪನವರ ಸೇರಿದಂತೆ ಇತರರು ಇದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ಡಾ. ರಶ್ಮಿ ಅಂಗಡಿ ವಂದಿಸಿದರು.