ಕೊಪ್ಪಳ ತಾಲೂಕಿನ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಭೂಮಿ ಕಳೆದುಕೊಂಡ ರೈತರ ಒಕ್ಕೂಟಕ್ಕೆ ಬೆಂಬಲ ಸೂಚಿಸಿ, ಸೋಮವಾರ ಧರಣಿಯಲ್ಲಿ ಪಾಲ್ಗೊಂಡಿದ್ದರು. ಬಿಎಸ್‌ಪಿಎಲ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಅಗತ್ಯ ಅನುಕೂಲಗಳನ್ನು ಕಲ್ಪಿಸಿ, ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕೊಪ್ಪಳ: ತಾಲೂಕಿನ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಭೂಮಿ ಕಳೆದುಕೊಂಡ ರೈತರ ಒಕ್ಕೂಟಕ್ಕೆ ಬೆಂಬಲ ಸೂಚಿಸಿ, ಬಿಎಸ್‌ಪಿಎಲ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಅಗತ್ಯ ಅನುಕೂಲಗಳನ್ನು ಕಲ್ಪಿಸಿ, ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ರೈತರು ಕೈಗೊಂಡಿರುವ 11ನೇ ದಿನದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡ ಸ್ವ-ಸಹಾಯ ಸಂಘಗಳ ಮಹಿಳೆಯರು, ಕಾರ್ಖಾನೆ ಸ್ಥಾಪನೆಯಿಂದ ನಮ್ಮ ತಾಲೂಕಿನ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳು ಲಭಿಸಲಿದ್ದು, ವಿಶೇಷವಾಗಿ ಬಡ ಕುಟುಂಬಗಳ ಮಹಿಳೆಯರಿಗೆ ಅದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.ಈ ವೇಳೆ ಮಾತನಾಡಿದ ಮಹಿಳಾ ಸದಸ್ಯರು, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವ ಬಲ್ಡೋಟ ಸಮೂಹದ ಎಂಎಸ್‌ಪಿಎಲ್ ಸಂಸ್ಥೆ ಈಗಾಗಲೇ ಮಹಿಳಾ ಸಬಲೀಕರಣ, ಆರೋಗ್ಯ, ಗ್ರಾಮ ನೈರ್ಮಲ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಪ್ರಸ್ತಾವಿತ ಉಕ್ಕಿನ ಕಾರ್ಖಾನೆಯೂ ಪರಿಸರ ಸ್ನೇಹಿಯಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಅಲ್ಲದೆ, ಬಲ್ಡೋಟ ಕಂಪನಿ ಸ್ಥಾಪಿಸಲಿರುವ ಉಕ್ಕಿನ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಮಹಿಳಾ ಸಬಲೀಕರಣ, ಸಸಿ ನೆಡುವುದು, ಶೌಚಾಲಯ ನಿರ್ಮಾಣ, ಕೌಶಲ್ಯಾಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಉತ್ತೇಜನ ನೀಡುವ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಕಂಪನಿ ಭರವಸೆ ನೀಡಿದೆ ಎಂದು ಅವರು ತಿಳಿಸಿದರು.ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಾದ ಲಲಿತಮ್ಮ, ಮಮತಾ, ಮಾಲಾ ಸೇರಿದಂತೆ ಹಲವರು ಮಾತನಾಡಿದರು. ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕೈಗಾರಿಕೆ ಸ್ಥಾಪನೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ಧರಣಿ ನಿರತ ರೈತ ಮುಖಂಡರಾದ ಕಾಮಣ್ಣ ಕಂಬಳಿ, ನಾಗರಾಜ್ ಗುರಿಕಾರ, ಪ್ರಾಣೇಶ್, ಮನೋಜ್ ಡಿ.ಎಚ್., ದುರುಗಪ್ಪ ಭಾವಿಮನಿ, ಸ್ವಾಮಿ ಮೊದಲಾದವರು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಧನ್ಯವಾದ ತಿಳಿಸಿದರು.