ಅಂತಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ಹೆಸರು ಕೆಡಿಸುವ ನೂರಾರು ಶವ ಹೂತಿಟ್ಟ ಹುನ್ನಾರ ತಮ್ಮ ಪಾಲಿಗೆ ಉರುಳಾಗುತ್ತಿದ್ದಂತೆ ಯೂ ಟರ್ನ್‌ ಹೊಡೆದಿರುವ ‘ಬುರುಡೆ ಗ್ಯಾಂಗ್‌’, ಇದೀಗ ದೂರುದಾರ ಚಿನ್ನಯ್ಯ ಹೇಳಿಕೆ ಮೇರೆಗೆ ದಾಖಲಾಗಿದ್ದ ಮೂಲ ಪ್ರಕರಣವನ್ನೇ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ 

 ಬೆಂಗಳೂರು : ಅಂತಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ಹೆಸರು ಕೆಡಿಸುವ ನೂರಾರು ಶವ ಹೂತಿಟ್ಟ ಹುನ್ನಾರ ತಮ್ಮ ಪಾಲಿಗೆ ಉರುಳಾಗುತ್ತಿದ್ದಂತೆ ಯೂ ಟರ್ನ್‌ ಹೊಡೆದಿರುವ ‘ಬುರುಡೆ ಗ್ಯಾಂಗ್‌’, ಇದೀಗ ದೂರುದಾರ ಚಿನ್ನಯ್ಯ ಹೇಳಿಕೆ ಮೇರೆಗೆ ದಾಖಲಾಗಿದ್ದ ಮೂಲ ಪ್ರಕರಣವನ್ನೇ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದೆ.

ಈ ಅರ್ಜಿ ನ್ಯಾಯಮೂರ್ತಿ ಮಹಮ್ಮದ್‌ ನವಾಜ್‌ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬರಲಿದೆ.

ಧರ್ಮಸ್ಥಳಕ್ಕೆ ಮಸಿ ಬಳಿಯುವ ಪ್ರಯತ್ನವಾಗಿ ತಾವೇ ಹೋರಾಟ ಮಾಡಿ ಹಾಕಿಸಿದ್ದ ಪ್ರಕರಣವನ್ನೆ ರದ್ದುಪಡಿಸುವಂತೆ ಬುರುಡೆ ಗ್ಯಾಂಗ್‌ ಇದೀಗ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರಕರಣದ ಟರ್ನಿಂಗ್‌ ಪಾಯಿಂಟ್‌ ಎಂಬಂತೆ ಬುರುಡೆ ತಂದ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದರಿಂದ ಇಡೀ ಬುರುಡೆ ಗ್ಯಾಂಗ್‌ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ. ಜತೆಗೆ ಸುಜಾತಾ ಭಟ್‌ ಪ್ರಕರಣದಲ್ಲಿ ಸತ್ಯ ಬೆಳಕಿಗೆ ಬಂದು ಮುಖಭಂಗ ಆಗಿರುವುದು, ಪ್ರಕರಣದಲ್ಲಿ ಹುರುಳಿಲ್ಲದೆ ಸುಳ್ಳು ದೂರು, ಸಾಕ್ಷ್ಯ ಸೃಷ್ಟಿ ಹಿನ್ನೆಲೆಯಲ್ಲಿ ತಮ್ಮ ಬಂಧನ ಆಗುವುದನ್ನು ತಪ್ಪಿಸಿಕೊಳ್ಳಲು ಬುರುಡೆ ಗ್ಯಾಂಗ್‌ ಈ ಪ್ರಯತ್ನ ಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ವಕೀಲರಾದ ಬಾಲನ್‌ ಮೂಲಕ ಅರ್ಜಿ

ಈ ಸಂಬಂಧ ದಕ್ಷಿಣ ಕನ್ನಡದ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಮೂಲ ಎಫ್‌ಐಆರ್‌ (0039) ರದ್ದುಪಡಿಸಿ, ಎಸ್‌ಐಟಿ ಅ.24ರಂದು ವಿಚಾರಣೆಗೆ ಹಾಜರಾಗುವಂತೆ ನೀಡಲಾಗಿರುವ ನೋಟಿಸ್‌ ಅನ್ನೂ ರದ್ದುಪಡಿಸಬೇಕು ಎಂದು ವಕೀಲರಾದ ಬಾಲನ್‌ ಮೂಲಕ ಗಿರೀಶ್‌ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್‌ ಹಾಗೂ ವಿಠಲ ಗೌಡ ಅರ್ಜಿ ಸಲ್ಲಿದ್ದಾರೆ.

ಖುದ್ದಾಗಿ ನೋಟಿಸ್‌ ನೀಡದೆ ವಾಟ್ಸ್‌ ಆ್ಯಪ್‌, ಇ ಮೇಲ್‌ನಲ್ಲಿ ನೀಡಿದ್ದಾರೆ. ಈಗಾಗಲೇ ಹಲವು ಬಾರಿ ವಿಚಾರಣೆಗೆ ಕರೆದಿದ್ದರು. ಸುಮಾರು 100 ಗಂಟೆಗೂ ಹೆಚ್ಚಿನ ಕಾಲ ನಮ್ಮನ್ನು ವಿಚಾರಣೆ ಮಾಡಿದ್ದಾರೆ. ದೂರಿಗೆ ಸಂಬಂಧಿಸಿ 164 ಹೇಳಿಕೆಗಳಲ್ಲಿ ತಮ್ಮ ವಿರುದ್ಧ ಆರೋಪಗಳಿಲ್ಲ. ಆದರೂ ನೋಟಿಸ್‌ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಚಿನ್ನಯ್ಯ ನೀಡಿದ್ದ ದೂರಿನ ನಂತರ ಎಸ್‌ಐಟಿ ಆ.23ರಂದು ಪ್ರಕರಣಕ್ಕೆ ಹೊಸದಾಗಿ ಕೆಲ ಕಲಂಗಳನ್ನು ಸೇರ್ಪಡೆ ಮಾಡಿತ್ತು. ಅವು ಬಿಎನ್‌ಎಸ್‌ ಸೆಕ್ಷನ್‌ 336 ನಕಲಿ ದಾಖಲೆ, ಎಲೆಕ್ಟ್ರಾನಿಕ್ ದಾಖಲೆ ವಂಚನೆ ಉದ್ದೇಶಕ್ಕೆ ಬಳಕೆ, 211(ಎ) ಉದ್ದೇಶಪೂರ್ವಕ ಮಾಹಿತಿ ನೀಡಲು ವಿಫಲ, 230 ಸುಳ್ಳು ಸಾಕ್ಷ್ಯ ಸೃಷ್ಟಿ, 229 ಉದ್ದೇಶಪೂರ್ವಕ ಸುಳ್ಳು ಸಾಕ್ಷ್ಯ ಸೃಷ್ಟಿ, 227 ಉದ್ದೇಶಪೂರ್ವಕ ಸುಳ್ಳು ಹೇಳಿಕೆ, 248 ಸುಳ್ಳು ಕ್ರಿಮಿನಲ್‌ ಮೊಕದ್ದಮೆ ಸೇರ್ಪಡೆ ಮಾಡಿದ ಕಲಂಗಳಾಗಿವೆ.

ಬಳಿಕ ಚಿನ್ನಯ್ಯನ ಬಂಧನವಾಗಿತ್ತು. ಮುಂದುವರಿದು, ಅ.24ರಂದು ಗಿರೀಶ್‌ ಮಟ್ಟಣ್ಣವರ್‌ಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿತ್ತು. ಈ ವಿಚಾರಣೆಗೆ ಹಾಜರಾದಲ್ಲಿ ಬಂಧನ ಸಾಧ್ಯತೆ ಹೆಚ್ಚಿರುವ ಕಾರಣದಿಂದ ಇದೀಗ ಬುರುಡೆ ಗ್ಯಾಂಗ್‌ ಪ್ರಕರಣವನ್ನೇ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದೆ.

ಎಸ್‌ಐಟಿ ರದ್ದತಿಗೆ ಪ್ರಯತ್ನ?:

ಈ ದೂರು ಆಧರಿಸಿಯೇ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಎಫ್‌ಐಆರ್‌ ರದ್ದಾದಲ್ಲಿ ಎಸ್‌ಐಟಿಯೇ ರದ್ದಾದಂತೆ ಆಗಲಿದೆ. ಎಸ್‌ಐಟಿ ರಚನೆ ಆಗಿದ್ದ ವೇಳೆ ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ್ದ ಬುರುಡೆ ಗ್ಯಾಂಗ್‌ ಇದೀಗ ಎಸ್‌ಐಟಿಯನ್ನೇ ರದ್ದು ಮಾಡಲು ಹೊರಟಿರುವುದು ಸಂಶಯಕ್ಕೆ ಕಾರಣವಾಗಿದೆ.

ಮೂಲ ದೂರಿನಲ್ಲೇನಿದೆ?:

ಚಿನ್ನಯ್ಯ 13-7-2025ರಂದು ನೀಡಿದ್ದ ದೂರಿನಲ್ಲಿ 1994ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಕೆಲ ದಿನಗಳ ಬಳಿಕ ನನ್ನ ಕೆಲಸ ಭಯಾನಕ ಅಪರಾಧಗಳ ಸಾಕ್ಷ್ಯಗಳನ್ನು ಮರೆಮಾಚುವ ಕೆಲಸವಾಗಿ ಬದಲಾಯಿತು. ನಾನು ಸ್ವೀಕರಿಸುವ ಶವಗಳನ್ನು ಹೂತುಹಾಕದಿದ್ದರೆ ಅವುಗಳ ಜೊತೆಗೆ ಮಣ್ಣು ಮಾಡುವ ಬೆದರಿಕೆ ಹಾಕಲಾಗಿತ್ತು. ಮೊದಲಿಗೆ ನನಗೆ ಸಿಕ್ಕ ಶವಗಳನ್ನು ಆತ್ಮಹತ್ಯೆ ಎಂದೇ ಭಾವಿಸಿದ್ದೆ, ಆದರೆ ಅನೇಕ ಮಹಿಳಾ ಶವಗಳು ಅತ್ಯಾಚಾರಕ್ಕೆ ಒಳಗಾಗಿದ್ದವು, ಅವುಗಳ ಮೇಲೆ ಉಡುಪು ಇರಲಿಲ್ಲ. ಹಿಂಸೆ ನೀಡಲಾಗಿದ್ದ, ಕತ್ತು ಹಿಸುಕಿ ಕೊಲ್ಲಲ್ಪಟ್ಟಂತಿದ್ದವು. ನಿರಂತರ ಬೆದರಿಕೆಗೆ ಭಯಪಟ್ಟು ಡಿ.2014ರಲ್ಲಿ ನಾನು ಕುಟುಂಬದೊಡನೆ ಧರ್ಮಸ್ಥಳದಿಂದ ಓಡಿ ಹೋದೆ. ಆದರೆ ಈಗ ಪಾಪಪ್ರಜ್ಞೆ ಕಾಡುತ್ತಿದ್ದು, ನಾನು ಹೂತಿಟ್ಟ ಶವಗಳನ್ನು ಪೊಲೀಸರ ಸಮ್ಮುಖದಲ್ಲಿ ತೆಗೆಯಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದ.