ಸಾರಾಂಶ
ಕೇಶವ ಕುಲಕರ್ಣಿ
ಕನ್ನಡಪ್ರಭ ವಾರ್ತೆ ಜಮಖಂಡಿಬಂಗಾಳ ಕೊಲ್ಲಿಯ ಆಂಧ್ರಪ್ರದೇಶದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿರುವ ಮೋಂಥಾ ಚಂಡಮಾರುತ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತುಂತುರು ಮಳೆ ಹಾಗೂ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ದ್ರಾಕ್ಷಿ ಬೆಳೆ ಕೀಟಬಾಧೆಗೆ ತುತ್ತಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ಒಣಹವೆ ಪ್ರದೇಶದಲ್ಲಿ ಬೆಳೆಯುವ ದ್ರಾಕ್ಷಿಗೆ ಹೆಚ್ಚು ಬಿಸಿಲು ಬೇಕು. ಮೋಡ ಕವಿದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ದಾವಣಿ ರೋಗ, ಕೊಳೆರೋಗ ಕಾಣಿಸಿಕೊಂಡಿದೆ. ರೈತರು ಪ್ರತಿದಿನ ಔಷಧಿ ಸಿಂಪಡಿಸಿದರೂ ನಿಯಂತ್ರಣಕ್ಕೆ ಬಾರದೇ ಬೆಳೆಹಾನಿ ಭೀತಿ ಕಾಡುತ್ತಿದೆ.
ಹೂವು ಬಿಡುವ ಹಂತದಲ್ಲಿರುವ ದ್ರಾಕ್ಷಿ ಬೆಳೆ ಹವಾಮಾನ ವೈಪರೀತ್ಯದಿಂದಾಗಿ ರೋಗಕ್ಕೆ ತುತ್ತಾಗುತ್ತಿದೆ. ಜಮಖಂಡಿ ತಾಲೂಕಿನಲ್ಲಿ ಸುಮಾರು 3500 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ವರ್ಷದ ಬೆಳೆಯಾಗಿರುವ ದ್ರಾಕ್ಷಿಯನ್ನು ಅತ್ಯಂತ ಜೋಪಾನವಾಗಿ ಕೃಷಿ ಮಾಡಬೇಕಾಗುತ್ತದೆ. ಜನವರಿ ತಿಂಗಳಿನಿಂದ ಬಳ್ಳಿ ಕಟ್ ಮಾಡಿ ಸಕಾಲಕ್ಕೆ ಗೊಬ್ಬರ, ನೀರು ಒದಗಿಸಿದ ಬಳಿಕ ಚಿಗಿತ ಬಳ್ಳಿಯಲ್ಲಿ ಹೆಚ್ಚಿನ ಅಂಶ ತೆಗೆದು ಹಾಕಿ, ಬಣ್ಣ ಹಚ್ಚಲಾಗುತ್ತದೆ. ನಂತರ ಹೂ ಬಿಡುವ ಪ್ರಕ್ರಿಯೆ 5 ತಿಂಗಳವರೆಗೆ ನಡೆಯುತ್ತದೆ. ನಂತರದ ಐದು ತಿಂಗಳಿನಲ್ಲಿ ಗೊನೆ ಹಾಗೂ ಕಾಯಿಗಳು ಹುಟ್ಟಿಕೊಳ್ಳುತ್ತವೆ. ಗೊನೆಗಳು ಸಿದ್ಧವಾಗುವ ಹಂತದಲ್ಲಿ ತಿಳಿಯಾದ ವಾತಾವರಣ ಅವಶ್ಯಕವಾಗಿರುತ್ತದೆ. ಆದರೆ ಈಗ ಹವಾಮಾನ ವೈಪರೀತ್ಯದ ಪರಿಣಾಮ ಮೋಡ ಕವಿದ ವಾತಾವರಣದಿಂದ ದ್ರಾಕ್ಷಿ ಬಳ್ಳಿ ಹೂ ಬಿಡುತ್ತಿಲ್ಲ. ಕೆಲ ರೈತರ ತೋಟಗಳಲ್ಲಿ ಬಿಟ್ಟಿರುವ ಹೂವುಗಳೂ ಸಹ ಉದುರಿ ಬೀಳತೊಡಗಿವೆ. ಪ್ರಕೃತಿ ವಿಕೋಪದಿಂದ ಕೈಗೆ ಬಂದ ಬೆಳೆ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರದ್ದಾಗಿದ್ದು, ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.ಹೂವುಗಳು ಉದುರಿ ಬೀಳದಂತೆ, ಹೂ ಬಿಡುವ ಹಂತದಲ್ಲಿರುವ ಬಳ್ಳಿಗಳು ಆರೋಗ್ಯವಾಗಿರುವಂತೆ ಪ್ರತಿನಿತ್ಯ ಔಷಧಿ ಸಿಂಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹತ್ತು ತಿಂಗಳಿಂದ ಪರಿಶ್ರಮ ಪಟ್ಟು ಬೆಳೆಸಿದ ಬೆಳೆಗೆ ಹೂವು,ಕಾಯಿ ಬಿಡುವ ಹಂತದಲ್ಲಿ ಮೋಡ ಕವಿದ ವಾತಾವರಣ, ಅಕಾಲಿಕ ಮಳೆ ಕಂಟಕವಾಗಿ ಕಾಡುತ್ತಿದೆ. ಇದರಿಂದ ದ್ರಾಕ್ಷಿ ಬೆಳೆಗಾರರಿಗೆ ನಿರೀಕ್ಷಿತ ಫಸಲು ಕೈಸೇರುವ ಭರವಸೆಯೇ ಇಲ್ಲದಂತಾಗಿದೆ.
ಅಕಾಲಿಕ ಮಳೆ ಹಾಗೂ ಮೋಡಕವಿದ ವಾತಾವರಣದಿಂದಾಗಿ ದ್ರಾಕ್ಷಿ ಬೆಳೆಗೆ ರೋಗಬಾಧೆ ಕಾಣಿಸಿಕೊಂಡಿದೆ. ಈ ಕುರಿತು ಬೆಳೆಗಾರರಿಗೆ ಸಲಹೆ ನೀಡಲಾಗಿದ್ದು ಹೂವು ಉದರದಂತೆ ಹಾಗೂ ಬೆಳೆಗೆ ಬರುವ ದಾವಣಿ ರೋಗಕ್ಕೆ ಔಷಧಿ ಸಿಂಪಸಿಡಿಸಲು ಸಲಹೆ ನೀಡಲಾಗಿದೆ.- ಪ್ರವೀಣ ಕುಮಾರ ತೋಟಗಾರಿಕೆ ಇಲಾಖೆ ಜಮಖಂಡಿ
ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣಕ್ಕೆ ದ್ರಾಕ್ಷಿ ಬೆಳೆಗೆ ದಾವಣಿ ರೋಗ ಹಾಗೂ ಕೊಳೆ ರೋಗ ಬಾಧಿಸುತ್ತಿದೆ. ಹೂವುಗಳು ಉದುರುತ್ತಿದ್ದು, ನಿಗದಿತ ಪ್ರಮಾಣದ ಇಳುವರಿ ದೊರೆಯುತ್ತದೆ ಎಂಬ ಭರವಸೆ ಇಲ್ಲದಂತಾಗಿದೆ. ಪ್ರತಿನಿತ್ಯ ವಿವಿಧ ಔಷಧಿಗಳನ್ನು ಸಿಂಪಡಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದರಿಂದ ರೈತರಿಗೆ ಅನಿವಾರ್ಯವಾಗಿ ಹೆಚ್ಚಿನ ಖರ್ಚು ಮಾಡಬೇಕಾಗಿದೆ. ದ್ರಾಕ್ಷಿ ಬೆಳೆದ ರೈತರ ಪರಿಸ್ಥಿತಿ ಹದಗೆಟ್ಟಿದೆ.- ರಾಮು ಗಂಗಪ್ಪ ಢವಳೇಶ್ವರ ದ್ರಾಕ್ಷಿ ಬೆಳೆಗಾರರು ಹಿರೇಪಡಸಲಗಿ
;Resize=(128,128))
;Resize=(128,128))
;Resize=(128,128))