ಕನ್ನಡಪ್ರಭ ವಾರ್ತೆ ಪಾಂಡವಪುರ
ವಿದ್ಯಾಭ್ಯಾಸದೊಂದಿಗೆ ವ್ಯವಹಾರ ಹಾಗೂ ಸಂವಹನದ ಕೌಶಲ್ಯ ಕಲಿತಾಗ ಮಾತ್ರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಬಹುದು ಎಂದು ಕದಂಬ ಟ್ರಸ್ಟ್ ನಿರ್ದೇಶಕ ಬಿ.ಸಿ.ಕೃಷ್ಣ ಹೇಳಿದರು.ತಾಲೂಕಿನ ಚಿನಕುರಳಿ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿವರ್ಹಣೆ ವಿಭಾಗವು ಐಐಸಿ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕದ ಸಹಯೋಗದೊಂದಿಗೆ ಆಯೋಜಿಸಿದ್ದ ಎಂಪವರಿಂಗ್ ಯಂಗ್ ಮೈಂಡ್ಸ್ ಎಂಬ ಹೆಸರಿನಡಿ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿರು.
ಕಾಲೇಜಿನಲ್ಲಿ ನಡೆಯುತ್ತಿರುವ ಕಾರ್ಯಾಗಾರಗಳಲ್ಲಿ ಆಸಕ್ತಿಯಿಂದ ಬರುವ ಸಂಪನ್ಮೂಲ ವ್ಯಕ್ತಿಗಳ ವಿಚಾರಗಳನ್ನು ತಿಳಿದು ತಮ್ಮ ಮನಸ್ಸಿನಲ್ಲಿ ಬರುವ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.ಕದಂಬ ಟ್ರಸ್ಟ್‌ನ ಕಾರ್ಯದರ್ಶಿ ಡಿ.ಜೆ.ಕಿರಣ್ ಮಾತನಾಡಿ, ಗೆಲ್ಲುವ ವ್ಯಕ್ತಿ ಎಂದಿಗೂ ಸೋಲಿಗೆ ಹೆದರಬಾರದು. ಪ್ರತಿಸೋಲು ಗೆಲುವಿನ ಮೆಟ್ಟಿಲಾಗಿ ಮಾರ್ಪಡಿಸಿಕೊಂಡು ಗೆಲ್ಲುವ ಶಿಖರ ಮುಟ್ಟಬೇಕು. ಆ ರೀತಿ ಕ್ರಮಿಸಲು ಕಾಲೇಜು ಹಂತದಲ್ಲಿಯೇ ನಡೆಯುವ ಈ ರೀತಿಯ ಕಾರ್ಯಾಗಾರವು ಬಹಳ ಮುಖ್ಯ ಎಂದರು.
ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕುವವರಾಗಬಾರದು. ಉದ್ಯೋಗವನ್ನು ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರೇರಣೆಯನ್ನು ಪಡೆದು ಪ್ರಾಯೋಗಿಕ ತರಬೇತಿ ಪಡೆದುಕೊಂಡು ತಮ್ಮ ಗುರಿಯತ್ತ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧಿಸಬಹುದು ಎಂದರು.
ಕಾರ್ಯಾಗಾರದಲ್ಲಿ ಶಾಖಾ ವ್ಯವಸ್ಥಾಪಕ ನಾಗೇಂದ್ರ, ವರಾಂಡಾ ರೇಸ್ ಸಲಹಾ ವಿಭಾಗಾಧಿಕಾರಿ ದಿಲೀಪ್ ಕುಮಾರ್, ಮೈಲಾಜಿಕ್ ಬಿಸಿನೆಸ್ ಸ್ಕೂಲ್ ಮುಖ್ಯಸ್ಥೆ ಲೀನಾ, ಬೆಂಗಳೂರು ಬಿಬಿಎ ಕೆ.ಎಲ್.ವಿವಿ ಡೀನ್ ಶ್ರೀನಿವಾಸುಲು, ಶಾಖಾ ವ್ಯವಸ್ಥಾಪಕ ಸುಜಯ್ ಕುಮಾರ್, ಗ್ರೇಟರ್ ನ್ಯಾಕ್ ನಿರ್ದೇಶಕ ನಿಖಿತ ಶ್ರೀನಿವಾಸ್, ಮೈಸೂರು ಶೇಷಾದ್ರಿಪುರ ಕಾಲೇಜು ಮಾರ್ಗದರ್ಶಕ ರಾಘವೇಂದ್ರ ವಿದ್ಯಾರ್ಥಿಗಳಿಗೆ ವೃತ್ತಿ ಹಾಗೂ ಶೈಕ್ಷಣಿಕ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ನ್ಯಾಕ್ ಸಂಯೋಜಕರಾದ ಎಚ್.ಚರಣ್ ರಾಜ್, ಸಹಾಯಕ ಪ್ರಾಧ್ಯಾಪಕಿ ಪಲ್ಲವಿ ಉಪಸ್ಥಿತರಿದ್ದರು.