ನಗರದ ಸಂತ ಅಲೋಶಿಯಸ್ ಕಾಲೇಜಿನ ಫಾ.ಎಲ್.ಎಫ್. ರಸ್ಕಿನಾ ಸಭಾಂಗಣದಲ್ಲಿ ಶನಿವಾರ ‘ನಮ್ಮ ಕುಡ್ಲ ಕರ್ಣಾಟಕ ಬ್ಯಾಂಕ್ ಬ್ಯುಸಿನೆಸ್ ಟಾನಿಕ್’ ಕಾರ್ಯಕ್ರಮದ 350ನೇ ಸಂಚಿಕೆಯ ಸಮಾರಂಭ
ಮಂಗಳೂರು: ಭಾರತದಲ್ಲಿ ಉದ್ಯಮ ಸ್ಥಾಪನೆಗೆ ವಿಫುಲ ಅವಕಾಶಗಳಿದ್ದು, ನಮ್ಮ ದೇಶದ ಯುವಕರು ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋಗುವ ಬದಲು ಇಲ್ಲೇ ಉದ್ಯಮ ಸ್ಥಾಪನೆ ಮಾಡಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹಿರಿಯ ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್ ಹೇಳಿದ್ದಾರೆ.ನಗರದ ಸಂತ ಅಲೋಶಿಯಸ್ ಕಾಲೇಜಿನ ಫಾ.ಎಲ್.ಎಫ್. ರಸ್ಕಿನಾ ಸಭಾಂಗಣದಲ್ಲಿ ಶನಿವಾರ ‘ನಮ್ಮ ಕುಡ್ಲ ಕರ್ಣಾಟಕ ಬ್ಯಾಂಕ್ ಬ್ಯುಸಿನೆಸ್ ಟಾನಿಕ್’ ಕಾರ್ಯಕ್ರಮದ 350ನೇ ಸಂಚಿಕೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತ ಇಂದು ಆರ್ಥಿಕತೆಯಲ್ಲಿ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿ ಮೂಡಿಬಂದಿದೆ. ಇಂಥ ಸಂದರ್ಭದಲ್ಲಿ ಯುವ ಜನತೆ ವಿದೇಶಗಳಿಗೆ ಉದ್ಯೋಗ ಅರಸಿ ಹೋಗುವುದಕ್ಕಿಂತ ಇಲ್ಲೇ ಇದ್ದು ಉದ್ಯಮ ಸೃಷ್ಟಿಯತ್ತ ಕಾರ್ಯೋನ್ಮುಖರಾಗಬೇಕಾದ ಅನಿವಾರ್ಯತೆ ಇದೆ, ಅದಕ್ಕೆ ಸಾಕಷ್ಟು ಅವಕಾಶಗಳೂ ಇವೆ. ಈ ನಿಟ್ಟಿನಲ್ಲಿ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 7 ವರ್ಷಗಳ ಹಿಂದೆ ‘ಬ್ಯುಸಿನೆಸ್ ಟಾನಿಕ್’ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದರು.ಕೊರೊನಾ ಸಂದರ್ಭದಲ್ಲಿಯೂ ಈ ಕಾರ್ಯಕ್ರಮ ಮುಂದುವರಿಸಿಕೊಂಡು ಬಂದಿದ್ದೇವೆ. ವ್ಯಾಪಾರ, ವ್ಯವಹಾರದ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಮತ್ತು ವಿತ್ತೀಯ ಸಾಕ್ಷರತೆಯನ್ನು ಒದಗಿಸುವ ಉದ್ದೇಶ ಇದರಲ್ಲಿದ್ದು, ಯಶಸ್ವಿಯಾಗಿ ಮೂಡಿಬರುತ್ತಿದೆ ಎಂದು ಎಸ್.ಎಸ್. ನಾಯಕ್ ತಿಳಿಸಿದರು.
ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ದೀಪ ಪ್ರಜ್ವಲನೆ ಮಾಡಿದರು. ಕರ್ಣಾಟಕ ಬ್ಯಾಂಕ್ ಎಂಡಿ ಹಾಗೂ ಸಿಇಒ ರಾಘವೇಂದ್ರ ಶ್ರೀನಿವಾಸ ಭಟ್ 350ನೇ ಸಂಚಿಕೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿಯೂ ಈ ಕಾರ್ಯಕ್ರಮವನ್ನು ಎಸ್.ಎಸ್. ನಾಯಕ್ ನಡೆಸಿಕೊಟ್ಟಿದ್ದು ಶ್ಲಾಘನೀಯ ಎಂದರು.ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಮಾತನಾಡಿದರು. ಸಂತ ಅಲೋಶಿಯಸ್ ಕಾಲೇಜಿನ ಉಪಕುಲಪತಿ ರೆ.ಫಾ.ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಬ್ಯಾಂಕಿನ ಚೇರ್ಮನ್ ಸೂರ್ಯಕಾಂತ್ ಜೆ. ಸುವರ್ಣ, ಕೆಸಿಸಿಐ ಅಧ್ಯಕ್ಷ ಪಿ. ಬಿ. ಅಹ್ಮದ್ ಮುದಸ್ಸಿರ್, ಇಸ್ಕಾನ್ ಮಂಗಳೂರು ಸಂಸ್ಥೆ ಅಧ್ಯಕ್ಷ ಗುಣಕರ ರಾಮದಾಸ ಅತಿಥಿಗಳಾಗಿ ಭಾಗವಹಿಸಿದ್ದರು. ನಮ್ಮ ಕುಡ್ಲ ವಾಹಿನಿ ನಿರ್ದೇಶಕರಾದ ಹರೀಶ್ ಬಿ. ಕರ್ಕೇ, ಸುರೇಶ್ ಬಿ. ಕರ್ಕೇರ ಇದ್ದರು.