ಹಾಸನದ ಆಲೂರಿನಲ್ಲಿ ಬಿರುಸು ಪಡೆದ ‘ಪುಟ್ಟಗೂಡಿನ ಪಟ್ಟದರಸಿ’ ಚಲನಚಿತ್ರದ ಚಿತ್ರೀಕರಣ

| Published : May 20 2024, 01:37 AM IST

ಹಾಸನದ ಆಲೂರಿನಲ್ಲಿ ಬಿರುಸು ಪಡೆದ ‘ಪುಟ್ಟಗೂಡಿನ ಪಟ್ಟದರಸಿ’ ಚಲನಚಿತ್ರದ ಚಿತ್ರೀಕರಣ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಪುಟ್ಟಗೂಡಿನ ಪಟ್ಟದರಸಿ’ ಮಕ್ಕಳ ಚಲನಚಿತ್ರದ ಚಿತ್ರೀಕರಣವು ಹಾಸನದ ಆಲೂರು ತಾಲೂಕಿನ ತಾಳೂರಿನಲ್ಲಿ ಬಿರುಸಿನಿಂದ ಸಾಗಿದೆ.

ಕೊಟ್ರೇಶ್ ಉಪ್ಪಾರ ಕಾದಂಬರಿ ಆಧಾರಿತ ಮಕ್ಕಳಚಿತ್ರ

ಕನ್ನಡಪ್ರಭ ವಾರ್ತೆ ಹಾಸನ

ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಪುಟ್ಟಗೂಡಿನ ಪಟ್ಟದರಸಿ’ ಮಕ್ಕಳ ಚಲನಚಿತ್ರದ ಚಿತ್ರೀಕರಣವು ಆಲೂರು ತಾಲೂಕಿನ ತಾಳೂರಿನಲ್ಲಿ ಬಿರಿಸಿನಿಂದ ಸಾಗಿದೆ.

ಶಿಕ್ಷಕ, ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರವರ ‘ಪುಟ್ಟಗೂಡಿನ ಪಟ್ಟದರಸಿ’ ಕಾದಂಬರಿ ಆಧರಿಸಿ ಈ ಮಕ್ಕಳ ಚಿತ್ರ ಮಾಡುತ್ತಿದ್ದು ಕಾದಂಬರಿಯ ಸನ್ನಿವೇಶಗಳೆಲ್ಲವೂ ಆಲೂರು ಹಾಗೂ ಬೇಲೂರಿನ ಸುತ್ತಮುತ್ತ ನಡೆಯುತ್ತಿದೆ. ಕಾದಂಬರಿಯ ಅನುಸಾರ ಚಿತ್ರಕ್ಕೆ ಚಿತ್ರಕಥೆ ಮಾಡಿಕೊಂಡಿರುವ ಚಿತ್ರತಂಡವು ಚಿತ್ರದ ಎಲ್ಲಾ ಸನ್ನಿವೇಶಗಳನ್ನು ಕಾದಂಬರಿಯಲ್ಲಿ ಬರುವ ಊರುಗಳಲ್ಲಿ ಚಿತ್ರಿಸಲು ತೀರ್ಮಾನಿಸಿ ಚಿತ್ರೀಕರಣ ಆರಂಭಿಸಿದೆ.

ಆಲೂರು ತಾಲೂಕಿನ ತಾಳೂರಿನಲ್ಲಿ ಬೀಡು ಬಿಟ್ಟಿರುವ ಚಿತ್ರತಂಡವು ಕಳೆದ ಹತ್ತು ದಿನಗಳಿಂದ ಸತತವಾಗಿ ತಾಳೂರಿನ ಸುತ್ತಮುತ್ತ ಊರುಗಳಲ್ಲಿ ಹಾಗೂ ತಾಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಚಿತ್ರೀಕರಣ ನಡೆಸುತ್ತಿದೆ. ಬಹುತೇಕ ಸ್ಥಳೀಯ ಹೊಸ ಪ್ರತಿಭೆಗಳನ್ನು ಹೊಂದಿರುವ ಈ ಮಕ್ಕಳ ಚಿತ್ರದ ಚಿತ್ರೀಕರಣಕ್ಕೆ ಸ್ಥಳೀಯರ ಬೆಂಬಲ ಹಾಗೂ ಸಹಕಾರ ಹೆಚ್ಚಾಗಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.

ಚಿತ್ರದಲ್ಲಿ ಐವತ್ತಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದರು. ಇವರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ತಾಳೂರು ಹಾಗೂ ಬೇಲೂರಿನಲ್ಲಿ ಮುಂದಿನನ ಹಂತದ ಚಿತ್ರೀಕರಣ ನಡೆಯಲಿದೆ. ಹಾಗೂ ಎರಡು ಹಾಡುಗಳನ್ನು ನಂತರ ಮಾಡಲಾಗುವುದು ಎಂದು ನಿರ್ಮಾಪಕರಾದ ಲಕ್ಷ್ಮಿ ಕುಮಾರ್ ತಿಳಿಸಿದರು.

ಚಿತ್ರಕ್ಕೆ ಸಂಭಾಷಣೆ ವಿಜಯ ಹಾಸನ್ ಬರೆದಿದ್ದು, ಛಾಯಾಗ್ರಹಣ ಚಂದು, ಸಂಕಲನ ಸ್ಟಾನಿ, ಸಹ ನಿರ್ದೇಶನ ಶರತ್ ಬಾಬು, ಅನಿಲ್ ಕುಮಾರ್, ಸಹಾಯಕ ನಿರ್ದೇಶಕರಾಗಿ ಅರ್ಜುನ್ ಇದ್ದು ಮೊದಲ ಬಾರಿಗೆ ಅರುಣ್ ಗೌಡ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ತಾರಾಗಣದಲ್ಲಿ ಕುಮಾರಿ ಶರಣ್ಯ, ಶಾಂತಕುಮಾರ್, ಸಿದ್ದು ಮಂಡ್ಯ, ಪೂಜಾ ರಘುನಂದನ್, ಲತಾಮಣಿ ತುರುವೇಕೆರೆ, ಮುರುಳಿ ಹಾಸನ್, ಸಾಸು ವಿಶ್ವನಾಥ್, ಪ್ರಭಾಕರ್, ಅಂಬಿಕಾ, ಸ್ಫೂರ್ತಿ, ಚಂದನ್, ದೀಪಿಕಾ, ಸಿಂಚನ, ಲಕ್ಷ್ಮಿ, ಧನ್ವಿನ್, ಗ್ಯಾರಂಟಿ ರಾಮಣ್ಣ, ತಾಳೂರು ಧರ್ಮ, ಶೇಖರ್‌, ಶ್ವೇತಾ ಮಂಜುನಾಥ್ ಸೇರಿ ಹಲವು ಕಲಾವಿದರು ಇದ್ದಾರೆ ಎಂದು ನಿರ್ಮಾಪಕರು ಮಾಹಿತಿ ನೀಡಿದರು.