ಒಂದಾಗಿ ಬದುಕುವುದರಿಂದ ಸಮಾಜದಲ್ಲಿ ಅಭ್ಯುದಯ: ಬ್ರಹ್ಮಾನಂದ ಶ್ರೀ

| Published : Sep 04 2024, 01:55 AM IST

ಒಂದಾಗಿ ಬದುಕುವುದರಿಂದ ಸಮಾಜದಲ್ಲಿ ಅಭ್ಯುದಯ: ಬ್ರಹ್ಮಾನಂದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ದ್ವೇಷ, ಅಸೂಯೆ, ಸಂಶಯ, ಸಿಟ್ಟು, ಸಿಡುಕು ಬಿಟ್ಟಾಗ ಮನಸ್ಸಿಗೆ ಆನಂದ ಸಿಗುತ್ತದೆ. ಸ್ವಾರ್ಥದಿಂದ ಭೇದಭಾವ ಉಂಟಾಗುತ್ತದೆ ಎಂದು ಬ್ರಹ್ಮಾನಂದ ಶ್ರೀಗಳು ತಿಳಿಸಿದರು.

ಭಟ್ಕಳ: ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುವುದರಿಂದ ಸಮಾಜದಲ್ಲಿ ಅಭ್ಯುದಯ ಉಂಟಾಗುತ್ತದೆ. ಧರ್ಮರಕ್ಷಣೆಗೆ ಮುಂದಿನ ಪೀಳಿಗೆಗೆ ಮಾದರಿಯಾಗಿ ಬದುಕು ಸಾಗಿಸಬೇಕು ಎಂದು ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಉಜಿರೆ ಶ್ರೀರಾಮ ಕ್ಷೇತ್ರದಲ್ಲಿ ತಮ್ಮ ಪಟ್ಟಾಭಿಷೇಕದ 16ನೇ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮೊಳಗಿನ ಅಧ್ಯಾತ್ಮ ಮೌಲ್ಯಗಳು ಜಾಗೃತವಾಗಿ, ಜಗತ್ತಿನ ಧರ್ಮಕ್ಕೆ ಶಕ್ತಿ ನೀಡಲು ಇನ್ನಷ್ಟು ಬಲಿಷ್ಠರಾಗಬೇಕು. ಮುಂದಿನ ಪೀಳಿಗೆಗೆ ಸಂಸ್ಕಾರ, ಮೌಲ್ಯಗಳನ್ನು ಪಸರಿಸುವ ಅಗತ್ಯವಿದ್ದು, ಮುಂದಿನ ಜನಾಂಗಕ್ಕೆ ಧರ್ಮ ಪ್ರಚಾರ ಮಾಡುವ ಜವಾಬ್ದಾರಿ ಎಲ್ಲರಿಗಿದೆ. ಜಾತಿ, ರಾಜಕೀಯ ಸಮಸ್ಯೆ ದೂರ ಮಾಡಿ ನಮ್ಮತನವನ್ನು ಸೃಷ್ಟಿಸಿಕೊಂಡು ಲೋಕಕಲ್ಯಾಣ ಕಾರ್ಯಗಳನ್ನು ಮಾಡಬೇಕು.

ದ್ವೇಷ, ಅಸೂಯೆ, ಸಂಶಯ, ಸಿಟ್ಟು, ಸಿಡುಕು ಬಿಟ್ಟಾಗ ಮನಸ್ಸಿಗೆ ಆನಂದ ಸಿಗುತ್ತದೆ. ಸ್ವಾರ್ಥದಿಂದ ಭೇದಭಾವ ಉಂಟಾಗುತ್ತದೆ ಎಂದು ಹೇಳಿದರು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ನಮ್ಮೊಳಗೆ ವ್ಯತ್ಯಾಸವಾದಾಗ ಸರಿದಾರಿಗೆ ತರುವ ಕೆಲಸಗಳು ಮಠಗಳಿಂದ ನಡೆಯುತ್ತದೆ. ಸ್ವಾಮೀಜಿಗಳ ಉದ್ದೇಶ ಶಿಷ್ಯರ ಉನ್ನತಿಯಾಗಿದೆ. ಬ್ರಹ್ಮಾನಂದ ಶ್ರೀಗಳ ಆಶಯದಂತೆ ಒಂಬತ್ತು ಶಾಖಾಮಠಗಳು ನಿರ್ಮಾಣವಾಗಬೇಕು. ಮುಂದಿನ ಚಾತುರ್ಮಾಸ್ಯವನ್ನು ಕೂಡ ಭಟ್ಕಳದಲ್ಲೇ ನಡೆಸಲು ಭಕ್ತರು ಉತ್ಸುಕತೆ ಹೊಂದಿದ್ದಾರೆಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ, ನಮ್ಮ ಸನಾತನ ಪರಂಪರೆಯಲ್ಲಿ ಗುರು ಪರಂಪರೆಗೆ ವಿಶಿಷ್ಟ ಸ್ಥಾನಮಾನ, ಮನ್ನಣೆ ಇದೆ. ಬದುಕಿನಲ್ಲಿ ಬೆಂದಿರುವ ಮಂದಿಗೆ ದಾರಿದೀಪವಾಗುವ ಶಕ್ತಿ ಗುರುವಿನಲ್ಲಿದೆ ಎಂದರು.ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿದರು. ಅಯೋಧ್ಯೆಯ ಕೇಶವದಾಸ್ ಮಹಾರಾಜ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಭಟ್ಕಳ ಆಸರಕೇರಿ ಗುರುಮಠದ ಅಧ್ಯಕ್ಷ ಅರುಣ್ ನಾಯ್ಕ, ಭಟ್ಕಳ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಹೊನ್ನಾವರ ಶ್ರೀರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ವಾಮನ ನಾಯ್ಕ ಮಂಕಿ, ಭಟ್ಕಳ ಶಾರದಾಹೊಳೆ ನಾಮಧಾರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಕೆ. ನಾಯ್ಕ್, ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ, ಕುಮಟಾ ಶ್ರೀರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ಆರ್.ಜಿ. ನಾಯ್ಕ, ಚಾತುರ್ಮಾಸ್ಯ ಸಮಿತಿಯ ಸಂಚಾಲಕ ಕೃಷ್ಣ ನಾಯ್ಕ ಪೃಥ್ವಿ ಮುಂತಾದವರು ಉಪಸ್ಥಿತರಿದ್ದರು.

ಮಠದ ಟ್ರಸ್ಟಿ ತುಕಾರಾಮ್ ಸಾಲಿಯಾನ್ ಸ್ವಾಗತಿಸಿದರು. ಶ್ರೀರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ನಿರೂಪಿಸಿದರು. ವರ್ಧಂತ್ಯುತ್ಸವದ ಅಂಗವಾಗಿ ಶ್ರೀರಾಮ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆಗಳು ಜರುಗಿದವು. ಭಕ್ತರಿಂದ ಸ್ವಾಮೀಜಿಯವರ ಪಾದಪೂಜೆ ನೆರವೇರಿತು.