ಕೃಷಿಕರು ಸುಭಿಕ್ಷರಾದರೆ ದೇಶದ ಪ್ರಗತಿ: ಶಿವರಾಮ ಹೆಬ್ಬಾರ

| Published : Sep 04 2024, 01:55 AM IST

ಸಾರಾಂಶ

ಮಳೆ ಬರಲಿ ಬಿಡಲಿ, ಬೇಡ್ತಿ ಹೊಳೆಗೆ ನೀರು ಬಂದರೆ ತಾಲೂಕಿನ ಕೆರೆಗಳು ಭರ್ತಿಯಾಗುತ್ತವೆ. ಈಗಾಗಲೇ ಶೇ. ೭೫ರಷ್ಟು ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಮುಂಡಗೋಡ: ದೇಶದ ಬೆನ್ನೆಲುಬಾದ ರೈತ ಸಮುದಾಯ ಸುಭಿಕ್ಷೆಯಿಂದ ಇದ್ದರೆ ಮಾತ್ರ ದೇಶದ ಸ್ಥಿತಿ ಸುಭದ್ರವಾಗಿರಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಮಂಗಳವಾರ ತಾಲೂಕಿನ ಚಿಗಳ್ಳಿ, ಬಾಚಣಕಿ ಹಾಗೂ ಸನವಳ್ಳಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಬಳಿಕ ಮಾತನಾಡಿದರು. ಮುಂಡಗೋಡ ತಾಲೂಕು ಬಂಗಾರದ ಭೂಮಿ ಹೊಂದಿದೆ. ಮುಂಡಗೋಡ ತಾಲೂಕು ಸಮರ್ಪಕ ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿಯ ರೈತ ಸಾಲದ ಸುಳಿಯಿಂದ ಹೊರಬರಲಾಗುತ್ತಿಲ್ಲ. ನೀರು ಸಿಕ್ಕರೆ ಬಂಗಾರದ ಬೆಳೆಯನ್ನು ಬೆಳೆಯುತ್ತಾರೆ. ಹಾಗಾಗಿ ನೀರಾವರಿ ಯೋಜನೆ ಕಲ್ಪಿಸುವ ದೃಷ್ಟಿಯಿಂದ ಬೇಡ್ತಿ ಹೊಳೆ ಮೂಲಕ ತಾಲೂಕಿನ ಸುಮಾರು ೨೦೦ಕ್ಕೂ ಅಧಿಕ ಕೆರೆಗಳನ್ನು ತುಂಬಿಸುವ ಯೋಜನೆ ಕೈಗೊಳ್ಳಲಾಗಿದ್ದು, ಅದು ಅಧಿಕೃತವಾಗಿ ಉದ್ಘಾಟನೆಗೆ ಸಿದ್ಧವಾಗಿದೆ ಎಂದರು.

ಮಳೆ ಬರಲಿ ಬಿಡಲಿ, ಬೇಡ್ತಿ ಹೊಳೆಗೆ ನೀರು ಬಂದರೆ ತಾಲೂಕಿನ ಕೆರೆಗಳು ಭರ್ತಿಯಾಗುತ್ತವೆ. ಈಗಾಗಲೇ ಶೇ. ೭೫ರಷ್ಟು ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಂದ ಉದ್ಘಾಟನೆಗೊಳ್ಳಲಿದೆ. ಈ ಯೋಜನೆಯಿಂದ ತಾಲೂಕಿನ ರೈತರು ಕೂಡ ಇತರ ಕೃಷಿಕರಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಾಮರ್ಥ್ಯ ಹೊಂದಲಿದ್ದಾರೆ. ರೈತರು ಬಿತ್ತನೆ ಮಾಡುತ್ತಾರೆ. ಮಳೆ ಕೈಕೊಟ್ಟರೆ ಪರದಾಡುತ್ತಾರೆ. ಇದು ಹಲವು ವರ್ಷಗಳ ಗೋಳು. ಇದನ್ನು ನಿರ್ಮೂಲನೆ ಮಾಡಬೇಕೆಂಬ ಉದ್ದೇಶದಿಂದ ನೀರಾವರಿ ಯೋಜನೆ ರೂಪಿಸಲಾಗಿದ್ದು, ಇನ್ನೇನು ಲೋಕಾರ್ಪಣೆಗೊಳ್ಳಲಿದೆ ಎಂದರು.ತಾಲೂಕಿನಲ್ಲಿ ೬೦೦ಕ್ಕೂ ಅಧಿಕ ರೈತರ ಕುಟುಂಬದ ಮುಖ್ಯಸ್ಥರು ಮರಣ ಹೊಂದಿದರೂ ಇಂದಿಗೂ ವಾರ್ಸಾ ಮಾಡಿಕೊಂಡಿಲ್ಲ. ಇದರಿಂದ ಬೆಳೆಸಾಲ, ಬೆಳೆವಿಮೆ, ಬೆಳೆ ಪರಿಹಾರ ಸೇರಿದಂತೆ ಸರ್ಕಾರದ ಯಾವುದೇ ಸವಲತ್ತು ಸಿಗುವುದಿಲ್ಲ. ಇದರಿಂದಾಗಿ ಮೀಟರ್ ಬಡ್ಡಿ ಸಾಲದ ಮೊರೆ ಹೋಗಬೇಕಾಗುತ್ತದೆ. ಬಳಿಕ ಸಾಲ ಪಾವತಿಸಲಾಗದೆ ಪರದಾಡುತ್ತಿರಿ. ಇದು ಬದಲಾಗಬೇಕಾದರೆ ವಾರ್ಸಾ ಮಾಡಿಕೊಳ್ಳದವರು ತಕ್ಷಣ ವಾರ್ಸಾ ಮಾಡಿಕೊಂಡು ಸರ್ಕಾರಿ ಸವಲತ್ತು ಪಡೆದುಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.

ಮಾಜಿ ಶಾಸಕ ವಿ.ಎಸ್. ಪಾಟೀಲ, ತಹಸೀಲ್ದಾರ್ ಶಂಕರ ಗೌಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ರಾಜಶೇಖರ ಹಿರೇಮಠ, ಧುರೀಣ ಕೃಷ್ಣ ಹಿರೇಹಳ್ಳಿ, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ, ಫಣಿರಾಜ ಹದಳಗಿ, ಚಿಗಳ್ಳಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಗೋಸಾವಿ, ಸಿಪಿಐ ರಂಗನಾಥ ನೀಲಮ್ಮನವರ, ಶಿವಾಜಿ ಶಿಂದೆ, ಗುಡ್ಡಪ್ಪ ಕಾತೂರ, ಎಂ.ಪಿ. ಕುಸೂರ, ಎಚ್.ಎಂ. ನಾಯ್ಕ, ಬಾಬುರಾವ್ ಲಾಡನವರ, ತಿರುಪತಿ ಭೋವಿ, ಮೋಹನ ಮುಂತಾದವರು ಉಪಸ್ಥಿತರಿದ್ದರು.