ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ದುದ್ದ ಹೋಬಳಿಯ ಚಂದಗಾಲು ಗ್ರಾಮದ ಶ್ರೀಹಿರಿಯಮ್ಮದೇವಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿ, ಮಂಡ್ಯ ಲೋಕಸಭಾ ಸದಸ್ಯ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅನುದಾನದಲ್ಲಿ 20 ಲಕ್ಷ ರು. ಬಿಡುಗಡೆ ಮಾಡಿದ್ದಾರೆ ಸಮುದಾಯ ಭವನದ ಕಾಮಗಾರಿ ಪ್ರಾರಂಭಿಸಿ, ಕೆಲಸ ನಿಲ್ಲಿಸುವುದು ಬೇಡ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಚಂದಗಾಲು ಗ್ರಾಮಕ್ಕೆ ಕರೆದುಕೊಂಡು ಬಂದು ಸ್ಥಳ ಪರಿಶೀಲಿಸಿ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದರು.

ಶ್ರೀಹಿರಿಯಮ್ಮದೇವಿ ವಿವಿಧೋದ್ದೇಶ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಿ.ಕೆ.ನಾಗರಾಜು ಮಾತನಾಡಿ, ಹಿಂದುಳಿದ ವರ್ಗದ ಜನರು ವಾಸ ಮಾಡುವ ಈ ಪ್ರದೇಶದ ವಿವಿಧ ಗ್ರಾಮಗಳ ಜನರು ಮಂಗಳ ಕಾರ್ಯ ಮಾಡಲು ಸಮುದಾಯಭವನ ಸಹಕಾರಿಯಾಗಲಿದೆ ಎಂದರು.

ಹಿರಿಯಮ್ಮ ದೇವಿ ಟ್ರಸ್ಟ್ ರಚನೆ ಮಾಡಿಕೊಂಡು ಟ್ರಸ್ಟ್ ಮೂಲಕ ಯುವಕರು, ಯುವತಿಯರು, ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ಕೊಟ್ಟು ಅವರನ್ನು ಸ್ವಾವಲಂಬಿಗಳಾಗಿ ಬದುಕಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಬಡವರು ತಮ್ಮ ಮಕ್ಕಳ ಮದುವೆಗಳನ್ನು ಮಾಡಲು ನಗರ ಪ್ರದೇಶಗಳಲ್ಲಿ ಅತಿ ಹೆಚ್ಚು ಹಣವನ್ನು ಸಮುದಾಯಭವನಗಳಿಗೆ ಕೊಡಬೇಕಾಗುತ್ತದೆ. ಆದ್ದರಿಂದ ಇಲ್ಲಿ ಸಮುದಾಯ ಭವನ ಆದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.


ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಸಿಎಸ್ಆರ್ ಅನುದಾನ ಕೊಡಿಸಿಕೊಟ್ಟು ಸಮುದಾಯಭವನ ಪೂರ್ಣಗೊಳ್ಳಲು ಪುಟ್ಟರಾಜು ಅವರು ಅತಿ ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಗ್ರಾಮದ ಮುಖಂಡರಾದ ಜವರೇಗೌಡ, ನಿಂಗೇಗೌಡ,ಚಿಕ್ಕನಾಗೇಗೌಡ, ವಕೀಲ ಚಂದಗಾಲು ಶ್ರೀಧರ್, ಜೋಗಿಗೌಡ, ಪುಟ್ಟಣ್ಣ, ತಮ್ಮಣ್ಣ, ಉಮೇಶ್,ಗಂಗಾಧರಗೌಡ, ಸೇರಿದಂತೆ ಇತರರು ಭಾಗವಹಿಸಿದ್ದರು.ಕೋಟೆ ಮಾರಮ್ಮ ದೇವಿಗೆ ಸಂಭ್ರಮದ ಪೂಜೆ

ಕಿಕ್ಕೇರಿ: ಪಟ್ಟಣದ ಮಾರಮ್ಮದೇವಿಯ ಮಾರಿಹಬ್ಬದ ಅಂಗವಾಗಿ ಸಂಭ್ರಮದಿಂದ ಭಕ್ತರು ವಿವಿಧ ಪೂಜಾ ದ್ರವ್ಯಗಳ ಮೂಲಕ ತಂಪೆರೆದರು.ಯುಗಾದಿ ಆರಂಭದ ಮುನ್ನ ನಡೆಯುವ ಸಾಲು ಸಾಲು ಹಬ್ಬದ ಮೊದಲ ಹಬ್ಬ ಮಾರಿಹಬ್ಬದ ಅಂಗವಾಗಿ ಗ್ರಾಮದ ಕೋಟೆ ಆಂಜನೇಯ, ಗಣಪತಿ ದೇಗುಲದ ಬಳಿ ಇರುವ ಮಾರಮ್ಮನ ಗುಡಿಯಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.

ಮುಂಜಾನೆಯಿಂದಲೇ ಭಕ್ತರು ದೇವಿಯ ಗುಡಿ ಬಳಿ ಆಗಮಿಸಿದ್ದರು. ದೇವಿಗೆ ಅಗ್ರಪೂಜೆಯಾಗಿ ಗಂಗಾಮತಸ್ಥ ಅರ್ಚಕರು ಧೂಪ ದೀಪದ ಆರತಿ ಬೆಳಗಿ ಚಾಲನೆ ನೀಡಿದರು. ನಂತರ ಭಕ್ತರು ದೇವಿಯನ್ನು ಪೂಜಿಸಲು ಅನುವು ಮಾಡಿಕೊಟ್ಟರು.ಮಹಿಳೆಯರು, ಮಕ್ಕಳು ಶುಚಿಭ್ರೂತರಾಗಿ ಕೈಯಲ್ಲಿ ನೀರಿನ ಕಳಸ, ಬಿಂದಿಗೆ, ಬೇವಿನ ಸೊಪ್ಪು, ಹರಳೆಣ್ಣೆ ಹಿಡಿದು ಗುಡಿಯತ್ತ ಸಾಗಿದರು. ದೇವಿಗೆ ಎಣ್ಣೆ ಹಚ್ಚಿ, ನೀರು ಎರೆದರು. ಬೇವಿನ ಸೊಪ್ಪುಇಟ್ಟು, ಹರಿಷಿಣ ಹಚ್ಚಿ ತಂಪೆರೆದರು.

ಸಂಜೆ ದೇವಿಗೆ ಪ್ರಿಯವಾದ ತಂಬಿಟ್ಟು, ಅವರೆಕಾಳು, ಅನ್ನ ಸಾಂಬಾರು ಇಟ್ಟು ನೈವೇದ್ಯ ಅರ್ಪಿಸಿದರು.