ಕನ್ನಡಪ್ರಭ ವಾರ್ತೆ ಇಂಡಿ

ಅನುಭವ, ಹಿರಿತನ, ಪಕ್ಷ ನಿಷ್ಠೆ ಹಾಗೂ ಜನಪರ ಕಾರ್ಯ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಆಗ್ರಹಿಸಿದರು.

ನ್ಯಾಯಾಲಯದ ಆವರಣದ ವಕೀಲರ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಇಂಡಿಗೆ ಸಚಿವ ಸ್ಥಾನ ಘೋಷಿಸಲು ವಿಳಂಬ ಮಾಡಿದರೆ ಜೂ.16ರಂದು ಇಂಡಿಯಲ್ಲಿ ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ವಕೀಲರ ಸಂಘದ ಕಾರ್ಯದರ್ಶಿ ಅಜೀತ ಧನಶೆಟ್ಟಿ ಮಾತನಾಡಿ, ಮೂರು ಬಾರಿ ಜಿಪಂ ಸದಸ್ಯರಾಗಿ, ಜಿಪಂ ಅಧ್ಯಕ್ಷರಾಗಿ ಹಾಗೂ ಮೂರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿ ಅಪಾರ ಆಡಳಿತ ಅನುಭವ ಮತ್ತು ಜನಸೇವೆಯ ಪರಿಪಕ್ವತೆ ಗಳಿಸಿರುವ ಶಾಸಕ ಯಶವಂತರಾಯಗೌಡ ಪಾಟೀಲರು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವ, ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಹಾಗೂ ಗಡಿನಾಡಿನ ಅಭಿವೃದ್ಧಿಯ ಕುರಿತು ಅವರ ಬದ್ಧತೆ ಸದಾ ಶ್ಲಾಘನೀಯವಾಗಿದ್ದು, ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿದರೆ ಇಂಡಿ ಮತಕ್ಷೇತ್ರ ಮತ್ತು ಜಿಲ್ಲೆ ಅಭಿವೃದ್ದಿ ಹೊಂದಲಿದೆ ಎಂದು ಹೇಳಿದರು.

ವಕೀಲ ಅಶೋಕ ಗಜಾಕೋಶ ಮಾತನಾಡಿ, ಇಂಡಿ ಭಾಗ ಸ್ವಾತಂತ್ರ್ಯಾನಂತರದಿಂದ ಇಂದಿನವರೆಗೂ ಸಚಿವ ಸ್ಥಾನದಿಂದ ವಂಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ನ್ಯಾಯದ ದೃಷ್ಟಿಯಿಂದ ಈ ಬಾರಿ ಸಚಿವ ಸಂಪುಟದಲ್ಲಿ ಇಂಡಿ ಮತಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದರು.


ವಕೀಲರಾದ ಎಸ್.ಆರ್. ಬಿರಾದಾರ, ಡಿ.ಜಿ. ಜೋತಗೊಂಡ, ಮಸಳಿ ಬಿ.ಕೆ. ಮಾತನಾಡಿ, ವಕೀಲರ ಸಂಘ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸುತ್ತಿದೆ. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಜೂ.16ರಂದು ಪ್ರತಿಭಟನೆ, ನಂತರ ಇಂಡಿ ಬಂದ್ ಕರೆ ನೀಡಲಾಗುತ್ತದೆ. ದೆಹಲಿ ವರಿಷ್ಠರ ಗಮನ ಸೆಳೆಯಲಾಗುತ್ತದೆ ಎಂದು ಹೇಳಿದರು.