ಕನ್ನಡಪ್ರಭ ವಾರ್ತೆ ಬೆಳಗಾವಿ

ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ಎಲ್ಲರಿಗೂ ಒಂದೇ ವೇಳೆ ಎಲ್ಲವೂ ಸಿಗಲು ಸಾಧ್ಯವಿಲ್ಲ. ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿ ಕೆಲಸ ಮಾಡುವುದು ಮುಖ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಕುರಿತು ಪ್ರತಿಕ್ರಿಯಿಸಿ, ಒಬ್ಬರಿಗೆ ಒಂದೇ ಹುದ್ದೆ ಎಂಬ ಪಕ್ಷದ ನೀತಿಯ ಕಾರಣದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿಲ್ಲ. ಪಕ್ಷದ ಆದೇಶವನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದರು.ಡಾ.ಜಿ.ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರಯತ್ನ ಮತ್ತು ಬೆಂಬಲ ಪ್ರಮುಖ ಕಾರಣ. ಪಕ್ಷದ ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನ ದೊರಕಿಸಲು ಸಿದ್ದರಾಮಯ್ಯ ಸದಾ ಶ್ರಮಿಸಿದ್ದಾರೆ. ಶೋಷಿತ ಸಮುದಾಯಗಳನ್ನು ಗುರಿಯಾಗಿಸುವುದು ಹೊಸದೇನಲ್ಲ. ವಿರೋಧಿಗಳು ಅವಕಾಶ ಸಿಕ್ಕಾಗಲೆಲ್ಲಾ ಅಪಪ್ರಚಾರ ನಡೆಸುತ್ತಾರೆ. ಆದರೂ ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ನಮಗೆ ಸಿಗಬೇಕಾದ ಪ್ರಾಮುಖ್ಯತೆ ಸಿಕ್ಕಿದೆ. ನಿರೀಕ್ಷೆಗೂ ಮೀರಿ ಪಕ್ಷ ನಮ್ಮನ್ನು ಪರಿಗಣಿಸಿದೆ ಎಂದು ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಕಾಂಗ್ರೆಸ್ 40 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂಬ ಎಂಎಲ್‌ಸಿ ಲಖನ್ ಜಾರಕಿಹೊಳಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದು ಲಖನ್ ಜಾರಕಿಹೊಳಿ ಅವರ ವೈಯಕ್ತಿಕ ಅಭಿಪ್ರಾಯ. ಇದೇ ರೀತಿಯ ಅಭಿಪ್ರಾಯವನ್ನು ಬಿಜೆಪಿಯ ಕೆಲ ನಾಯಕರೂ ವ್ಯಕ್ತಪಡಿಸಿದ್ದಾರೆ ಎಂದರು.ಕಾರ್ಯಕರ್ತರು ನಿರಾಶರಾಗಬೇಕಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ತಾಳ್ಮೆಯಿಂದ ಕಾಯ್ದವರಿಗೆ ಸೂಕ್ತ ಅವಕಾಶ ಸಿಕ್ಕಿರುವ ಇತಿಹಾಸವಿದೆ. ಸಮಯ ಬಂದಾಗ ಹೈಕಮಾಂಡ್ ಸೂಕ್ತ ಮನ್ನಣೆ ನೀಡಲಿದೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.ಅಹಿಂದ ನಾಯಕತ್ವದ ಕುರಿತು ಮಾತನಾಡಿದ ಸಚಿವರು, ಕೇವಲ ಅಧಿಕಾರ ಅಥವಾ ಹುದ್ದೆ ಹೊಂದಿರುವುದರಿಂದ ನಾಯಕತ್ವ ಸಾಬೀತಾಗುವುದಿಲ್ಲ. ಸಿದ್ಧಾಂತ ಮತ್ತು ಬದ್ಧತೆಯೊಂದಿಗೆ ಜನರ ಪರ ಕೆಲಸ ಮಾಡಿದಾಗ ಮಾತ್ರ ನಿಜವಾದ ಜನನಾಯಕರಾಗಿ ಬೆಳೆಯಲು ಸಾಧ್ಯ ಎಂದ ಅವರು, ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡುವ ಕುರಿತು ಪಕ್ಷದ ವರಿಷ್ಠರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಅದರ ರಾಜಕೀಯ ಪ್ರಾತಿನಿಧ್ಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ದೊರೆಯುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.ಬೆಳಗಾವಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳಿನಿಂದ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು. ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯ ಪರವಾನಗಿ ರದ್ದಾದ ಹಿನ್ನೆಲೆಯಲ್ಲಿ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಡೇ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಶಾಶ್ವತ ಪರಿಹಾರಕ್ಕಾಗಿ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.ಸಿಎಂ ಪೂಜೆ, ಪುನಸ್ಕಾರ ವೈಯಕ್ತಿಕ ವಿಚಾರ:

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಜ್ಯೋತಿಷ್ಯ ಕೇಳುವುದು ಅಥವಾ ಪೂಜೆ-ಪುನಸ್ಕಾರ ನಡೆಸುವುದು ಅವರ ವೈಯಕ್ತಿಕ ವಿಚಾರ. ಅದಕ್ಕೆ ನಮ್ಮ ಯಾವುದೇ ಸಂಬಂಧವಿಲ್ಲ. ರಾಜ್ಯದ ಅಭಿವೃದ್ಧಿ, ಜನರ ಕಲ್ಯಾಣ ಮತ್ತು ಪಕ್ಷದ ಸಂಘಟನೆ ಮುಖ್ಯ. 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದೇ ನಮ್ಮ ಗುರಿ ಎಂದು ಹೇಳಿದರು.ಭವ್ಯ ಸ್ವಾಗತ, ಸತ್ಕಾರ:


ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಅವರಿಗೆ ಜಿಲ್ಲೆಯ ಗಡಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಜಿಲ್ಲೆಯ ಪ್ರಮುಖ ಮುಖಂಡರು ಸಚಿವರನ್ನು ಸತ್ಕರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಮುಖಂಡರು, ಕಾರ್ಯಕರ್ತರು ಹಾಗೂ ನೂರಾರು ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.