ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಮತ್ತು ಕನ್ನಡಕ್ಕಾಗಿ ಎಂತಹ ಹೋರಾಟಕ್ಕೂ ನಾವು ಸಿದ್ಧ. ಅಗತ್ಯ ಬಂದರೇ ಪ್ರಾಣತ್ಯಾಗಕ್ಕೂ ಹಿಂದೆ ಸರಿಯುವುದಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಇತಿಹಾಸದ ಸತ್ಯ. ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ಖಡಕ್ ಸಂದೇಶ ನೀಡಿದರು.

ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಸೋಮವಾರ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಅಂಗೀಕಾರ ಮಾಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಶ್ರೀಮಠದ ಸಂಪೂರ್ಣ ಬೆಂಬಲ ಘೋಷಿಸಿದರು.ನಾಡಿನ ಗಡಿ, ನೆಲ ಮತ್ತು ಜಲದ ಪ್ರಶ್ನೆಯಲ್ಲಿ ಯಾವುದೇ ರಾಜೀ ಇಲ್ಲ. ಬೆಳಗಾವಿ ಕರ್ನಾಟಕದಲ್ಲೇ ಉಳಿಯಲು ಲಿಂಗೈಕ್ಯ ಶಿವಬಸವ ಸ್ವಾಮೀಜಿಯವರು ನಡೆಸಿದ ಹೋರಾಟವನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಶಿವಬಸವ ಶ್ರೀಗಳು ಬೆಳಗಾವಿಗೆ ಬಾರದೆ ಇದ್ದಿದ್ದರೆ ಇಂದಿನ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು. ಅವರು ಮರಾಠಿ ಪುಂಡರಿಂದ ಅನುಭವಿಸಿದ ನೋವು, ಅವಮಾನ ಮತ್ತು ಹೋರಾಟದ ದಿನಗಳು ಇಂದಿಗೂ ಇತಿಹಾಸದ ಭಾಗವಾಗಿವೆ ಎಂದು ಶ್ರೀಗಳು ಸ್ಮರಿಸಿದರು.

ಸೂರ್ಯ-ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ್ದೇ:


ಬೆಳಗಾವಿ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದು ಇವತ್ತಿನ ವಿಚಾರವಲ್ಲ. ಸೂರ್ಯ-ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ್ದೇ ಆಗಿರುತ್ತದೆ ಎಂದು ಶ್ರೀಗಳು ಘೋಷಿಸಿದರು.ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟದಲ್ಲಿ ಯಾವುದೇ ವೈಯಕ್ತಿಕ ಸ್ವಾರ್ಥ ಇಲ್ಲ. ಮುಂದಿನ ದಿನಗಳಲ್ಲಿ ಗಡಿ ವಿಚಾರದಲ್ಲಿ ಎದುರಾಗಬಹುದಾದ ಅನಾಹುತಗಳನ್ನು ತಡೆಯುವ ಉದ್ದೇಶದಿಂದಲೇ ಈ ಹೋರಾಟ ನಡೆಯುತ್ತಿದೆ. ಕನ್ನಡಿಗರೇ ಅಧಿಕಾರದಲ್ಲಿರುವ ಮಹಾನಗರ ಪಾಲಿಕೆಯಲ್ಲಿ ಒಂದು ಸಾಲಿನ ನಿರ್ಣಯ ಅಂಗೀಕಾರವಾಗದೇ ಇರುವುದು ಅಚ್ಚರಿಯ ಸಂಗತಿ ಎಂದು ಅವರು ಪ್ರಶ್ನಿಸಿದರು.

ನಾಗನೂರು ಮಠ ಕೇವಲ ಧಾರ್ಮಿಕ ಕೇಂದ್ರವಲ್ಲ. ಬೆಳಗಾವಿಯ ಕನ್ನಡ ಅಸ್ತಿತ್ವದ ಹೋರಾಟಕ್ಕೆ ಶಕ್ತಿ ತುಂಬಿದ ಚಳವಳಿಯ ಕೇಂದ್ರವಾಗಿದೆ. ಗಡಿ ಹೋರಾಟದ ದಿನಗಳಲ್ಲಿ ಮಠದ ಪೂಜ್ಯರು ಹಾಗೂ ಪ್ರಸಾದ ನಿಲಯದ ವಿದ್ಯಾರ್ಥಿಗಳು ಅನುಭವಿಸಿದ ಕಷ್ಟಗಳು ಇಂದಿಗೂ ನೆನಪಿನಲ್ಲಿವೆ. ಆ ತ್ಯಾಗ ಮತ್ತು ಹೋರಾಟದ ಫಲವಾಗಿ ಬೆಳಗಾವಿ ಇಂದು ಕರ್ನಾಟಕದ ಭಾಗವಾಗಿ ಉಳಿದಿದೆ. ಅಂದು ಪಾಲಿಕೆಯಲ್ಲಿ ಕನ್ನಡ ಪರ ನಿರ್ಣಯಗಳು ಅಂಗೀಕಾರವಾಗಿರಲಿಲ್ಲವಾದರೆ ಇಂದಿನ ಸ್ಥಿತಿ ಬೇರೆಯಾಗುತ್ತಿತ್ತು. ಕನ್ನಡಿಗರ ಹೋರಾಟವೇ ಬೆಳಗಾವಿಯ ಅಸ್ತಿತ್ವವನ್ನು ಉಳಿಸಿದೆ ಎಂದು ತಿಳಿಸಿದರು.ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಒಂದು ಸಾಲಿನ ನಿರ್ಣಯ ಅಂಗೀಕಾರ ಮಾಡುವುದರಲ್ಲಿ ಯಾವುದೇ ತೊಂದರೆ ಇರಬಾರದು. ಆದರೆ ಅನಗತ್ಯವಾಗಿ ಈ ವಿಷಯವನ್ನು ದೊಡ್ಡದಾಗಿಸಲಾಗುತ್ತಿದೆ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇದೆ ಎಂಬ ಕಾರಣ ಹೇಳಿ ನಿರ್ಣಯವನ್ನು ಮುಂದೂಡುವುದು ಸರಿಯಲ್ಲ. ಕನ್ನಡಿಗರ ಭಾವನೆಗಳಿಗೆ ಗೌರವ ನೀಡುವ ಕೆಲಸ ಪಾಲಿಕೆಯಿಂದ ಆಗಬೇಕು. ಇಲ್ಲದಿದ್ದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಹಾಪೌರರು ಹಾಗೂ ಉಪ ಮಹಾಪೌರರೊಂದಿಗೆ ಈ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ಅವರು, ಕನ್ನಡ ಸಂಘಟನೆಗಳು ತೆಗೆದುಕೊಳ್ಳುವ ನ್ಯಾಯಯುತ ಹೋರಾಟಗಳಿಗೆ ಶ್ರೀಮಠ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರು.ಹೋರಾಟ ನಿಲ್ಲುವುದಿಲ್ಲ: ಚಂದರಗಿ

ಮಹಾಜನ್ ಆಯೋಗದ ವರದಿಯೇ ಅಂತಿಮವಾಗಿದ್ದು, ಕರ್ನಾಟಕ ವಿಧಾನಸಭೆ ಹಲವು ಬಾರಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಅಂಗೀಕರಿಸಿದೆ. ಆದರೂ ಮಹಾನಗರ ಪಾಲಿಕೆ ಇದೇ ವಿಚಾರದಲ್ಲಿ ಹಿಂದೇಟು ಹಾಕುತ್ತಿರುವುದು ಅರ್ಥವಾಗದ ಸಂಗತಿ ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಹೇಳಿದರು.ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್ 26ರಿಂದ ನಿರಂತರ ಹೋರಾಟ ನಡೆಯುತ್ತಿದೆ. ಏಪ್ರಿಲ್ 18 ಹಾಗೂ ಮೇ 13ರ ಪಾಲಿಕೆ ಸಭೆಗಳಲ್ಲೂ ನಿರ್ಣಯ ಕೈಗೊಳ್ಳದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳ ಆಕ್ರೋಶ ಹೆಚ್ಚಾಗಿದೆ. ನಿರ್ಣಯ ಅಂಗೀಕಾರವಾಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಕಿತ್ತೂರು ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇದೆ ಎಂಬ ನೆಪದಲ್ಲಿ ಪಾಲಿಕೆ ನಿರ್ಣಯದಿಂದ ಹಿಂದೆ ಸರಿಯುವುದು ಕನ್ನಡಿಗರಿಗೆ ಒಪ್ಪುವಂತಿಲ್ಲ. 2004ರಲ್ಲಿ ಗಡಿ ವಿವಾದ ಸುಪ್ರೀಂ ಕೋರ್ಟ್‌ಗೆ ಹೋದ ನಂತರವೂ ಅನೇಕ ನಿರ್ಣಯಗಳು ನಡೆದಿವೆ. ಈಗ ಮಾತ್ರ ನ್ಯಾಯಾಲಯದ ನೆಪ ಹೇಳುವುದು ಸರಿಯಲ್ಲ. ಸರ್ಕಾರ ಮತ್ತು ಪಾಲಿಕೆ ಈ ಕುರಿತು ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದರು.ಪಾಲಿಕೆಯ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ಪಾಲಿಕೆ ಸಭೆಯೊಳಗೂ ಈ ವಿಷಯದ ಹೋರಾಟ ಮುಂದುವರಿಯಲಿದೆ. ಮುಂದಿನ ಸಭೆಯಲ್ಲಿ ನಿರ್ಣಯದ ಕುರಿತು ಮತ್ತೊಮ್ಮೆ ಪ್ರಶ್ನೆ ಎತ್ತಲಾಗುವುದು ಎಂದು ಹೇಳಿದರು.ಪಾಲಿಕೆ ನಾಮನಿರ್ದೇಶಿತ ಸದಸ್ಯ ಡಾ. ದಿನೇಶ ನಾಶಿಪುಡಿ ಮಾತನಾಡಿ, ವಿಷಯದ ಬಗ್ಗೆ ಕೆಲವರಿಗೆ ತಪ್ಪು ತಿಳುವಳಿಕೆಗಳಿವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಿದರೆ ಮುಂದಿನ ಸಭೆಯಲ್ಲಿ ನಿರ್ಣಯ ಅಂಗೀಕಾರಕ್ಕೆ ದಾರಿ ಸುಗಮವಾಗಬಹುದು ಎಂದು ಅಭಿಪ್ರಾಯಪಟ್ಟರು.ಸಭೆಯಲ್ಲಿ ಕನ್ನಡ ಹೋರಾಟಗಾರರಾದ ಶ್ರೀನಿವಾಸ ತಾಳೂಕರ, ಬಲರಾಮ ಮಾಸೇನಟ್ಟಿ, ವಾಜಿದ್ ಹಿರೇಕೋಡಿ, ಸಾಹಿತಿ ನೀಲಗಂಗಾ ಚರಂತಿಮಠ ಸೇರಿದಂತೆ 20ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.