ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಒಂದು ಸಾಲಿನ ಠರಾವು ಅಂಗೀಕಾರದ ವಿಚಾರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ತೋರಿಸುತ್ತಿದ್ದ ವಿಳಂಬಕ್ಕೆ ಇದೀಗ ರಾಜಕೀಯ ಹಾಗೂ ಆಡಳಿತಾತ್ಮಕ ಒತ್ತಡ ಹೆಚ್ಚಾಗಿದೆ. ಹೀಗಾಗಿ ಮುಂದಿನ ಪಾಲಿಕೆ ಸಭೆಯಲ್ಲೇ ಈ ಠರಾವು ಮಂಡಿಸುವುದಾಗಿ ಶಾಸಕ ಆಸೀಫ್‌ ಸೇಠ್ ಘೋಷಿಸಿರುವುದು ಹೊಸ ತಿರುವು ಪಡೆದುಕೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ರಾಮರಾಜನ್, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.ಕಳೆದ ಮಹಾನಗರ ಪಾಲಿಕೆ ಸಭೆಯಲ್ಲಿ ಸರ್ಕಾರದ ನಾಮನಿರ್ದೇಶಿತ ಸದಸ್ಯ ರಮೇಶ್ ಸೊಂಟಕ್ಕಿ ಅವರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವ್ ಮಂಡಿಸಲು ಮುಂದಾಗಿದ್ದರು. ಆದರೆ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಕಾರಣ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಪಡೆಯಲು ಪತ್ರ ಬರೆಯುವಂತೆ ಮಹಾಪೌರರು ರೂಲಿಂಗ್ ನೀಡಿದ್ದರು ಎಂದು ಪಾಲಿಕೆ ಆಯುಕ್ತರು ಸಭೆಯಲ್ಲಿ ವಿವರಿಸಿದರು.ಆದರೆ, ಈ ವಿವರಣೆಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಈ ವಿಷಯವನ್ನು ಸರ್ಕಾರಕ್ಕೆ ತಳ್ಳುವ ಅಗತ್ಯವಿಲ್ಲ. ಪಾಲಿಕೆ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿಯಲ್ಲೇ ನಿರ್ಧಾರ ಕೈಗೊಳ್ಳಬಹುದು ಎಂದು ಸ್ಪಷ್ಟಪಡಿಸಿದರು. ಈ ಸಂಬಂಧ ಸರ್ಕಾರಕ್ಕೆ ಪತ್ರ ಕಳುಹಿಸಲಾಗಿದೆಯೇ ಎಂಬ ಪ್ರಶ್ನೆಗೆ ಪಾಲಿಕೆ ಆಯುಕ್ತರಿಂದ ಸ್ಪಷ್ಟ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಈ ಕುರಿತು ನನಗೆ ಅಧಿಕೃತವಾಗಿ ಪತ್ರ ಬರೆದರೆ ನಾನೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಸಭೆಯಲ್ಲಿ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ಮುಂದಿನ ಪಾಲಿಕೆ ಸಭೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವ್ ಅನ್ನು ನಾನೇ ಮಂಡಿಸುತ್ತೇನೆ ಎಂದು ಘೋಷಿಸಿದರು.ಈ ಹೇಳಿಕೆಯಿಂದ ಹಲವು ತಿಂಗಳುಗಳಿಂದ ವಿವಾದದ ಕೇಂದ್ರಬಿಂದುವಾಗಿದ್ದ ವಿಷಯ ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು, ಈ ಠರಾವ್ ಮಂಡನೆಯಾದರೆ ಎಂಇಎಸ್‌ನ ಇಬ್ಬರು ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರೂ ವಿರೋಧಿಸುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಅದೇ ವೇಳೆ, ಯಾರಾದರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರೆ ಅವರ ನಿಲುವು ಸಾರ್ವಜನಿಕವಾಗಿ ಬಹಿರಂಗವಾಗಬೇಕು. ಅಂತಹವರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಬೇಕು ಎಂದು ಕನ್ನಡ ಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಸಭೆಯಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳೂಕರ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.