ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ದ.ಕ. ಜಿಲ್ಲೆಯಾದ್ಯಂತ ಮುಸ್ಲಿಮ್ ಸಮುದಾಯದವರು ಸ್ವಯಂ ಪ್ರೇರಿತವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.ದ.ಕ. ಮತ್ತು ಉಡುಪಿ ಜಿಲ್ಲಾ ಖಾಝಿಗಳ ನೇತೃತ್ವದಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿದೆ. ದ.ಕ. ಜಿಲ್ಲೆ ಮಾತ್ರವಲ್ಲದೆ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಜನರೂ ಕೂಡ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಹಸ್ರಾರು ಮಂದಿ ಜಮಾಯಿಸುವ ನಿರೀಕ್ಷೆಯಿದ್ದು, 2 ಸಾವಿರ ಮಂದಿ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ.ಮಧ್ಯಾಹ್ನ 3 ಗಂಟೆಗೆ ಕಣ್ಣೂರು ದರ್ಗಾ ಝಿಯಾರತ್ ನಡೆಯಲಿದೆ. ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, 6:30ಕ್ಕೆ ಕಾರ್ಯಕ್ರಮ ಮುಗಿಯಲಿದೆ. ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಯಲಿದೆ ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ತಿಳಿಸಿದ್ದಾರೆ.ಸ್ವಯಂ ಪ್ರೇರಿತ ಬಂದ್:ಪ್ರತಿಭಟನೆ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಎಲ್ಲ ಮುಸಲ್ಮಾನರು ಸ್ವಯಂ ಪ್ರೇರಿತವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಯಾವುದೇ ರಾಜಕೀಯ ಪ್ರೇರಿತ ಪ್ರತಿಭಟನೆ ಅಲ್ಲ, ಪ್ರತಿಭಟನೆಯ ನಮ್ಮ ವೇದಿಕೆ ನೋಡಿದರೆ ಎಲ್ಲರಿಗೂ ಉತ್ತರ ಸಿಗಲಿದೆ ಎಂದು ಸಂಘಟಕರಲ್ಲಿ ಒಬ್ಬರಾದ ಅಶ್ರಫ್ ಕಿನಾರ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸುಗಮ ಸಂಚಾರಕ್ಕೆ ನಾವು ಪ್ರಯತ್ನ ಮಾಡಲಿದ್ದೇವೆ. ಜನದಟ್ಟಣೆ ಹೆಚ್ಚಾದಾಗ ಕೆಲವೊಮ್ಮೆ ಸ್ವಲ್ಪ ಸಮಸ್ಯೆ ಆಗುವುದು ಸಹಜ. ಆದರೂ ಯಾರಿಗೂ ಸಮಸ್ಯೆ ಆಗದಂತೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.