ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಮುಂಗಾರು ವಿಳಂಬ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸಲು ಹಾಗೂ ಸರ್ಕಾರದ ಪ್ರಮುಖ ಯೋಜನೆಗಳನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಸಭೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಶಿಕ್ಷಣ ಹಾಗೂ ಆರೋಗ್ಯ ಸೇರಿ ವಿವಿಧ ಪ್ರಮುಖ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಕಾರ್ಯದರ್ಶಿ, ಮುಂಗಾರು ವಿಳಂಬ ಮತ್ತು ಮಳೆ ಕೊರತೆಯಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಮಾರುಕಟ್ಟೆಯಲ್ಲಿ ನಕಲಿ ಬಿತ್ತನೆ ಬೀಜ ಮಾರಾಟ ಮಾಡುವವರ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಅಂತವರ ವಿರುದ್ಧ ಕೇವಲ ತಪಾಸಣೆ ನಡೆಸಿದರೆ ಸಾಲದು, ತಕ್ಷಣವೇ ಅವರ ಮಾರಾಟ ಪರವಾನಗಿಯನ್ನು (ಲೈಸನ್ಸ್) ರದ್ದುಪಡಿಸಬೇಕು. ರೈತ ಸಂಪರ್ಕ ಕೇಂದ್ರಗಳಿಗೆ ಪೂರೈಕೆಯಾಗುವ ಪ್ರತಿಯೊಂದು ಬಿತ್ತನೆ ಬೀಜಗಳನ್ನು ಕಡ್ಡಾಯವಾಗಿ ಪ್ರಯೋಗಾಲಯದ ತಪಾಸಣೆಗೆ ಒಳಪಡಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಂಡೇ ವಿತರಿಸಬೇಕು ಎಂದು ಆದೇಶಿಸಿದರು.
ಇದೇ ವೇಳೆ, ಜಾಗತಿಕ ಸನ್ನಿವೇಶಗಳಿಂದ ರಸಗೊಬ್ಬರ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರಿಗೆ ಪರ್ಯಾಯವಾಗಿ ಸಾವಯವ ಮತ್ತು ಹಸಿರೆಲೆ ಗೊಬ್ಬರ ಬಳಸಲು ಪ್ರೇರೇಪಿಸಬೇಕು ಹಾಗೂ ತಾಂತ್ರಿಕ ಯೂರಿಯಾವನ್ನು ಕೈಗಾರಿಕೆಗಳಿಗೆ ಅಕ್ರಮವಾಗಿ ಸಾಗಿಸುವುದನ್ನು ಪತ್ತೆಹಚ್ಚಲು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.ಮಾವು ಬೆಲೆ ಕುಸಿತ:ಮಾವಿನ ಬೆಲೆ ತೀವ್ರ ಕುಸಿತ ಕಂಡಿರುವುದರಿಂದ ರೈತರಿಗೆ ಅನ್ಯಾಯವಾಗಲು ಬಿಡಬಾರದು. ರೈತರ ನೆರವಿಗಾಗಿ ಕಳೆದ ಬಾರಿಯಂತೆ ಈ ವರ್ಷವೂ ತಕ್ಷಣವೇ ಬೆಲೆ ವ್ಯತ್ಯಾಸ ಪಾವತಿ ಯೋಜನೆ ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕ್ಯಾಬಿನೆಟ್ ಉಪಸಮಿತಿಯ ಮುಂದೆ ಇಟ್ಟು ಅನುಮೋದನೆ ಪಡೆದುಕೊಳ್ಳಲು ಅಗತ್ಯ ಕ್ರಮ ವಹಿಸಿ ಎಂದು ಅವರು ತಿಳಿಸಿದರು.ಶಿಕ್ಷಕರು ಬೆಳಗ್ಗೆ ಶಾಲೆಗೆ ಬಂದು ಜಿಪಿಎಸ್ ಆಧಾರಿತ ಹಾಜರಾತಿ (ಕರ್ತವ್ಯ ಆ್ಯಪ್) ದಾಖಲಿಸಿದ ನಂತರ, ಯಾವುದೇ ಕಾರಣಕ್ಕೂ ಶಾಲಾ ಅವಧಿಯಲ್ಲಿ ಆವರಣ ಬಿಟ್ಟು ಹೊರಗೆ ಹೋಗುವಂತಿಲ್ಲ. ಒಮ್ಮೆ ಅಟೆಂಡೆನ್ಸ್ ಕೊಟ್ಟಿದ್ದಾರೆ ಎಂದರೆ ಅವರು ಶಾಲೆಯ ಒಳಗೇ ಇದ್ದಾರೆ ಮತ್ತು ಕರ್ತವ್ಯದಲ್ಲಿದ್ದಾರೆ ಎಂದೇ ಅರ್ಥ. ಇದನ್ನು ಉಲ್ಲಂಘಿಸಿದರೆ ಅತ್ಯಂತ ಗಂಭೀರ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದರು.
ಆರೋಗ್ಯ ಇಲಾಖೆಯ ಪರಿಶೀಲನೆ ನಡೆಸಿದ ತುಳಸಿ ಮದ್ದಿನೇನಿ, ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ತಂತ್ರಜ್ಞಾನ ಆಧಾರಿತ ಮತ್ತು ಕಟ್ಟುನಿಟ್ಟಿನ ತಪಾಸಣೆ ನಡೆಸಲು ಆದೇಶಿಸಿದರು.ಗೃಹಲಕ್ಷ್ಮಿ ಯೋಜನೆ:
ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳನ್ನು (ಸುಮಾರು ೩,೦೭೭) ಪಟ್ಟಿಯಿಂದ ಕೈಬಿಡಲಾಗಿದ್ದು, ಮೃತರ ಹಣವನ್ನು ಸರ್ಕಾರಿ ಖಾತೆಗೆ ಮರು ಜಮಾ ಮಾಡಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಲಾಯಿತು.ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಾತಿ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಲಾಯಿತು. ಪೌರಕಾರ್ಮಿಕರು ಹಾಗೂ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಯಾವುದೇ ಪ್ರವೇಶ ಪರೀಕ್ಷೆಯಿಲ್ಲದೆ, ಸ್ಥಳೀಯ ಕೋಟಾದಡಿ ನೇರವಾಗಿ ಹಾಸ್ಟೆಲ್ ಪ್ರವೇಶ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಪ್ರಸ್ತುತ ಇರುವ ಬೇಡಿಕೆ ಹಾಗೂ ಲಭ್ಯವಿರುವ ಸೀಟುಗಳ ಆಧಾರದ ಮೇಲೆ ಪಾರದರ್ಶಕವಾಗಿ ಸೀಟು ಹಂಚಿಕೆ ಮಾಡಲು ನಿರ್ದೇಶಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗರ್, ಎಎಸ್ಪಿ ಹೆಚ್.ಪಿ.ಜಗದೀಶ್, ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಡಿಹೆಚ್‌ಓ ಡಾ.ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮೈಲಾರಪ್ಪ, ಆಯುಷ್ ಇಲಾಖೆ ಅಧಿಕಾರಿ ರಾಘವೇಂದ್ರ ಶೆಟ್ಟಿಗಾರ್ ಇದ್ದರು.