ಕನ್ನಡಪ್ರಭ ವಾರ್ತೆ ಹೊಸದುರ್ಗ
ಸರ್ವ ಸಮಾಜಗಳು ಒಗ್ಗಟ್ಟಿನಿಂದ ಸೌಹಾರ್ದತೆಯಿಂದ ಬಾಳುವುದೇ ನಿಜವಾದ ಧರ್ಮ ಹಾಗಾಗಿ ಧರ್ಮ ಪ್ರಜ್ಞೆಯನ್ನು ಹೊಂದಿರುವ ಜೈನರು ಅಹಿಂಸೆಯನ್ನೇ ಉಸಿರಾಗಿಸಿಕೊಂಡು ಬದುಕುವ ಮೂಲಕ ಸಕಲ ಜೀವಾತ್ಮರಿಗೆ ಒಳಿತನ್ನೆ ಬಯಸಿದ್ದಾರೆ ಅವರ ಜೀವನ ಶೈಲಿ ಬೇರೆ ಜಾತಿ ಧರ್ಮದವರಿಗೆ ದಾರಿದೀಪಗಳಾಗಿವೆ ಎಂದು ಕುಂಚಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಬುಧವಾರ ಸಂಜೆ ನಡೆದ 23ನೇ ವರ್ಷದ 6ನೇ ತಿಂಗಳ ಸುಜ್ಞಾನ ಸಂಗಮ ಹಾಗೂ ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬದುಕೆಂಬುದು ಪ್ರತಿಧ್ವನಿಯಂತೆ, ನಾವು ಏನನ್ನು ಕೂಗುತ್ತೇವೋ ಅದೇ ನಮಗೆ ಪ್ರತಿಧ್ವನಿಯಾಗಿ ಮರಳಿ ಕೇಳಿಸುತ್ತದೆ ಹಾಗಾಗಿ ಒಳ್ಳೆಯದನ್ನೇ ಮಾಡಿದರೆ, ಒಳ್ಳೆಯದೇ ಕೇಳಿಸುತ್ತದೆ ಕೆಡುಕನ್ನು ಮಾಡಿದರೆ ಕೆಡುಕೆ ಕೇಳಿಸುತ್ತದೆ ತನ್ನ ಧರ್ಮವನ್ನು ಅನುಸರಿಸಿ. ಪರಧರ್ಮವನ್ನು ತಿಳಿದು. ಗೌರವಿಸುವ ಮೂಲಕ ಸಮಾಜದಲ್ಲಿ ಸಹಬಾಳ್ವೆ ಮಾಡಬೇಕಾಗಿದೆ ಎಂದರು.ಜೈನ ಸಮಾಜ ಕಳೆದ 23 ವರ್ಷಗಳಿಂದ ನಮ್ಮೊಂದಿಗೆ ಅತ್ಯಂತ ಪ್ರೀತಿ ಗೌರವದೊಂದಿಗೆ ನಮ್ಮ ಶ್ರೀ ಮಠಕ್ಕೆ ನಡೆದುಕೊಳ್ಳುತ್ತಿದ್ದಾರೆ ಹಾಗೆಯೇ ನಾವು ಕೂಡ ಜೈನ ಸಮಾಜದ ಎಲ್ಲಾ ಹಾಗೂ ಹೋಗುಗಳಲ್ಲಿ ಭಾಗವಹಿಸಿ ಅವರೊಟ್ಟಿಗೆ ನಿಲ್ಲುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ ಮುಂದೆಯೂ ಜೈನ ಸಮಾಜದೊಂದಿಗೆ ಇರುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೈನ ಸಮಾಜದ ಅಧ್ಯಕ್ಷ ಎಚ್ ಡಿ.ಅದಿರಾಜಯ್ಯ ಮಾತನಾಡಿ, ಅತ್ಯಂತ ಚಿಕ್ಕ ಜೈನ ಸಮಾಜವನ್ನು ಗೌರವಿಸುವ ಮೂಲಕ ಶಾಂತವೀರ ಶ್ರೀಗಳು ನಮ್ಮೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಜೈನ ಸಮಾಜದ ಅನೇಕ ಸಂಕಷ್ಟ ಸಮಯಗಳಲ್ಲಿ ನಮ್ಮೊಟ್ಟಿಗೆ ನಿಲ್ಲುವ ಮೂಲಕ ಧೈರ್ಯ ತುಂಬಿದ್ದಾರೆ ಅವರ ಉದಾತ್ತ ಜಾತ್ಯತೀತ ನೆಲವು ಸರ್ವ ಸಮಾಜಗಳಿಗೂ ಪ್ರೇರಣೆಯಾಗಿದೆ ಎಂದರು.
ಜೈನ ಸಮಾಜದ ಮುಖಂಡ ಇ.ವಿ.ಅಜ್ಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಕಳದ ಮುನಿರಾಜ್ ರೇಂಜಾಳ್ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಬಾಹುಬಲಿ ಜೈನ್, ಬ್ರಹ್ಮಪಾಲ್ ಜೈನ್, ಇಂದ್ರಕುಮಾರ್ ಜೈನ್ ಭಾಗವಹಿಸಿದ್ದರು.
ಇದೆ ವೇಳೆ ಶ್ರೀಮತಿ ಆರ್.ಎಸ್. ಮತಮ್. ಡಾ.ಇ.ಎಸ್ ಬ್ರಹ್ಮರಾಜ್. ಎಂ.ಡಿ.ಧರಣೇಂದ್ರ. ಇ.ವಿ.ಶೀತಲ್ ಕುಮಾರ್, ಶೈಲಜಾ ಬಾಹುಬಲಿ ಅವರನ್ನು ಸನ್ಮಾನಿಸಲಾಯಿತು.ರತ್ನತ್ರಯ ಜೈನ ಮಹಿಳಾ ಸಮಾಜದವರು ಭಜನೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕುಂಚಿಟಿಗ ಸಮಾಜ. ಸಂಗಮೇಶ್ವರ ಸಮುದಾಯ ಭವನ ಸಮಿತಿ. ಸಂಗಮೇಶ್ವರ ನೌಕರರ ಸಂಘ. ಸಂಗಮೇಶ್ವರ ಯುವ ವೇದಿಕೆ. ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘ. ಶಾಂತವೀರ ಶ್ರೀ ಸೌಹಾರ್ದ ಪತ್ತಿನ ಸಹಕಾರ ಸಂಘ. ಪದಾಧಿಕಾರಿಗಳು.ಭಕ್ತರುಂದ ಭಾಗವಹಿಸಿದ್ದರು.