ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಆವಿಷ್ಕಾರಗಳಾಗಿವೆ. ಕಾಯಿಲೆಗಳಿಗೆ ಸೂಕ್ತ ಔಷಧಿಗಳನ್ನು ಕಂಡುಹಿಡಿಯಲಾಗಿದೆ. ಸಂಶೋಧನೆಯ ಪರಿಣಾಮ ಕ್ಯಾನ್ಸರ್ ರೋಗ ಕೂಡ ಈಗ ಗುಣಪಡಿಸಬಹುದಾದ ಕಾಯಿಲೆಯಾಗಿದೆ ಎಂದು ಬಿ.ವಿ.ವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಸಜ್ಜನ (ಬೇವೂರ) ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ, ಪಿ.ಎಮ್.ಎನ್.ಎಮ್ ಡೆಂಟಲ್ ಕಾಲೇಜು ಮತ್ತು ಹುಬ್ಬಳ್ಳಿಯ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಜೆಸ್ (ಎಚ್.ಸಿ.ಜಿ) ಸಹಯೋಗದಲ್ಲಿ ಆಯೋಜಿಸಲಾದ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ರೋಗ ಬರದಂತೆ ತಡೆಗಟ್ಟಲು ಜೀವನಶೈಲಿ ಮತ್ತು ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಈ ಕುರಿತು ವೈದ್ಯರು ಕೂಡಾ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಹುಬ್ಬಳ್ಳಿಯ ಎಚ್.ಸಿ.ಜಿ ಕ್ಯಾನ್ಸರ್ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕುಮಾರೇಶ್ವರ ಆಸ್ಪತ್ರೆಯಲ್ಲಿ ಎಲ್ಲ ಪ್ರಕಾರದ ಕ್ಯಾನ್ಸರ್ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ ಎಂದು ಮಾಹಿತಿ ನೀಡಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ವಿ.ವಿ ಸಂಘದ ಸದಸ್ಯ ರಾಜು ಪಾಟೀಲ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಡಾ.ನಾರಾಯಣ ಮುತಾಲಿಕ, ಡೆಂಟಲ್ ಕಾಲೇಜಿನ ಡಾ.ಕಾಶಿನಾಥ ಅರಬ್ಬಿ ಮತ್ತು ವಿವಿಧ ವಿಭಾಗಗಳ ವೈದ್ಯರು ಉಪಸ್ಥಿತರಿದ್ದರು. ಎಚ್.ಸಿ.ಜಿ ಕ್ಯಾನ್ಸರ್ ಕೇಂದ್ರದ ತಜ್ಞವೈದ್ಯ ಡಾ.ಮಿಲಿಂದ ಶೆಟ್ಟಿ, ಕುಮಾರೇಶ್ವರ ಆಸ್ಪತ್ರೆಯ ಒ.ಬಿ.ಜಿ ವಿಭಾಗದ ಡಾ.ಆಶಾಲತಾ ಮಲ್ಲಾಪೂರ, ಸರ್ಜರಿ ವಿಭಾಗದ ಡಾ.ಈಶ್ವರ ಕಲಬುರ್ಗಿ, ಇ.ಎನ್.ಟಿ ವಿಭಾಗದ ಡಾ.ಸಿ.ಎಸ್.ಹಿರೇಮಠ, ಡೆಂಟಲ್ ಕಾಲೇಜಿನ ಡಾ.ಪ್ರವೀಣ ರಾಮದುರ್ಗ, ಡಾ.ಗಂಗಾಧರ ಅಂಗಡಿ ಮತ್ತು ಡಾ.ಸಂತೋಷ ಗುಡಿ ಅವರು ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳ ಕಾಯಿಲೆ ತಪಾಸಣೆ ಮಾಡಿದರು.